ಮುಸ್ತಾಫಿಜುರ್ ಐಪಿಎಲ್​ನಿಂದ ಔಟ್; ಭಾರತದಲ್ಲಿ ಟಿ20 ವಿಶ್ವಕಪ್ ಆಡುವುದಿಲ್ಲ ಎಂದ ಬಾಂಗ್ಲಾ

Mustafizur IPL 2026 Exclusion: ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ 2026 ರಿಂದ ಹೊರಗಿಟ್ಟಿದ್ದಕ್ಕೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಆಕ್ರೋಶಗೊಂಡಿದೆ. ಭಾರತೀಯರ ಆಕ್ರೋಶದ ಕಾರಣ ಕೆಕೆಆರ್ ಮುಸ್ತಾಫಿಜುರ್ ಅವರನ್ನು ಕೈಬಿಟ್ಟಿತ್ತು. ಈ ನಿರ್ಧಾರದ ನಂತರ, ಬಾಂಗ್ಲಾದೇಶ ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸುವ ಕುರಿತು ಐಸಿಸಿ ಜೊತೆ ಚರ್ಚಿಸುವುದಾಗಿ ಹೇಳಿದೆ. ಇದು ಭಾರತ-ಬಾಂಗ್ಲಾ ಕ್ರಿಕೆಟ್ ಸಂಬಂಧದಲ್ಲಿ ದೊಡ್ಡ ವಿವಾದ ಸೃಷ್ಟಿಸಿದೆ.

ಮುಸ್ತಾಫಿಜುರ್ ಐಪಿಎಲ್​ನಿಂದ ಔಟ್; ಭಾರತದಲ್ಲಿ ಟಿ20 ವಿಶ್ವಕಪ್ ಆಡುವುದಿಲ್ಲ ಎಂದ ಬಾಂಗ್ಲಾ
Bangladesh Cricket

Updated on: Jan 03, 2026 | 9:05 PM

ಬಾಂಗ್ಲಾದೇಶದ ಎಡಗೈ ವೇಗಿ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರನ್ನು ಐಪಿಎಲ್ 2026 (IPL 2026) ರಿಂದ ಹೊರಗಿಟ್ಟಿರುವುದು ಈಗ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದೆ. ಮುಸ್ತಾಫಿಜುರ್ ಅವರನ್ನು ಐಪಿಎಲ್​ನಿಂದ ಹೊರಗಿಟ್ಟ ನಂತರ, ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ಸರಣಿಯನ್ನು ರದ್ದುಗೊಳಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇದೆಲ್ಲದರ ನಡುವೆ ಈ ವರ್ಷ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ (T20 World Cup) ಪಾಲ್ಗೊಳ್ಳಲು ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಐಸಿಸಿ ಜೊತೆ ಚರ್ಚಿಸುವುದಾಗಿ ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ಬುಲ್ ಹೇಳಿಕೆ ನೀಡಿದ್ದಾರೆ.

ಭಾರತಕ್ಕೆ ಬರುವುದಿಲ್ಲ ಬಾಂಗ್ಲಾ ತಂಡ?

ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಕೈಬಿಟ್ಟ ನಂತರ ಮಾಧ್ಯಮಗಳಿಗೆ ಮಾತನಾಡಿರುವ ಬಿಸಿಬಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ಬುಲ್, ಟಿ20 ವಿಶ್ವಕಪ್ ಬಗ್ಗೆ ಐಸಿಸಿ ಜೊತೆ ಚರ್ಚಿಸುವುದಾಗಿ ಹೇಳಿದ್ದಾರೆ. ‘ಮುಸ್ತಾಫಿಜುರ್ ರೆಹಮಾನ್ ವಿಷಯ ಹಾಗೂ ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ಭಾಗವಹಿಸುವಿಕೆಯ ಬಗ್ಗೆ ಬಿಸಿಬಿ ಐಸಿಸಿಯೊಂದಿಗೆ ಔಪಚಾರಿಕವಾಗಿ ಸಂವಹನ ನಡೆಸಲಿದೆ’ ಎಂದಿದ್ದಾರೆ. ಬಾಂಗ್ಲಾದೇಶದ ಮಾಜಿ ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಕೂಡ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಗಿಟ್ಟಿರುವ ಬಗ್ಗೆ ಹೇಳಿಕೆ ನೀಡಿದ್ದು, ‘ಭಾರತ ಐಸಿಸಿ ಕಾರ್ಯಕ್ರಮವನ್ನು ಆಯೋಜಿಸಲು ಸಂಪೂರ್ಣವಾಗಿ ಅನರ್ಹ. ಇಂತಹ ಧರ್ಮಾಂಧ ದೇಶವು ಎಂದಿಗೂ ಅಂತರರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಬಾರದು. ಬಿಸಿಸಿಐ ವಿರುದ್ಧ ಹೋರಾಡಲು ಬಾಂಗ್ಲಾ ಸರ್ಕಾರ, ಇತರ ಕ್ರಿಕೆಟ್ ಮಂಡಳಿಗಳೊಂದಿಗೆ ಮಾತನಾಡಬೇಕು. ಭಾರತವನ್ನು ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಅನರ್ಹವೆಂದು ಘೋಷಿಸಬೇಕು’ ಎಂದು ಆಸಿಫ್ ಮಹಮೂದ್ ಹೇಳಿದ್ದಾರೆ.

ಐಪಿಎಲ್​ನಿಂದ ಮುಸ್ತಾಫಿಜುರ್ ಔಟ್

ವಾಸ್ತವವಾಗಿ 2026 ರ ಐಪಿಎಲ್ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಕೆಕೆಆರ್ 9.2 ಕೋಟಿಗೆ ಖರೀದಿಸಿತ್ತು. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸಿ, ಕೆಕೆಆರ್ ಫ್ರಾಂಚೈಸಿ ವಿರುದ್ಧ ಭಾರತೀಯರು ಆಕ್ರೋಶ ಹೊರಹಾಕುತ್ತಿದ್ದರು. ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಬೇಕು, ಇಲ್ಲದಿದ್ದರೆ ಐಪಿಎಲ್ ನಡೆಯಲು ಬಿಡುವುದಿಲ್ಲ ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಅಂತಿಮವಾಗಿ ಬಿಸಿಸಿಐ, ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಕೆಕೆಆರ್​ಗೆ ಆದೇಶಿಸಿತ್ತು. ಆ ಪ್ರಕಾರ, ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಹಾಕಲಾಗಿದೆ. ಇದರಿಂದ ಕೆರಳಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ನಮ್ಮ ತಂಡ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಪ್ರಯಾಣಿಸುವ ಬಗ್ಗೆ ಐಸಿಸಿ ಬಳಿ ಮಾತನಾಡಿ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:46 pm, Sat, 3 January 26