ಇನ್ಸ್ಟಾಗ್ರಾಮ್ನಲ್ಲಿ (Instagram) ಒಂದು ಪೋಸ್ಟ್ ಹಾಕಲು ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) 11.45 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎಂಬ ಸುದ್ದಿ ನಿನ್ನೆಯಿಂದ ಸಾಕಷ್ಟು ಸದ್ದು ಮಾಡಿತ್ತು. ಆದರೆ ಇದೀಗ ಈ ಸುದ್ದಿಯನ್ನು ಅಲ್ಲಗಳೆದಿರುವ ವಿರಾಟ್ ಕೊಹ್ಲಿ, ಈ ಮಾಹಿತಿ ಎಲ್ಲ ಸುಳ್ಳು ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ವಾಸ್ತವವಾಗಿ ನಿನ್ನೆ, ಇನ್‌ಸ್ಟಾಗ್ರಾಮ್ ಶೆಡ್ಯೂಲಿಂಗ್ ಟೂಲ್ ಹೂಪರ್ ಹೆಚ್‌ಕ್ಯು ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಲು ಸೆಲೆಬ್ರೆಟಿಗಳು ಎಷ್ಟು ಶುಲ್ಕ ವಿಧಿಸುತ್ತಾರೆ ಎಂಬುದನ್ನು ವರದಿ ಮಾಡಿತ್ತು. ಈ ವರದಿಯ ಪ್ರಕಾರ, ಅಗ್ರ 19ರಲ್ಲಿ ಸ್ಥಾನ ಪಡೆದಿರುವ ವಿರಾಟ್ ಕೊಹ್ಲಿ, ಒಂದು ಇನ್ಸ್ಟಾ ಪೋಸ್ಟ್ಗೆ ಬರೋಬ್ಬರಿ 11.45 ಕೋಟಿ. ರೂ ಚಾರ್ಜ್ ಮಾಡುತ್ತಾರೆ ಎಂದು ಹೇಳಲಾಗಿತ್ತು.
ಇದೀಗ ಈ ವದಂತಿಯ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ವಿರಾಟ್ ಕೊಹ್ಲಿ, ನಾನು ಈ ಜೀವನದಲ್ಲಿ ಏನೆಲ್ಲ ಪಡೆದುಕೊಂಡಿದ್ದೇನೋ ಅದಕ್ಕೆ ಕೃತಜ್ಞನನಾಗಿದ್ದೇನೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ತಾನು ಗಳಿಸುತ್ತಿರುವ ಆದಾಯದ ಬಗ್ಗೆ ಬಂದಿರುವ ಮಾಹಿತಿ ಸತ್ಯಕ್ಕೆ ದೂರವಾದದ್ದು ಎಂದು ಬರೆದುಕೊಂಡಿದ್ದಾರೆ.
While I am grateful and indebted to all that I’ve received in life, the news that has been making rounds about my social media earnings is not true. 🙏
— Virat Kohli (@imVkohli) August 12, 2023
ಈ ವರದಿಯಲ್ಲಿ ಕೊಹ್ಲಿ ಇನ್‌ಸ್ಟಾಗ್ರಾಮ್‌ನಿಂದ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಏಷ್ಯನ್ ಎಂದು ಹೇಳಲಾಗಿದೆ. ಇದರೊಂದಿಗೆ ಇನ್‌ಸ್ಟಾಗ್ರಾಮ್‌ನಿಂದ ಅತಿ ಹೆಚ್ಚು ಆದಾಯ ಗಳಿಸುತ್ತಿರುವ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಕೊಹ್ಲಿ ಪಾತ್ರರಾಗಿದ್ದಾರೆ. ಈ ವರದಿಯ ಪ್ರಕಾರ, ಪೋರ್ಚುಗೀಸ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ಗೆ 26.75 ಕೋಟಿ ರೂ. ಚಾರ್ಜ್ ಮಾಡುತ್ತಾರೆ ಎಂದು ಬರೆಯಲಾಗಿದೆ. ಈ ಮೂಲಕ ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಆದಾಯ ಗಳಿಸುವವರ ಪೈಕಿ ರೊನಾಲ್ಡೊ ಮೊದಲ ಸ್ಥಾನದಲ್ಲಿದ್ದಾರೆ. ಹಾಗೆಯೇ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್ಗೆ 21.49 ಕೋಟಿ ರೂ. ಚಾರ್ಜ್ ಮಾಡುವ ಅರ್ಜೆಂಟೀನಾದ ಪುಟ್ಬಾಲ್ ಸ್ಟಾರ್ ಲಿಯೋನೆಲ್ ಮೆಸ್ಸಿ ಅವರು 2ನೇ ಸ್ಥಾನದಲ್ಲಿದ್ದಾರೆ. ಭಾರತೀಯರ ವಿಚಾರದಲ್ಲಿ ವಿರಾಟ್ ನಂತರ, ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ನಿಂದ 4.4 ಕೋಟಿ ರೂ. ಗಳಿಸುತ್ತಾರೆ ಎಂದು ವರದಿಯಾಗಿದೆ.
Virat Kohli: ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್ಗೆ ಕಿಂಗ್ ಕೊಹ್ಲಿ ಗಳಿಸುವ ಆದಾಯ ಇಷ್ಟೊಂದಾ..!
ಸದ್ಯ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್ ಸರಣಿ ಹಾಗೂ ಏಕದಿನ ಸರಣಿಯ ಭಾಗವಾಗಿದ್ದರು. ಆದರೆ ಏಕದಿನ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಕೊಹ್ಲಿ, ಬ್ಯಾಟಿಂಗ್ ಮಾಡಿರಲಿಲ್ಲ. ಆ ಬಳಿಕ ಉಳಿದ ಎರಡು ಪಂದ್ಯಗಳಿಂದ ಕೊಹ್ಲಿ ವಿಶ್ರಾಂತಿ ಪಡೆದಿದ್ದರು. ಇದೀಗ ಮುಂಬರುವ ಎರಡು ದೊಡ್ಡ ಟೂರ್ನಿಗಳಿಗೆ ತಯಾರಿ ನಡೆಸುತ್ತಿರುವ ಕೊಹ್ಲಿ, ಆಗಸ್ಟ್ 30ರಿಂದ ಆರಂಭವಾಗಲಿರುವ ಏಷ್ಯಾಕಪ್ನಲ್ಲಿ ಪಾಕಿಸ್ತಾನವನ್ನು ಎದುರಿಸಲು ಸಜ್ಜಾಗಿದ್ದಾರೆ. ಇದಾದ ಬಳಿಕ ಭಾರತ ಆತಿಥ್ಯ ವಹಿಸಿರುವ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಚಾಂಪಿಯನ್ ಮಾಡುವುದು ಕೊಹ್ಲಿಯ ಮುಂದಿನ ಗುರಿಯಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:56 am, Sat, 12 August 23