Namibia vs Punjab: ನಮೀಬಿಯಾ ವಿರುದ್ಧ ಗೆದ್ದು ಬೀಗಿದ ಪಂಜಾಬ್

|

Updated on: Jul 04, 2024 | 11:13 AM

Namibia vs Punjab: ಪಂಜಾಬ್ ತಂಡವು 5 ಪಂದ್ಯಗಳ ಏಕದಿನ ಸರಣಿಗಾಗಿ ನಮೀಬಿಯಾಗೆ ತೆರಳಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಪಂಜಾಬ್ ತಂಡ ಗೆಲುವು ದಾಖಲಿಸಿದೆ. ಇನ್ನು ಸರಣಿಯ ದ್ವಿತೀಯ ಏಕದಿನ ಪಂದ್ಯವು ಜುಲೈ 5 ರಂದು ನಡೆಯಲಿದ್ದು, ಈ ಪಂದ್ಯದ ಮೂಲಕ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿ ನಮೀಬಿಯಾ ತಂಡ.

Namibia vs Punjab: ನಮೀಬಿಯಾ ವಿರುದ್ಧ ಗೆದ್ದು ಬೀಗಿದ ಪಂಜಾಬ್
Namibia vs Punjab
Follow us on

ನಮೀಬಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡ ರೋಚಕ ಜಯ ಸಾಧಿಸಿದೆ. ವಿಂಡ್‌ಹೋಕ್​ನ ವಾಂಡರರ್ಸ್ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡವು ಬೌಲಿಂಗ್ ಆಯ್ದುಕೊಂಡಿತ್ತು. ಅದರಂತೆ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ತಂಡ ಉತ್ತಮ ಆರಂಭ ಪಡೆಯಲು ಸಾಧ್ಯವಾಗಿರಲಿಲ್ಲ. ಸಿದ್ಧಾರ್ಥ್ ಕೌಲ್ ಎಸೆದ ಮೊದಲ ಓವರ್​ನಲ್ಲೇ ನಾಯಕ ಮಲನ್ ಕ್ರುಗರ್ (0) ಔಟಾದರು.

ಆ ಬಳಿಕ ಗುರ್ನೂರ್ ಬ್ರಾರ್ ಎಸೆತದಲ್ಲಿ ಲೋಹಾನ್ ಲೌರೆನ್ಸ್ (2) ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಕಣಕ್ಕಿಳಿದ ಜಾನ್ ಫ್ರೈಲಿಂಕ್ 27 ರನ್ ಬಾರಿಸಿದರೆ, ಅಲೆಕ್ಸಾಂಡರ್ ಬುಸಿಂಗ್ 39 ರನ್​ಗಳ ಕೊಡುಗೆ ನೀಡಿದರು.

ಇನ್ನು ವಿಕೆಟ್ ಕೀಪರ್ ಬ್ಯಾಟರ್ ಜೀನ್-ಪಿಯರ್ ಕೋಟ್ಜೆ 74 ಎಸೆತಗಳಲ್ಲಿ 1 ಸಿಕ್ಸ್​ ಹಾಗೂ 3 ಫೋರ್​ಗಳೊಂದಿಗೆ 51 ರನ್​ ಬಾರಿಸಿದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಅಂತಿಮವಾಗಿ ನಮೀಬಿಯಾ ತಂಡವು 41.3 ಓವರ್​ಗಳಲ್ಲಿ 173 ರನ್​ಗಳಿಸಿ ಆಲೌಟ್ ಆಯಿತು.

ಪಂಜಾಬ್ ಪರ ಉತ್ತಮ ದಾಳಿ ಸಂಘಟಿಸಿದ ಸಿದ್ದಾರ್ಥ್ ಕೌಲ್ 7 ಓವರ್​ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರೆ, ನಮನ್ ಧೀರ್ 2.3 ಓವರ್​ಗಳಲ್ಲಿ 14 ರನ್ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.

ಗೆದ್ದು ಬೀಗಿದ ಪಂಜಾಬ್:

174 ರನ್​ಗಳ ಸುಲಭ ಗುರಿಯನ್ನು ಬೆನ್ನತ್ತಿದ ಪಂಜಾಬ್ ಪರ ನಾಯಕ ನಮನ್ ಧೀರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. 64 ಎಸೆತಗಳನ್ನು ಎದುರಿಸಿದ ನಮನ್ 1 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 61 ರನ್ ಕಲೆಹಾಕಿದರು.

ಇನ್ನು ಸನ್ವೀರ್ ಸಿಂಗ್ 79 ಎಸೆತಗಳಲ್ಲಿ 10 ಫೋರ್​ಗಳೊಂದಿಗೆ 70 ರನ್ ಬಾರಿಸಿ ಮಿಂಚಿದರು. ಆದರೆ ನಮನ್ ಧೀರ್ ಹಾಗೂ ಸನ್ವೀರ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ಪಂಜಾಬ್ ತಂಡವು ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತು.

ಇದಾಗ್ಯೂ 33 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 179 ರನ್​ ಬಾರಿಸುವ ಮೂಲಕ ಪಂಜಾಬ್ ತಂಡವು 3 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಪಂಬಾಜ್ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ನಮೀಬಿಯಾ ಪ್ಲೇಯಿಂಗ್ 11: ಜೀನ್-ಪಿಯರ್ ಕೋಟ್ಜೆ, ಲೋಹಾನ್ ಲೌರೆನ್ಸ್, ಜಾನ್ ಫ್ರೈಲಿಂಕ್, ಮಲನ್ ಕ್ರುಗರ್, ಅಲೆಕ್ಸಾಂಡರ್ ಬುಸಿಂಗ್-ವೋಲ್ಶೆಂಕ್, ಗೆರ್ಹಾರ್ಡ್ ಎರಾಸ್ಮಸ್, ಶಾನ್ ಫೌಚೆ, ತಂಗೇಣಿ ಲುಂಗಮೇನಿ, ಬೆನ್ ಶಿಕೊಂಗೊ, ಪೀಟರ್ ಡೇನಿಯಲ್ ಬ್ಲಿಗ್ನೌ, ಜೂನಿಯರ್ ಕರಿಯಾಟ.

ಇದನ್ನೂ ಓದಿ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಐವರು ಆಟಗಾರರು..!

ಪಂಜಾಬ್ ಪ್ಲೇಯಿಂಗ್ 11: ಪ್ರಭ್​ಸಿಮ್ರಾನ್ ಸಿಂಗ್, ಅನ್ಮೋಲ್ ಮಲ್ಹೋತ್ರಾ, ಉದಯ್ ಸಹಾರನ್, ಪುಖರಾಜ್ ಮನ್, ರಮಣ್​ದೀಪ್ ಸಿಂಗ್, ನಮನ್ ಧೀರ್, ಸನ್ವೀರ್ ಸಿಂಗ್, ಸಿದ್ದಾರ್ಥ್ ಕೌಲ್, ಹರ್ಪ್ರೀತ್ ಬ್ರಾರ್, ಗುರ್ನೂರ್ ಬ್ರಾರ್, ಜಸಿಂದರ್ ಸಿಂಗ್.