Team India: ಮುಂಜಾನೆ ಮಂಜಿನ ನಡುವೆ ಟೀಮ್ ಇಂಡಿಯಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ

Team India: ಮುಂಜಾನೆ ಮಂಜಿನ ನಡುವೆ ಟೀಮ್ ಇಂಡಿಯಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ

ಝಾಹಿರ್ ಯೂಸುಫ್
|

Updated on: Jul 04, 2024 | 12:09 PM

T20 World Cup 2024: ಟಿ20 ವಿಶ್ವಕಪ್ ಫೈನಲ್ ಪಂದ್ಯವು ಶನಿವಾರ ಮುಗಿದರೂ, ಭಾರತ ತಂಡ 4 ದಿನಗಳ ಬಳಿಕ ತವರಿಗೆ ಆಗಮಿಸಿದೆ. ಇದಕ್ಕೆ ಕಾರಣ ಬಾರ್ಬಡೋಸ್​ನಲ್ಲಿ ಕಂಡು ಬಂದ ಚಂಡಮಾರುತ. ಕೆರಿಬಿಯನ್ ದ್ವೀಪದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದರಿಂದ ವಿಮಾನ ಸೇವೆಗಳು ರದ್ದಾಗಿದ್ದವು. ಹೀಗಾಗಿ ಭಾನುವಾರ ಆಗಮಿಸಬೇಕಿದ್ದ ಭಾರತ ತಂಡ ಪ್ರಯಾಣ ವಿಳಂಬವಾಯಿತು. ಅದರಂತೆ ಬುಧವಾರ ಏರ್​ ಇಂಡಿಯಾ ವಿಮಾನದ ಮೂಲಕ ಟೀಮ್ ಇಂಡಿಯಾ ಆಟಗಾರರು ತವರಿಗೆ ಆಗಮಿಸಿದ್ದಾರೆ.

ಜೂನ್ 29 ರಂದು ನಡೆದ ಟಿ20 ವಿಶ್ವಕಪ್​ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ರೋಚಕ ಜಯ ಸಾಧಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಇದೀಗ ಭಾರತ ತಂಡವು ತವರಿಗೆ ಆಗಮಿಸಿದೆ. ಬಾರ್ಬಡೋಸ್​ನಿಂದ ಬುಧವಾರ ವಿಮಾನವೇರಿದ್ದ ಭಾರತೀಯ ಆಟಗಾರರು ಮುಂಜಾನೆ ದೆಹಲಿಗೆ ಬಂದಿಳಿದಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ಆಟಗಾರರನ್ನು ಸ್ವಾಗತಿಸಲು ಅಭಿಮಾನಿಗಳು ಮುಂಜಾನೆಯೇ ಏರ್​ಪೋರ್ಟ್​ಗೆ ಆಗಮಿಸಿದ್ದರು. ಅಲ್ಲದೆ ವಿಶ್ವ ಚಾಂಪಿಯನ್ನರನ್ನು ಘೋಷಾವಾಕ್ಯಗಳೊಂದಿಗೆ ಅದ್ಧೂರಿಯಾಗಿ ಬರಮಾಡಿಕೊಂಡರು.

ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೂಡ ವಿಮಾನ ನಿಲ್ಧಾಣದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಹೂಗುಚ್ಛ ನೀಡುವ  ಮೂಲಕ ಸ್ವಾಗತಿಸಿದರು. ಇದೀಗ ಟೀಮ್ ಇಂಡಿಯಾವನ್ನು ಬರಮಾಡಿಕೊಳ್ಳಲು ಆಗಮಿಸಿದ ಅಭಿಮಾನಿಗಳ ವಿಡಿಯೋವನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.

ಈ ವಿಡಿಯೋದಲ್ಲಿ ಮುಂಜಾನೆಯ ಮಂಜಿನ ನಡುವೆ ತಮ್ಮ ಸ್ವಾಗತಕ್ಕಾಗಿ ಆಗಮಿಸಿದ ಅಭಿಮಾನಿಗಳನ್ನು ಕಂಡು ಟೀಮ್ ಇಂಡಿಯಾ ಆಟಗಾರರು ಪುಳಕಿತರಾಗಿರುವುದನ್ನು ಕಾಣಬಹುದು. ಇದೀಗ ವಿಶ್ವ ಚಾಂಪಿಯನ್ನರನ್ನು ಅದ್ಧೂರಿಯಾಗಿ ಸ್ವಾಗತಿಸಿದ ಅಭಿಮಾನಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.