Duleep Trophy: ದ್ವಿಶತಕದಂಚಿನಲ್ಲಿ ಮುಗ್ಗರಿಸಿದ ನಾರಾಯಣ್ ಜಗದೀಸನ್
Narayan Jagadeesan Misses Double Century: 2025ರ ದುಲೀಪ್ ಟ್ರೋಫಿಯ ಸೆಮಿಫೈನಲ್‌ನಲ್ಲಿ ದಕ್ಷಿಣ ವಲಯದ ನಾರಾಯಣ್ ಜಗದೀಸನ್ ಅವರು ಅದ್ಭುತವಾದ 197 ರನ್‌ಗಳ ಇನ್ನಿಂಗ್ಸ್ ಆಡಿದರು. ದ್ವಿಶತಕದಿಂದ ಕೇವಲ 3 ರನ್‌ಗಳ ಅಂತರದಲ್ಲಿ ಅವರು ರನ್ ಔಟ್ ಆದರು. ಮೊದಲ ದಿನ ಶತಕ ಪೂರ್ಣಗೊಳಿಸಿದ ಅವರು ಎರಡನೇ ದಿನವೂ ಉತ್ತಮ ಬ್ಯಾಟಿಂಗ್ ಮಾಡಿದರು.

2025ರ ದುಲೀಪ್ ಟ್ರೋಫಿಯ (Duleep Trophy 2025) ಮೊದಲ ಸೆಮಿಫೈನಲ್ ಪಂದ್ಯ ದಕ್ಷಿಣ ವಲಯ ಮತ್ತು ಉತ್ತರ ವಲಯ (South Zone vs North Zone) ತಂಡಗಳ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ, ದಕ್ಷಿಣ ವಲಯದ ಪರ ಆಡುತ್ತಿರುವ ತಮಿಳುನಾಡು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಾರಾಯಣ್ ಜಗದೀಸನ್ (Narayan Jagadeesan) ಸ್ಮರಣೀಯ ಇನ್ನಿಂಗ್ಸ್ ಆಡಿದ್ದಾರೆ. ತಂಡದ ಪರ ಅತ್ಯಧಿಕ ರನ್‌ಗಳ ಇನ್ನಿಂಗ್ಸ್ ಆಡಿದ್ದ ಜಗದೀಸನ್ ಭರ್ಜರಿ ಶತಕ ಬಾರಿಸಿದರಾದರೂ ದ್ವಿಶತಕದಂಚಿನಲ್ಲಿ ಮುಗ್ಗರಿಸಿದರು. ಸುಲಭವಾಗಿ ದ್ವಿಶತಕ ಪೂರೈಸುವ ಸನಿಹದಲ್ಲಿ ಜಗದೀಸನ್ 197 ರನ್ಗಳಿಗೆ ವಿಕೆಟ್ ಒಪ್ಪಿಸುವ ಮೂಲಕ ಕೇವಲ 3 ರನ್ಗಳಿಂದ ದ್ವಿಶತಕ ವಂಚಿತರಾದರು.
ದ್ವಿಶತಕದಂಚಿನಲ್ಲಿ ಎಡವಿದ ಜಗದೀಸನ್
ಈ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರ ವಲಯ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ವಲಯದ ಪರ ಇನ್ನಿಂಗ್ಸ್ ಆರಂಭಿಸಿದ ನಾರಾಯಣ್ ಜಗದೀಸನ್ ಪಂದ್ಯದ ಮೊದಲ ದಿನದಂದು 184 ಎಸೆತಗಳನ್ನು ಎದುರಿಸಿ ಶತಕ ಪೂರೈಸಿದರು. ಪಂದ್ಯದ ಎರಡನೇ ದಿನವೂ ಕ್ರೀಸ್‌ನಲ್ಲಿ ನೆಲೆಯೂರಿದ ಅವರು 262 ಎಸೆತಗಳಲ್ಲಿ 159 ರನ್ ಬಾರಿಸಿದರು. ಆದರೆ 197 ರನ್‌ಗಳ ವೈಯಕ್ತಿಕ ಸ್ಕೋರ್ನಲ್ಲಿ ರನ್ ಔಟ್ ಆಗುವ ಮೂಲಕ ತಮ್ಮ ವಿಕೆಟ್ ಕಳೆದುಕೊಂಡರು. ಈ ಇನ್ನಿಂಗ್ಸ್‌ನಲ್ಲಿ ನಾರಾಯಣ್ ಜಗದೀಸನ್ ಒಟ್ಟು 352 ಎಸೆತಗಳನ್ನು ಎದುರಿಸಿ 197 ರನ್ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 16 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಸೇರಿದ್ದವು.
N. Jagadeesan departs after scoring 1⃣9⃣7⃣
South Zone's wicketkeeper-batter misses out on a double century after being run out by Nishant Sindhu on second day of the Duleep Trophy semifinal against North Zone in Bengaluru
Live Updates: https://t.co/PdbyvFhrun📸 – @photomurali1 pic.twitter.com/FIeEyTvwxA
— Sportstar (@sportstarweb) September 5, 2025
2 ದಿನಗಳಲ್ಲಿ ಇದು ಎರಡನೇ ಬಾರಿಗೆ
2025 ರ ದುಲೀಪ್ ಟ್ರೋಫಿಯ ಸೆಮಿಫೈನಲ್ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್ ದ್ವಿಶತಕದಿಂದ ವಂಚಿತರಾದ ಸತತ ಎರಡನೇ ದಿನ ಇದು. ನಾರಾಯಣ್ ಜಗದೀಸನ್ಗಿಂತ ಮೊದಲು, ರುತುರಾಜ್ ಗಾಯಕ್ವಾಡ್ ಕೂಡ ದ್ವಿಶತಕ ಪೂರ್ಣಗೊಳಿಸಲು 16 ರನ್ ಬೇಕಾಗಿದ್ದಾಗ ವಿಕೆಟ್ ಒಪ್ಪಿಸಿದರು. ಈ ಟೂರ್ನಿಯಲ್ಲಿ ಪಶ್ಚಿಮ ವಲಯ ತಂಡದ ಪರ ಆಡುತ್ತಿರುವ ರುತುರಾಜ್ ಗಾಯಕ್ವಾಡ್ ಸೆಂಟ್ರಲ್ ಝೋನ್ ವಿರುದ್ಧದ ಸೆಮಿಫೈನಲ್ನ ಮೊದಲ ಇನ್ನಿಂಗ್ಸ್‌ನಲ್ಲಿ 206 ಎಸೆತಗಳನ್ನು ಎದುರಿಸಿ 184 ರನ್ ಬಾರಿಸಿದರು. ಇದರಲ್ಲಿ 25 ಬೌಂಡರಿಗಳು ಮತ್ತು 1 ಸಿಕ್ಸರ್ ಕೂಡ ಸೇರಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:12 pm, Fri, 5 September 25
