
ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಇದಾದ ನಂತರ ಭಾರತ ಮೇ 7 ರಂದು ಪಿಒಕೆ ಮತ್ತು ಪಾಕಿಸ್ತಾನದಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿತು. ಅಂದಿನಿಂದ, ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಿದ್ದು, ಅದರ ಪರಿಣಾಮ ಕ್ರೀಡಾ ಕ್ಷೇತ್ರದ ಮೇಲೂ ಬೀರಿದೆ. ಆದರೆ ಅಭಿಮಾನಿಗಳು ಶೀಘ್ರದಲ್ಲೇ ಭಾರತ ಮತ್ತು ಪಾಕಿಸ್ತಾನದ ಇಬ್ಬರು ಸ್ಟಾರ್ ಆಟಗಾರರ ಮುಖಾಮುಖಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. 2024 ರ ಪ್ಯಾರಿಸ್ ಒಲಿಂಪಿಕ್ಸ್ ಜಾವೆಲಿನ್ ಸ್ಪರ್ಧೆಯಲ್ಲಿ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದ ಭಾರತದ ನೀರಜ್ ಚೋಪ್ರಾ (Neeraj Chopra) ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ (Arshad Nadeem) ಮತ್ತೊಮ್ಮೆ ಮುಖಾಮುಖಿಯಾಗಲು ಸಿದ್ಧರಾಗಿದ್ದಾರೆ.
ಈ ಬಾರಿ ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ಸಿಲೆಸಿಯಾ ಡೈಮಂಡ್ ಲೀಗ್ 2025 ರಲ್ಲಿ ಮುಖಾಮುಖಿಯಾಗಲಿದ್ದಾರೆ. ಈ ಸ್ಪರ್ಧೆ ಆಗಸ್ಟ್ 16 ರಂದು ಪೋಲೆಂಡ್‌ನಲ್ಲಿ ನಡೆಯಲಿದೆ. ಈ ಪಂದ್ಯವು 2024 ರ ಪ್ಯಾರಿಸ್ ಒಲಿಂಪಿಕ್ಸ್ ನಂತರ ಇಬ್ಬರು ದೈತ್ಯರ ನಡುವಿನ ಮೊದಲ ಘರ್ಷಣೆಯಾಗಲಿದೆ. ಕಳೆದ ಬಾರಿ 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನದೀಮ್ 92.97 ಮೀಟರ್ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದರೆ, ಚೋಪ್ರಾ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಈಗ ಅಭಿಮಾನಿಗಳು ಮತ್ತೊಮ್ಮೆ ಈ ಇಬ್ಬರು ದೈತ್ಯರ ನಡುವಿನ ರೋಮಾಂಚಕಾರಿ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ.
ಸಿಲೆಸಿಯಾ ಡೈಮಂಡ್ ಲೀಗ್ 2025 ರ ಅಧಿಕೃತ ಪಟ್ಟಿ ಇನ್ನೂ ಬಿಡುಗಡೆಯಾಗಿಲ್ಲ, ಆದರೆ ಈ ಇಬ್ಬರೂ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ದೃಢಪಡಿಸಿದ್ದಾರೆ. ನೀರಜ್ ಚೋಪ್ರಾ ಈ ವರ್ಷ ಉತ್ತಮ ಆರಂಭವನ್ನು ಪಡೆದಿದ್ದು, ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀಟರ್ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದರೆ, ಪ್ಯಾರಿಸ್ ಡೈಮಂಡ್ ಲೀಗ್ 2025 ರಲ್ಲಿ ಮೊದಲ ಸ್ಥಾನ ಪಡೆದರು.
ನೀರಜ್ ಚೋಪ್ರಾ ಕ್ಲಾಸಿಕ್ 2025; ಚೊಚ್ಚಲ ಆವೃತ್ತಿಯಲ್ಲಿ ಚಿನ್ನಕ್ಕೆ ಮುತ್ತಿಟ್ಟ ನೀರಜ್ ಚೋಪ್ರಾ
ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಮ್ ಇದುವರೆಗೆ 10 ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದಾರೆ. ಆದಾಗ್ಯೂ, ಅರ್ಷದ್ ನದೀಮ್ ನೀರಜ್ ಚೋಪ್ರಾ ಅವರನ್ನು ಒಮ್ಮೆ ಮಾತ್ರ ಸೋಲಿಸಲು ಸಾಧ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸಿಲೇಸಿಯಾ ಡೈಮಂಡ್ ಲೀಗ್‌ನಲ್ಲಿ ನಡೆಯುವ ಈ ಮುಖಾಮುಖಿ ಇಬ್ಬರೂ ಕ್ರೀಡಾಪಟುಗಳ ಫಾರ್ಮ್ ಮತ್ತು ಕೌಶಲ್ಯಗಳನ್ನು ಬಹಿರಂಗಪಡಿಸುತ್ತದೆ. ಅಲ್ಲದೆ ಇದು ಮುಂಬರುವ ಈವೆಂಟ್‌ಗಳಿಗೆ, ವಿಶೇಷವಾಗಿ ಟೋಕಿಯೋ ವಿಶ್ವ ಚಾಂಪಿಯನ್‌ಶಿಪ್‌ಗೆ ಮುಖ್ಯವಾಗಿರುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ