ನೇಪಾಳ ಕ್ರಿಕೆಟ್ ತಂಡವು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ನಲ್ಲಿ ಟ್ರೈನಿಂಗ್ ನಡೆಸಲಿದೆ. ಕೆನಡಾದಲ್ಲಿ ನಡೆಯಲಿರುವ ಕ್ರಿಕೆಟ್ ವಿಶ್ವಕಪ್ ಲೀಗ್ 2 ಪಂದ್ಯಗಳಿಗಾಗಿ ತಯಾರಿ ನಡೆಸಲು ಎನ್ಸಿಎಗೆ ಬರಲಿದೆ. ಇದಕ್ಕಾಗಿ ಈಗಾಗಲೇ ಬಿಸಿಸಿಐ ಅನುಮತಿ ನೀಡಿದ್ದು, ಅದರಂತೆ ಮುಂದಿನ ಎರಡು ವಾರಗಳ ಕಾಲ ನೇಪಾಳ ತಂಡವು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ.
ಕ್ರಿಕೆಟ್ ವಿಶ್ವಕಪ್ ಲೀಗ್ 2 ಪಂದ್ಯಕ್ಕೂ ಮುನ್ನ ನೇಪಾಳ ತಂಡವು ಎರಡು ವಾರಗಳ ಕಾಲ ಎನ್‌ಸಿಎಯಲ್ಲಿ ತರಬೇತಿ ಪಡೆಯಲಿದೆ. ಇದಾದ ಬಳಿಕ ನೇಪಾಳ ತಂಡವು ಕೆನಡಾ ಮತ್ತು ಒಮಾನ್‌ನೊಂದಿಗೆ ತ್ರಿಕೋನ ಸರಣಿಯನ್ನು ಆಡಲಿದ್ದಾರೆ. ನೇಪಾಳವು ಪ್ರಸ್ತುತ ಲೀಗ್ 2 ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದ್ದು, ಮುಂಬರುವ ಸರಣಿ ಮೂಲಕ ಅಂಕ ಪಟ್ಟಿಯಲ್ಲಿ ಮೇಲೇರುವ ವಿಶ್ವಾಸದಲ್ಲಿದ್ದಾರೆ.
ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2 ತಯಾರಿ ಸರಣಿಗೆ ಸಜ್ಜಾಗಲು ನೇಪಾಳ ತಂಡವು ಭಾರತಕ್ಕೆ ಹೊರಟಿದೆ. ಎರಡು ವಾರಗಳ ಕಾಲ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ತರಬೇತಿ ಪಡೆಯುವುದರಿಂದ ನಮ್ಮ ಆಟಗಾರರ ಕೌಶಲ್ಯ ಮತ್ತು ತಂತ್ರಗಳು ಮತ್ತಷ್ಟು ಅಭಿವೃಧ್ದಿಯಾಗಲಿದೆ ಎಂದು ನೇಪಾಳದ ಕ್ರಿಕೆಟ್ ಅಸೋಸಿಯೇಷನ್ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್, ದೀಪೇಂದ್ರ ಸಿಂಗ್ ಐರಿ ಮತ್ತು ಸಂದೀಪ್ ಲಮಿಚಾನೆ ಸೇರಿದಂತೆ ಕೆಲ ಆಟಗಾರರು ಇತ್ತೀಚೆಗೆ ಕೆನಡಾದಲ್ಲಿ ನಡೆದ ಗ್ಲೋಬಲ್ ಟಿ 20 ಲೀಗ್‌ನಲ್ಲಿ ಭಾಗವಹಿಸಿದ್ದರು. ಇದೀಗ ಈ ಆಟಗಾರರು ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಅದರಲ್ಲೂ ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಸ್ಥಾನ ಪಡೆಯಬೇಕಿದ್ದರೆ ನೇಪಾಳ ತಂಡವು ಕ್ರಿಕೆಟ್ ವಿಶ್ವಕಪ್ ಲೀಗ್ 2 ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ. ಡಿಸೆಂಬರ್ 2026 ರ ವೇಳೆಗೆ ಲೀಗ್ 2 ಟೇಬಲ್‌ನ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದರೆ ಮಾತ್ರ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿಗೆ ಪ್ರವೇಶ ಪಡೆಯಲಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಯ ದಾಖಲೆ ಮುರಿದ ಬೆನ್ ಸ್ಟೋಕ್ಸ್
ಹೀಗಾಗಿ ಮುಂಬರುವ ಸರಣಿಗಳು ನೇಪಾಳ ತಂಡದ ಪಾಲಿಗೆ ತುಂಬಾ ಮಹತ್ವದ್ದು. ಹೀಗಾಗಿಯೇ ಬಿಸಿಸಿಐ ಜೊತೆ ಮಾತುಕತೆ ನಡೆಸಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿನ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುಮತಿ ಕೋರಿದೆ. ಅದರಂತೆ ಇದೀಗ ನೇಪಾಳ ತಂಡವು 2 ವಾರಗಳ ಕಾಲ ಎನ್‌ಸಿಎ ನಲ್ಲಿ ಅಭ್ಯಾಸ ನಡೆಸಲಿದ್ದಾರೆ.