AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಮುಂದಾದ ತಮಿಳುನಾಡು ಸರ್ಕಾರ

ಚೆನ್ನೈನಲ್ಲಿರುವ ಚೆಪಾಕ್ (ಎಂಎ ಚಿದಂಬರಂ) ಸ್ಟೇಡಿಯಂ 1916 ರಲ್ಲಿ ನಿರ್ಮಿಸಲಾಗಿರುವುದು. ಇದರ ಹೊರತಾಗಿ ತಮಿಳುನಾಡಿನಲ್ಲಿ ಯಾವುದೇ ಹೊಸ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಿಲ್ಲ. ಇದೀಗ ದೇಶದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸುವ ಮೂಲಕ ಯುವ ಪ್ರತಿಭೆಗಳಿಗೆ ಕ್ರೀಡಾ ಮೂಲಸೌಕರ್ಯವನ್ನು ಹೆಚ್ಚಿಸಲು ಸ್ಟಾಲಿನ್ ಸರ್ಕಾರ ಮುಂದಾಗಿದೆ.

ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಮುಂದಾದ ತಮಿಳುನಾಡು ಸರ್ಕಾರ
ಸಾಂದರ್ಭಿಕ ಚಿತ್ರ
ಝಾಹಿರ್ ಯೂಸುಫ್
|

Updated on: Aug 10, 2024 | 1:06 PM

Share

ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಹೊಂದಿರುವ ಭಾರತದಲ್ಲಿ ಮತ್ತೊಂದು ಬೃಹತ್ ಕ್ರೀಡಾಂಗಣ ತಲೆ ಎತ್ತಲಿದೆ. ಅದು ಸಹ ನಮ್ಮ ರಾಜ್ಯದ ಪಕ್ಕದ ತಮಿಳುನಾಡಿನ ಕೊಯಮತ್ತೂರಿನಲ್ಲಿ ಎಂಬುದು ವಿಶೇಷ. ಹೌದು, ದೇಶದಲ್ಲೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ತಮಿಳುನಾಡು ಸರ್ಕಾರ ಮುಂದಾಗಿದೆ. ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ತಮಿಳುನಾಡು ರಾಜ್ಯ ಸರ್ಕಾರ ಟೆಂಡರ್ ಕರೆದಿದ್ದು , ಈ ಮೂಲಕ ದೇಶದಲ್ಲೇ ಅತಿ ಹೆಚ್ಚು ಆಸನ ಸಾಮರ್ಥ್ಯದ ಸೌಲಭ್ಯವನ್ನು ಹೊಂದಿರುವ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ತಮಿಳುನಾಡಿನಲ್ಲಿ ಹೊಸ ಕ್ರೀಡಾಂಗಣ ನಿರ್ಮಿಸುವ ಯೋಜನೆಯನ್ನು ಈ ವರ್ಷದ ಏಪ್ರಿಲ್‌ನಲ್ಲಿ ರಾಜ್ಯದ ಸಿಎಂ ಎಂಕೆ ಸ್ಟಾಲಿನ್ ಘೋಷಿಸಿದ್ದರು. ಇದೀಗ ಅದರ ಮೊದಲ ಹೆಜ್ಜೆ ಎಂಬಂತೆ ಸ್ಟೇಡಿಯಂ ನಿರ್ಮಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ತಮಿಳುನಾಡು ರಾಜ್ಯ ಸರ್ಕಾರ ಟೆಂಡರ್ ಕರೆದಿದೆ. ಈ ಟೆಂಡರ್ ಬಳಿಕ ಸಂಪೂರ್ಣ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.

ನೂತನ ಕ್ರಿಕೆಟ್ ಸ್ಟೇಡಿಯಂಗಾಗಿ ಕೊಯಮತ್ತೂರು ನಗರದಿಂದ 16 ಕಿಮೀ ದೂರದಲ್ಲಿ ಸ್ಥಳವನ್ನು ಮೀಸಲಿಡಲಾಗಿದೆ. ಈ ಸ್ಥಳವು ಸೇಲಂ ಮತ್ತು ಕೊಚ್ಚಿಯನ್ನು ಸಂಪರ್ಕಿಸುವ NH 544 ಹೈವೇ ಪಕ್ಕದಲ್ಲಿರುವುದು ವಿಶೇಷ. ರಾಜ್ಯ ಕಾರಾಗೃಹ ಇಲಾಖೆಯು ಅಲ್ಲಿ 200 ಎಕರೆ ಭೂಮಿಯನ್ನು ಹೊಂದಿದ್ದು, ಡಿಪಿಆರ್ ಸಿದ್ಧಪಡಿಸಿದ ನಂತರ ಅದರಲ್ಲಿ 198 ಎಕರೆಯನ್ನು ಕ್ರೀಡಾಂಗಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

ವಿಶ್ವದ ಅತೀ ದೊಡ್ಡ ಸ್ಟೇಡಿಯಂ?

ತಮಿಳುನಾಡು ಸರ್ಕಾರ ಭಾರತದಲ್ಲೇ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಮುಂದಾಗಿರುವುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಇರುವುದು ಅಹಮದಾಬಾದ್​ನಲ್ಲಿ. ನರೇಂದ್ರ ಮೋದಿ ಸ್ಟೇಡಿಯಂ ಹೆಸರಿನಲ್ಲಿ ವಿಶ್ವ ಗಮನ ಸೆಳೆದಿರುವ ಈ ವಿಶೇಷತೆಗಳನ್ನು ಗಮನಿಸುವುದಾದರೆ…

  • ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1,10,000 ಪ್ರೇಕ್ಷಕರಿಗೆ ಆಸನ ವ್ಯವಸ್ಥೆಯಿದೆ. ಹೀಗಾಗಿಯೇ ಇದನ್ನು ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಕರೆಯಲಾಗುತ್ತದೆ.
  • ಅಹಮದಾಬಾದ್‌ನ ಈ ಭವ್ಯ ಕ್ರೀಡಾಂಗಣವನ್ನು ನವೀಕರಿಸಲು ಒಟ್ಟು 800 ಕೋಟಿ ರೂ ವ್ಯಯಿಸಲಾಗಿದೆ.
  • ಒಟ್ಟು 3,000 ಕಾರುಗಳು ಮತ್ತು 10,000 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಪಾರ್ಕಿಂಗ್​ ವ್ಯವಸ್ಥೆ ಈ ಕ್ರೀಡಾಂಗಣದಲ್ಲಿದೆ.
  • ಈ ಸ್ಥಳದಲ್ಲಿ ಪೂರ್ಣ ಪ್ರಮಾಣದ ಕ್ರಿಕೆಟ್ ಅಕಾಡೆಮಿ, ಹಲವಾರು ಒಳಾಂಗಣ ಪಿಚ್‌ಗಳು ಮತ್ತು ಫುಟ್‌ಬಾಲ್, ಹಾಕಿ, ಬ್ಯಾಸ್ಕೆಟ್‌ಬಾಲ್ ಮುಂತಾದ ಇತರ ಕ್ರೀಡೆಗಳಿಗೆ ಹಲವಾರು ಸೌಲಭ್ಯಗಳಿವೆ.
  • ಪ್ರಯಾಣದ ಸುಲಭಕ್ಕಾಗಿ, ಕ್ರೀಡಾಂಗಣವನ್ನು ಅಹಮದಾಬಾದ್ ಮೆಟ್ರೊದೊಂದಿಗೆ ಸಂಪರ್ಕಿಸಲಾಗಿದೆ. ಟ್ರಾಫಿಕ್ ಜಾಮ್​ಗಳಲ್ಲಿ ಸಿಲುಕಿಕೊಳ್ಳದೆ ಅಭಿಮಾನಿಗಳು ಮೈದಾನಕ್ಕೆ ಆರಾಮವಾಗಿ ತಲುಪಬಹುದಾಗಿದೆ.
  • 55 ಕೊಠಡಿಗಳನ್ನು ಹೊಂದಿರುವ ಅಂತರ್​ನಿರ್ಮಿತ ಕ್ಲಬ್‌ಹೌಸ್ ಕ್ರೀಡಾಂಗಣದ ವೈಭವವನ್ನು ಮತ್ತಷ್ಟು ಹೆಚ್ಚಿಸುತ್ತದೆ.
  • ಕ್ಲಬ್‌ಹೌಸ್‌ನಲ್ಲಿ ಒಳಾಂಗಣ ಮತ್ತು ಹೊರಾಂಗಣ ಆಟಗಳು, ರೆಸ್ಟೋರೆಂಟ್‌ಗಳು, ವಿಐಪಿ ಮತ್ತು ಕಾರ್ಪೊರೇಟ್ ವಲಯಗಳು, ಒಲಿಂಪಿಕ್​ಗೆ ಸೂಕ್ತವಾದ ಈಜುಕೊಳ, ಜಿಮ್ ಮತ್ತು 3 ಡಿ ಪ್ರೊಜೆಕ್ಟರ್ ಥಿಯೇಟರ್ ಈ ಸ್ಟೇಡಿಯಂನಲ್ಲಿವೆ.

ಇದನ್ನೂ ಓದಿ: Dinesh Karthik: ರಾಯಲ್ಸ್ ತಂಡಕ್ಕೆ ಡಿಕೆ ಎಂಟ್ರಿ..!

ಇದೀಗ ತಮಿಳುನಾಡು ಸರ್ಕಾರವು  ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ನೂತನ ಕ್ರಿಕೆಟ್ ಕ್ರೀಡಾಂಗಣವನ್ನು ನಿರ್ಮಿಸಲು ಮುಂದಾಗಿದೆ. ಅಲ್ಲದೆ ಇದು ದೇಶದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿರಲಿದೆ ಎಂದು ಘೋಷಿಸಿದ್ದಾರೆ. ಅಂದರೆ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದೊಂದು ದಿನ ನರೇಂದ್ರ ಮೋದಿ ಸ್ಟೇಡಿಯಂ ಅನ್ನು ಮೀರಿಸಿ ಕೊಯಮತ್ತೂರಿನಲ್ಲಿ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ತಲೆ ಎತ್ತುವುದನ್ನು ಎದುರು ನೋಡಬಹುದು.