
ಪಾಕಿಸ್ತಾನದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಭರ್ಜರಿ ಜಯ ಸಾಧಿಸಿದೆ. ಕರಾಚಿಯ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಕಿವೀಸ್ ಬೌಲರ್ಗಳ ಕರಾರುವಾಕ್ ದಾಳಿ ಮುಂದೆ ಪಾಕ್ ಬ್ಯಾಟರ್ಗಳು ರನ್ಗಳಿಸಲು ಪರದಾಡಿದರು. ಪರಿಣಾಮ 54 ರನ್ ಕಲೆಹಾಕುವಷ್ಟರಲ್ಲಿ ಫಖರ್ ಝಮಾನ್ (10), ಬಾಬರ್ ಆಝಂ (29) ಹಾಗೂ ಸೌದ್ ಶಕೀಲ್ (8) ಪೆವಿಲಿಯನ್ಗೆ ಮರಳಿದರು.
ಈ ಹಂತದಲ್ಲಿ ಮೊಹಮ್ಮದ್ ರಿಝ್ವಾನ್ (46) ಹಾಗೂ ಸಲ್ಮಾನ್ ಅಘಾ (45) ಉತ್ತಮ ಜೊತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 150 ರನ್ಗಳ ಗಡಿದಾಟಿಸಿದರು. ಇದಾಗ್ಯೂ ಪಾಕಿಸ್ತಾನ್ ತಂಡ 49.3 ಓವರ್ಗಳಲ್ಲಿ 242 ರನ್ಗಳಿಗೆ ಆಲೌಟ್ ಆಯಿತು. ನ್ಯೂಝಿಲೆಂಡ್ ಪರ ವಿಲಿಯಂ ಒರೋಕ್ 4 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ ಹಾಗೂ ಮೈಕೆಲ್ ಬ್ರೇಸ್‌ವೆಲ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
50 ಓವರ್ಗಳಲ್ಲಿ 243 ರನ್ಗಳ ಸುಲಭ ಗುರಿ ಪಡೆದ ನ್ಯೂಝಿಲೆಂಡ್ ತಂಡಕ್ಕೆ ಡೆವೊನ್ ಕಾನ್ವೆ (48) ಉತ್ತಮ ಆರಂಭ ಒದಗಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೇನ್ ವಿಲಿಯಮ್ಸನ್ 34 ರನ್ ಬಾರಿಸಿದರೆ, ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಡೇರಿಲ್ ಮಿಚೆಲ್ 58 ಎಸೆತಗಳಲ್ಲಿ 57 ರನ್ ಚಚ್ಚಿದರು.
ಈ ಮೂಲಕ ನ್ಯೂಝಿಲೆಂಡ್ ತಂಡವು 45.2 ಓವರ್ಗಳಲ್ಲಿ 243 ರನ್ಗಳಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ವಿಶೇಷ ಎಂದರೆ ಫೆಬ್ರವರಿ 19 ರಿಂದ ಶುರುವಾಗಲಿರುವ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಮತ್ತು ನ್ಯೂಝಿಲೆಂಡ್ ತಂಡಗಳೇ ಮುಖಾಮುಖಿಯಾಗಲಿದೆ. ಇದೀಗ ಪ್ರಮುಖ ಟೂರ್ನಿಗೂ ಮುನ್ನ ಪಾಕ್ ತಂಡವನ್ನು ಬಗ್ಗು ಬಡಿಯುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ.
ನ್ಯೂಝಿಲೆಂಡ್ ಪ್ಲೇಯಿಂಗ್ 11: ವಿಲ್ ಯಂಗ್ , ಡೆವೊನ್ ಕಾನ್ವೇ , ಕೇನ್ ವಿಲಿಯಮ್ಸನ್ , ಡೇರಿಲ್ ಮಿಚೆಲ್ , ಟಾಮ್ ಲ್ಯಾಥಮ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ಮೈಕೆಲ್ ಬ್ರೇಸ್‌ವೆಲ್ , ಮಿಚೆಲ್ ಸ್ಯಾಂಟ್ನರ್ (ನಾಯಕ) , ನಾಥನ್ ಸ್ಮಿತ್ , ಜಾಕೋಬ್ ಡಫಿ , ವಿಲಿಯಂ ಒರೋರ್ಕ್.
ಇದನ್ನೂ ಓದಿ: ಎರಡೇ ಎರಡು ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ
ಪಾಕಿಸ್ತಾನ್ ಪ್ಲೇಯಿಂಗ್ 11: ಫಖರ್ ಝಮಾನ್ , ಬಾಬರ್ ಆಝಂ , ಸೌದ್ ಶಕೀಲ್ , ಮೊಹಮ್ಮದ್ ರಿಝ್ವಾನ್ (ನಾಯಕ) , ಸಲ್ಮಾನ್ ಅಘಾ , ತಯ್ಯಬ್ ತಾಹಿರ್ , ಖುಷ್ದಿಲ್ ಶಾ , ಫಹೀಮ್ ಅಶ್ರಫ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಅಬ್ರಾರ್ ಅಹ್ಮದ್.