- Kannada News Photo gallery Cricket photos WPL 2025: RCB's Shreyanka Patil Likely To Be Ruled Out Of WPL
WPL 2025: RCB ತಂಡದಿಂದ ಕನ್ನಡತಿ ಔಟ್
WPL 2025 Shreyanka Patil: ಟಗರು ಪುಟ್ಟಿ ಖ್ಯಾತಿಯ ಶ್ರೇಯಾಂಕಾ ಪಾಟೀಲ್ ಆರ್ಸಿಬಿ ಪರ 15 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಬ್ಯಾಟ್ ಮೂಲಕ 81 ರನ್ ಕಲೆಹಾಕಿದರೆ, ಬೌಲಿಂಗ್ನಲ್ಲಿ 19 ವಿಕೆಟ್ ಕಬಳಿಸಿದ್ದಾರೆ. ಅದರಲ್ಲೂ ಕಳೆದ ಬಾರಿ ಆರ್ಸಿಬಿ ತಂಡ ಕಪ್ ಗೆಲ್ಲುವಲ್ಲಿ ಕನ್ನಡತಿ ಶ್ರೇಯಾಂಕಾ ಕೊಡುಗೆ ಅಮೂಲ್ಯವಾದದ್ದು.
Updated on:Feb 16, 2025 | 7:35 AM

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3 ಅನ್ನು ಭರ್ಜರಿಯಾಗಿ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಗಾಯದಿಂದ ಬಳಲುತ್ತಿದ್ದು, ಹೀಗಾಗಿ ಅವರು ಈ ಬಾರಿಯ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಆರ್ಸಿಬಿ ತಂಡದ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯೆಯಾಗಿರುವ ಶ್ರೇಯಾಂಕಾ ಪಾಟೀಲ್ ಮೊದಲ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಇದಕ್ಕೆ ಕಾರಣ ಗಾಯದ ಸಮಸ್ಯೆ ಎಂದು ತಿಳಿದು ಬಂದಿದೆ. ಈ ಗಾಯದ ಸಮಸ್ಯೆಯ ಕಾರಣ ಅವರು ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ಮೊಣಕಾಲಿನ ಗಾಯದ ಸಮಸ್ಯೆಯ ಕಾರಣ ಶ್ರೇಯಾಂಕಾ ಪಾಟೀಲ್ 2024ರ ಮಹಿಳಾ ಟಿ20 ವಿಶ್ವಕಪ್ ನಂತರ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಅಲ್ಲದೆ ಆಸ್ಟ್ರೇಲಿಯಾ ಪ್ರವಾಸ ಹಾಗೂ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಗಳಿಂದಲೂ ಹೊರಗುಳಿದಿದ್ದರು. ಇದೀಗ ವುಮೆನ್ಸ್ ಪ್ರೀಮಿಯರ್ ಲೀಗ್ ಶುರುವಾದರೂ ಶ್ರೇಯಾಂಕಾ ಕಾಣಿಸಿಕೊಂಡಿಲ್ಲ.

ಇತ್ತ ಆರ್ಸಿಬಿ ತಂಡವು ವಡೋದರಾದಲ್ಲಿ ಮೊದಲ ಪಂದ್ಯವಾಡುತ್ತಿದ್ದರೆ, ಶ್ರೇಯಾಂಕಾ ಪಾಟೀಲ್ ಸೋಷಿಯಲ್ ಮೀಡಿಯಾದಲ್ಲಿ ಎದೆಗುಂದಿದೆ... ಆದರೆ ನಾನು ಮತ್ತೆ ಹಾರುತ್ತೇನೆ ಎಂಬಾರ್ಥದಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ಮುಖ್ಯ ಕಾರಣ ಅವರು ಈ ಬಾರಿಯ ಟೂರ್ನಿಯಿಂದ ಹೊರಗುಳಿಯುತ್ತಿರುವುದು ಎನ್ನಲಾಗಿದೆ.

ಇನ್ನು ಶ್ರೇಯಾಂಕಾ ಪಾಟೀಲ್ ಅವರ ಬದಲಿಯಾಗಿ ಆರ್ಸಿಬಿ ತಂಡವು ಅನುಭವಿ ಆಲ್ರೌಂಡರ್ ಸ್ನೇಹ್ ರಾಣಾ ಅವರನ್ನು ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಯಿದೆ. ಕಳೆದ ಸೀಸನ್ನಲ್ಲಿ ಗುಜರಾತ್ ಜೈಂಟ್ಸ್ ಪರ ಆಡಿದ್ದ ಸ್ನೇಹ್ ರಾಣಾ ಅವರನ್ನು ಈ ಬಾರಿ ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಆದರೆ ಆರ್ಸಿಬಿ ತಂಡದ ಮೊದಲ ಪಂದ್ಯದ ವೇಳೆ ಸ್ನೇಹ್ ರಾಣಾ ಡಗೌಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಶ್ರೇಯಾಂಕಾ ಬದಲಿಯಾಗಿ ಸ್ನೇಹ್ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿರುವ ಸಾಧ್ಯತೆ ಹೆಚ್ಚಿದೆ.
Published On - 10:53 am, Sat, 15 February 25



















