IPL 2025: ಎಲ್ ಕ್ಲಾಸಿಕೊ ಪಂದ್ಯಕ್ಕೆ ದಿನಾಂಕ ನಿಗದಿ
IPL 2025 Schedule: ಇಂಡಿಯನ್ ಪ್ರೀಮಿಯರ್ ಲೀಗ್ಗಾಗಿ ತಾತ್ಕಾಲಿಕ ವೇಳಾಪಟ್ಟಿ ಸಿದ್ಧವಾಗಿದೆ. ಈ ವೇಳಾಪಟ್ಟಿಯಂತೆ ಐಪಿಎಲ್ನ ಎಲ್ ಕ್ಲಾಸಿಕೊ ಪಂದ್ಯವು ಮಾರ್ಚ್ 23 ರಂದು ನಡೆಯಲಿದೆ. ಇಲ್ಲಿ ಎಲ್ ಕ್ಲಾಸಿಕೊ ಎಂದರೆ ಕ್ಲಾಸಿಕ್ ಪಂದ್ಯ. ಅಂದರೆ ಟೂರ್ನಿಯ ಪ್ರಬಲ ಪ್ರತಿಸ್ಪರ್ಧಿಗಳ ನಡುವಣ ಕದನವನ್ನು ಎಲ್ ಕ್ಲಾಸಿಕೊ ಎಂದು ವರ್ಣಿಸಲಾಗುತ್ತದೆ. ಅದರಂತೆ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಮ್ಯಾಚ್ ಅನ್ನು ಎಲ್ ಕ್ಲಾಸಿಕೊ ಕದನವಾಗಿ ಪರಿಗಣಿಸಲಾಗುತ್ತದೆ.
Updated on:Feb 16, 2025 | 1:41 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18 ಮಾರ್ಚ್ 22 ರಿಂದ ಶುರುವಾಗುವುದು ಬಹುತೇಕ ಖಚಿತವಾಗಿದೆ. ಈ ಬಾರಿಯ ಟೂರ್ನಿಯು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಶುರುವಾಗಲಿದ್ದು, ಫೈನಲ್ ಪಂದ್ಯವನ್ನು ಸಹ ಇದೇ ಸ್ಟೇಡಿಯಂನಲ್ಲಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.

ಮಾರ್ಚ್ 22 ರಂದು ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿಯಾಗಲಿದೆ. ಈ ಪಂದ್ಯದೊಂದಿಗೆ ಐಪಿಎಲ್ ಅಭಿಯಾನ ಆರಂಭವಾಗಲಿದೆ.

ಇನ್ನು ಕಳೆದ ಬಾರಿಯ ರನ್ನರ್ ಅಪ್ ತಂಡವು ಮಾರ್ಚ್ 23 ರಂದು ಕಣಕ್ಕಿಳಿಯಲು ನಿರ್ಧರಿಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಸಂಜೆ 3.30 ರಿಂದ ಶುರುವಾಗಲಿದೆ.

ಇನ್ನು ಐಪಿಎಲ್ನ ಎಲ್ ಕ್ಲಾಸಿಕೊ ಕದನವಾಗಿ ಗುರುತಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯವು ಮಾರ್ಚ್ 23 ರಂದೇ ನಡೆಯಲಿದೆ. ಚೆನ್ನೈನ ಚೆಪಾಕ್ ಮೈದಾನದಲ್ಲಿ ಜರುಗಲಿರುವ ಈ ಪಂದ್ಯವನ್ನು ರಾತ್ರಿ 7.30 ಕ್ಕೆ ಆಯೋಜಿಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ.

ಅದರಂತೆ ಐಪಿಎಲ್ನ ಮೊದಲೆರಡು ದಿನದಲ್ಲೇ ಆರು ಬಲಿಷ್ಠ ತಂಡಗಳು ಕಣಕ್ಕಿಳಿಯುವುದು ಖಚಿತ. ಅದರಲ್ಲೂ ಇಂಡಿಯನ್ ಪ್ರೀಮಿಯರ್ ಲೀಗ್ನ ಶ್ರೇಷ್ಠ ತಂಡಗಳೆನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಕದನವನ್ನು 2ನೇ ದಿನವೇ ವೀಕ್ಷಿಸುವ ಅವಕಾಶ ಐಪಿಎಲ್ ಪ್ರೇಮಿಗಳಿಗೆ ದೊರೆಯಲಿದೆ.
Published On - 8:04 am, Sun, 16 February 25



















