ಮೊದಲ ಪಂದ್ಯದಲ್ಲೇ 2 ಹೀನಾಯ ದಾಖಲೆಗಳಿಗೆ ಕೊರೊಳೊಡ್ಡಿದ RCB
WPL 2025 RCB: ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೆಟ್ಟ ದಾಖಲೆಗಳೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ನ ಮೂರನೇ ಸೀಸನ್ ಆರಂಭಿಸಿದೆ. ಅದು ಸಹ ಬೌಲರ್ಗಳ ಕಳಪೆ ಪ್ರದರ್ಶನದೊಂದಿಗೆ. ಇದಾಗ್ಯೂ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ನೀಡಿದ 202 ರನ್ಗಳ ಗುರಿಯನ್ನು ಬೆನ್ನತ್ತಿ ಆರ್ಸಿಬಿ ತಂಡ 6 ವಿಕೆಟ್ಗಳ ಗೆಲುವು ದಾಖಲಿಸಿದೆ.
Updated on: Feb 15, 2025 | 12:54 PM

ವುಮೆನ್ಸ್ ಪ್ರೀಮಿಯರ್ ಲೀಗ್ ಸೀಸನ್-3 ರ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನ ಹೊರತಾಗಿಯೂ ಆರ್ಸಿಬಿ ಎರಡು ಹೀನಾಯ ದಾಖಲೆಗಳಿಗೆ ಕೊರೊಳೊಡ್ಡಿದೆ. ಅದು ಕೂಡ 20 ಓವರ್ಗಳಲ್ಲಿ ಬರೋಬ್ಬರಿ 201 ರನ್ಗಳನ್ನು ಚಚ್ಚಿಸಿಕೊಳ್ಳುವ ಮೂಲಕ..!

ವಡೋದರಾದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಗುಜರಾತ್ ಜೈಂಟ್ಸ್ ತಂಡಕ್ಕೆ ಬೆತ್ ಮೂನಿ (56) ಉತ್ತಮ ಆರಂಭ ಒದಗಿಸಿದ್ದರು.

ಆ ಬಳಿಕ ಬಂದ ನಾಯಕಿ ಆಶ್ಲೀ ಗಾರ್ಡ್ನರ್ ಆರ್ಸಿಬಿ ಬೌಲರ್ಗಳ ಬೆಂಡೆತ್ತುವ ಮೂಲಕ ಸಿಕ್ಸರ್ಗಳ ಸುರಿಮಳೆಗೈದರು. ಅಲ್ಲದೆ ಕೇವಲ 37 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 79 ರನ್ ಬಾರಿಸಿದರು. ಈ ಸ್ಪೋಟಕ ಇನಿಂಗ್ಸ್ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು.

ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ 200+ ರನ್ ನೀಡಿದ ಅಪಕೀರ್ತಿಯೊಂದು ಆರ್ಸಿಬಿ ತಂಡದ ಪಾಲಾಯಿತು. WPL ಇತಿಹಾಸದಲ್ಲಿ ಕೇವಲ 6 ಬಾರಿ ಮಾತ್ರ 200+ ಸ್ಕೋರ್ ಮೂಡಿಬಂದಿದೆ. ಈ ಆರಲ್ಲಿ ಮೂರು ಬಾರಿ ಆರ್ಸಿಬಿ ತಂಡವೇ 200+ ಸ್ಕೋರ್ ಬಿಟ್ಟುಕೊಟ್ಟಿದೆ.

2023 ರ WPL ಸೀಸನ್ನಲ್ಲಿ ಆರ್ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 223 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದಾದ ಬಳಿಕ 2023 ರಲ್ಲೇ ಗುಜರಾತ್ ಜೈಂಟ್ಸ್ ತಂಡ 201 ರನ್ ಚಚ್ಚಿದ್ದರು. ಇದೀಗ ಮತ್ತೊಮ್ಮೆ ಗುಜರಾತ್ ಜೈಂಟ್ಸ್ ತಂಡವೇ 201 ರನ್ ಬಾರಿಸಿದೆ. ಇದರೊಂದಿಗೆ ಐಪಿಎಲ್ನಲ್ಲಿ ಅತ್ಯಧಿಕ ಬಾರಿ 200 ರನ್ ನೀಡಿದ ತಂಡವೆಂಬ ಅನಗತ್ಯ ದಾಖಲೆ ಆರ್ಸಿಬಿ ತಂಡದ ಪಾಲಾಗಿದೆ.

ಹಾಗೆಯೇ ವುಮೆನ್ಸ್ ಪ್ರೀಮಿಯರ್ ಲೀಗ್ ಇನಿಂಗ್ಸ್ವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸ್ ಹೊಡೆಸಿಕೊಂಡ ತಂಡವೆಂಬ ಹೀನಾಯ ದಾಖಲೆಗೂ ಆರ್ಸಿಬಿ ಕೊರೊಳೊಡ್ಡಿದೆ. 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಬೌಲರ್ಗಳು 11 ಸಿಕ್ಸ್ ಚಚ್ಚಿಸಿಕೊಂಡಿದ್ದರು. ಇದೀಗ ಮತ್ತೊಮ್ಮೆ ಗುಜರಾತ್ ಜೈಂಟ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೌಲರ್ಗಳು 10 ಸಿಕ್ಸ್ ಹೊಡೆಸಿಕೊಂಡಿದ್ದಾರೆ.

ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಇನಿಂಗ್ಸ್ವೊಂದರಲ್ಲಿ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸ್ ಹೊಡೆಸಿಕೊಂಡ ಏಕೈಕ ತಂಡವೆಂಬ ಅಪಕೀರ್ತಿಗೆ ಪಾತ್ರವಾಗಿದೆ. ಅಂದರೆ ಆರ್ಸಿಬಿ ತಂಡವನ್ನು ಹೊರತುಪಡಿಸಿ ಬೇರೆ ಯಾವುದೇ ತಂಡದ ಬೌಲರ್ಗಳು ಪಂದ್ಯವೊಂದರಲ್ಲಿ 10 ಸಿಕ್ಸ್ಗಳನ್ನು ಚಚ್ಚಿಸಿಕೊಂಡಿಲ್ಲ..!



















