ಎರಡೇ ಎರಡು ಪಂದ್ಯದಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಮ್ಯಾಥ್ಯೂ ಬ್ರೀಟ್ಝ್ಕೆ
Pakistan vs South Africa: ಕರಾಚಿಯಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ಮ್ಯಾಥ್ಯೂ ಬ್ರೀಟ್ಝ್ಕೆ 83 ರನ್ ಬಾರಿಸಿದ್ದರು. ಈ ಅರ್ಧಶತಕದ ನೆರವಿನಿಂದ ಸೌತ್ ಆಫ್ರಿಕಾ 50 ಓವರ್ಗಳಲ್ಲಿ 352 ರನ್ ಕಲೆಹಾಕಿತ್ತು. ಈ ಗುರಿಯನ್ನು 49 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಪಾಕಿಸ್ತಾನ್ ತಂಡ 6 ವಿಕೆಟ್ಗಳ ಜಯ ಸಾಧಿಸಿದೆ. ಈ ಸೋಲಿನ ಹೊರತಾಗಿಯೂ ಈ ಪಂದ್ಯದ ಮೂಲಕ ಮ್ಯಾಥ್ಯೂ ಬ್ರೀಟ್ಝ್ಕೆ ವಿಶೇಷ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
Updated on: Feb 13, 2025 | 12:54 PM

ಏಕದಿನ ಕ್ರಿಕೆಟ್ನ ಪಾದಾರ್ಪಣೆ ಪಂದ್ಯದಲ್ಲೇ 150 ರನ್ ಸಿಡಿಸಿ ವಿಶ್ವ ದಾಖಲೆ ನಿರ್ಮಿಸಿದ್ದ ಸೌತ್ ಆಫ್ರಿಕಾ ದಾಂಡಿಗ ಮ್ಯಾಥ್ಯೂ ಬ್ರೀಟ್ಝ್ಕೆ ಇದೀಗ ಮತ್ತೊಂದು ವರ್ಲ್ಡ್ ರೆಕಾರ್ಡ್ಗೆ ಕೊರೊಳೊಡ್ಡಿದ್ದಾರೆ. ಅದು ಕೂಡ 50 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

ಬುಧವಾರ (ಫೆ.12) ಕರಾಚಿಯಲ್ಲಿ ಪಾಕಿಸ್ತಾನ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ಬ್ರೀಟ್ಝ್ಕೆ 84 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 10 ಫೋರ್ಗಳೊಂದಿಗೆ 83 ರನ್ ಬಾರಿಸಿದ್ದರು. ಇದಕ್ಕೂ ಮುನ್ನ ನ್ಯೂಝಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಥ್ಯೂ 148 ಎಸೆತಗಳಲ್ಲಿ 150 ರನ್ ಚಚ್ಚಿದ್ದರು.

ಈ ಎರಡು ಇನಿಂಗ್ಸ್ಗಳ ಮೂಲಕ ಮ್ಯಾಥ್ಯೂ ಬ್ರೀಟ್ಝ್ಕೆ ಒಟ್ಟು 233 ರನ್ ಕಲೆಹಾಕಿದ್ದಾರೆ. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲೆರಡು ಪಂದ್ಯಗಳಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ಅಪರೂಪದ ದಾಖಲೆ ವೆಸ್ಟ್ ಇಂಡೀಸ್ ದಾಂಡಿಗನ ಹೆಸರಿನಲ್ಲಿತ್ತು.

1975 ರಲ್ಲಿ ವೆಸ್ಟ್ ಇಂಡೀಸ್ ಪರ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ಡೆಸ್ಮಂಡ್ ಹೇನ್ಸ್ ಮೊದಲೆರಡು ಪಂದ್ಯಗಳ ಮೂಲಕ ಒಟ್ಟು 195 ರನ್ ಬಾರಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಎರಡು ಇನಿಂಗ್ಸ್ಗಳಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದರು.

ಇದೀಗ ಚೊಚ್ಚಲ ಪಂದ್ಯದಲ್ಲಿ ಶತಕ ಹಾಗೂ ದ್ವಿತೀಯ ಮ್ಯಾಚ್ನಲ್ಲಿ ಅರ್ಧಶತಕ ಬಾರಿಸಿ ಮ್ಯಾಥ್ಯೂ ಬ್ರೀಟ್ಝ್ಕೆ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಅಲ್ಲದೆ ಮೊದಲೆರಡು ಪಂದ್ಯಗಳ ಮೂಲಕ ಏಕದಿನ ಕ್ರಿಕೆಟ್ನಲ್ಲಿ 200+ ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ಸಹ ಬ್ರೀಟ್ಝ್ಕೆ ನಿರ್ಮಿಸಿದ್ದಾರೆ.



















