ಭಾರತದ ಯಾವುದೇ ಬ್ಯಾಟರ್ಗೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಶುಭ್ಮನ್ ಗಿಲ್
Shubman Gill Record: ವಿಶ್ವದಲ್ಲಿ ಒಂದೇ ಮೈದಾನದಲ್ಲಿ ಮೂರು ಸ್ವರೂಪಗಳಲ್ಲೂ ಶತಕ ಬಾರಿಸಿರುವುದು ಕೇವಲ ಐವರು ಬ್ಯಾಟರ್ಗಳು ಮಾತ್ರ. ಈ ಪಟ್ಟಿಗೆ ಐದನೇ ದಾಂಡಿಗನಾಗಿ ಶುಭ್ಮನ್ ಗಿಲ್ ಎಂಟ್ರಿ ಕೊಟ್ಟಿದ್ದಾರೆ. ಇದಕ್ಕೂ ಮುನ್ನ ಬಾಬರ್ ಆಝಂ (ಕರಾಚಿ), ಫಾಫ್ ಡುಪ್ಲೆಸಿಸ್ (ವಾಂಡರರ್ಸ್), ಡೇವಿಡ್ ವಾರ್ನರ್ (ಅಡಿಲೇಡ್ ಓವಲ್) ಹಾಗೂ ಕ್ವಿಂಟನ್ ಡಿಕಾಕ್ (ಸೂಪರ್ಸ್ಪೋರ್ಟ್ ಪಾರ್ಕ್) ಮಾತ್ರ ಈ ಸಾಧನೆ ಮಾಡಿದ್ದರು.
Updated on:Feb 13, 2025 | 9:08 AM

ಶುಭ್ಮನ್ ಗಿಲ್ ಮತ್ತೊಂದು ಶತಕ ಸಿಡಿಸಿದ್ದಾರೆ. ಅದು ಸಹ ತಮ್ಮ ನೆಚ್ಚಿನ ಮೈದಾನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ. ಬುಧವಾರ (ಫೆ.12) ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಗಿಲ್ ಅತ್ಯಾಕರ್ಷಕ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೇ ಆಂಗ್ಲ ಬೌಲರ್ಗಳನ್ನು ದಂಡಿಸುತ್ತಾ ಸಾಗಿದ ಶುಭ್ಮನ್ 95 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಶತಕದೊಂದಿಗೆ ಒಂದೇ ಮೈದಾನದಲ್ಲಿ ಮೂರು ಸ್ವರೂಪಗಳಲ್ಲೂ ಸೆಂಚುರಿ ಸಿಡಿಸಿದ ಭಾರತದ ಮೊದಲ ಬ್ಯಾಟರ್ ಹಾಗೂ ವಿಶ್ವದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾದರು.

ಶುಭ್ಮನ್ ಗಿಲ್ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೂರು ಸ್ವರೂಪಗಳಲ್ಲೂ ಶತಕ ಸಿಡಿಸಿದ್ದಾರೆ. 2023 ರಲ್ಲಿ ನ್ಯೂಝಿಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ್ದ ಗಿಲ್, ಅದೇ ವರ್ಷ ಆಸ್ಟ್ರೇಲಿಯಾ ವಿರುದ್ಧ ಇದೇ ಮೈದಾನದಲ್ಲಿ ಟೆಸ್ಟ್ ಸೆಂಚುರಿ ಸಿಡಿಸಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ.

ಈ ಮೂಲಕ ಒಂದೇ ಮೈದಾನದಲ್ಲಿ ಮೂರು ಸ್ವರೂಪಗಳಲ್ಲೂ ಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನು ಶುಭ್ಮನ್ ಗಿಲ್ ತಮ್ಮದಾಗಿಸಿಕೊಂಡಿದ್ದಾರೆ. ವಿಶೇಷ ಎಂದರೆ ಗಿಲ್ ಇದೇ ಮೈದಾನದಲ್ಲಿ ಐಪಿಎಲ್ನಲ್ಲೂ ಮೂರು ಸೆಂಚುರಿಗಳನ್ನು ಸಿಡಿಸಿದ್ದಾರೆ.

2023 ರಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಸಿಡಿಸಿ ಮಿಂಚಿದ್ದ ಶುಭ್ಮನ್ ಗಿಲ್, 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 104 ರನ್ ಬಾರಿಸಿ ಅಬ್ಬರಿಸಿದ್ದರು. ಈ ಮೂಲಕ ಒಂದೇ ಮೈದಾನದಲ್ಲಿ ಟಿ20ಐ, ಏಕದಿನ, ಟೆಸ್ಟ್ ಹಾಗೂ ಐಪಿಎಲ್ ಶತಕ ಸಿಡಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಇನ್ನು ಶುಭ್ಮನ್ ಗಿಲ್ (112) ಬಾರಿಸಿದ ಈ ಭರ್ಜರಿ ಶತಕದ ನೆರವಿನಿಂದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 50 ಓವರ್ಗಳಲ್ಲಿ 356 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ತಂಡವು 34.2 ಓವರ್ಗಳಲ್ಲಿ 214 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು ಈ ಪಂದ್ಯದಲ್ಲಿ 142 ರನ್ಗಳ ಭರ್ಜರಿ ಜಯ ಸಾಧಿಸಿದೆ.
Published On - 9:04 am, Thu, 13 February 25
























