
ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಆತಿಥೇಯ ಜಿಂಬಾಬ್ವೆ ಹಾಗೂ ನ್ಯೂಜಿಲೆಂಡ್ (New Zealand vs Zimbabwe) ನಡುವಿನ ಎರಡು ಪಂದ್ಯಗಳ ಎರಡನೇ ಟೆಸ್ಟ್ ಪಂದ್ಯವನ್ನು ಕಿವೀಸ್ ಪಡೆ ಕೇವಲ ಮೂರೇ ದಿನಗಳಲ್ಲಿ ಗೆದ್ದುಕೊಂಡಿದೆ. ಇದರೊಂದಿಗೆ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ. ನ್ಯೂಜಿಲೆಂಡ್ ಪರ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಯುವ ವೇಗಿ ಜಕಾರಿ ಫಾಕ್ಸ್ (Zachary Fox) ದಾಳಿಗೆ ನಲುಗಿದ ಜಿಂಜಾಬ್ವೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 117 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಕಿವೀಸ್ ಎರಡನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 359 ರನ್‌ಗಳ ಭಾರಿ ಅಂತರದಿಂದ ಗೆದ್ದುಕೊಂಡಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್ ಮತ್ತು ರನ್ ವ್ಯತ್ಯಾಸದ ವಿಷಯದಲ್ಲಿ ಮೂರನೇ ಅತಿದೊಡ್ಡ ಗೆಲುವಾಗಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 125 ರನ್‌ಗಳಿಗೆ ಆಲೌಟ್ ಆಯಿತು. ಇತ್ತ ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 601 ರನ್‌ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕಿವೀಸ್ ಪರ ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್ ಹಾಗೂ ರಚಿನ್ ರವೀಂದ್ರ ಶತಕದ ಇನ್ನಿಂಗ್ಸ್ ಆಡಿದರು. ಈ ಮೂವರು ಕ್ರಮವಾಗಿ 153,150 ಹಾಗೂ 165 ರನ್‌ಗಳ ಇನ್ನಿಂಗ್ಸ್ ಆಡಿದರು.
ಆ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಜಿಂಬಾಬ್ವೆ ತಂಡ ಕೇವಲ 117 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪರ ನಿಕ್ ವೆಲ್ಚ್ ಅತ್ಯಧಿಕ 47 ರನ್‌ಗಳ ಇನ್ನಿಂಗ್ಸ್ ಆಡಿದರೆ, ನಾಯಕ ಕ್ರೇಗ್ ಇರ್ವಿನ್ 17 ರನ್‌ಗಳ ಕಾಣಿಕೆ ನೀಡಿದರು. ಉಳಿದ ಎಲ್ಲಾ ಆಟಗಾರರು ಒಂದಂಕಿಗೆ ಸುಸ್ತಾದರು. ಇತ್ತ ಕಿವೀಸ್ ಪರ ಮಾರಕ ದಾಳಿ ನಡೆಸಿದ ಜಕಾರಿ ಫಾಕ್ಸ್ ಎರಡನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದರು. ಅಲ್ಲದೆ ಈ ಪಂದ್ಯದಲ್ಲಿ ಅವರು ಕೇವಲ 75 ರನ್ ನೀಡಿ ಒಟ್ಟು 9 ವಿಕೆಟ್‌ಗಳನ್ನು ಕಬಳಿಸಿ ನ್ಯೂಜಿಲೆಂಡ್ ಪರ ಚೊಚ್ಚಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್ ಎಂಬ ದಾಖಲೆ ಬರೆದರು. ಇದಕ್ಕೂ ಮೊದಲು, ವಿಲ್ ಒ’ರೂರ್ಕ್ ಕೂಡ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್‌ಗಳನ್ನು ಕಬಳಿಸಿದ್ದರು, ಆದರೆ ಅವರು 93 ರನ್‌ಗಳನ್ನು ನೀಡಿದ್ದರು. ಇವರಲ್ಲದೆ ಮ್ಯಾಟ್ ಹೆನ್ರಿ ಮತ್ತು ಜಾಕೋಬ್ ಡಫಿ ಕೂಡ ತಲಾ 2 ವಿಕೆಟ್ ಪಡೆದರು. ಇದು ಕಿವೀಸ್ ತಂಡದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವಾದರೆ, ಇತ್ತ ಜಿಂಬಾಬ್ವೆಯ ಅತಿದೊಡ್ಡ ಸೋಲಾಯಿತು.
ZIM vs NZ: ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕ ಬಾರಿಸಿದ ನ್ಯೂಜಿಲೆಂಡ್ ಬ್ಯಾಟರ್ಸ್
ಜಕಾರಿ ಫಾಕ್ಸ್ ಅವರ ಈ ಅದ್ಭುತ ಪ್ರದರ್ಶನದಿಂದಾಗಿ , ನ್ಯೂಜಿಲೆಂಡ್ ಈ ಪಂದ್ಯವನ್ನು ಇನ್ನಿಂಗ್ಸ್ ಮತ್ತು 359 ರನ್‌ಗಳಿಂದ ಗೆದ್ದುಕೊಂಡಿತು. ಅದೇ ಸಮಯದಲ್ಲಿ, ಸರಣಿಯ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ಗೆದ್ದುಕೊಂಡಿತ್ತು. ಅಂದರೆ ನ್ಯೂಜಿಲೆಂಡ್ ತಂಡವು ಈ ಸರಣಿಯನ್ನು 2-0 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾಯಿತು . ಇದಕ್ಕೂ ಮೊದಲು, ನ್ಯೂಜಿಲೆಂಡ್ ಇಲ್ಲಿ ಟಿ20 ತ್ರಿಕೋನ ಸರಣಿಯನ್ನು ಸಹ ಗೆದ್ದಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ