ಏಕದಿನ ವಿಶ್ವಕಪ್ 2023 ಸೆಮಿಫೈನಲ್ ಹಣಾಹಣಿಗೆ ವೇದಿಕೆ ಸಿದ್ಧವಾಗಿದೆ. ಬುಧವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ನಾಕೌಟ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಫೈನಲ್ಗೇರುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಐಸಿಸಿ ಟೂರ್ನಿಗಳಲ್ಲಿ ಕಿವೀಸ್ ಪಡೆ ವಿರುದ್ಧ ಟೀಮ್ ಇಂಡಿಯಾ ವಿರುದ್ಧ ಪಾರುಪತ್ಯ ಮೆರೆಯುತ್ತಾ ಬಂದಿದೆ. 2003 ರ ಬಳಿಕ ನಡೆದ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತದ ವಿರುದ್ಧ ನ್ಯೂಝಿಲೆಂಡ್ ಮೇಲುಗೈ ಸಾಧಿಸುತ್ತಾ ಬಂದಿದೆ.
ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಕೂಡ ಟೀಮ್ ಇಂಡಿಯಾ ಪಾಲಿಗೆ ನ್ಯೂಝಿಲೆಂಡ್ ಡೇಂಜರಸ್ ಎನ್ನಬಹುದು. ಇದಾಗ್ಯೂ ಈ ಬಾರಿಯ ವಿಶ್ವಕಪ್ನ ಲೀಗ್ ಹಂತದಲ್ಲಿ ಕಿವೀಸ್ ವಿರುದ್ಧ ಟೀಮ್ ಇಂಡಿಯಾ 4 ವಿಕೆಟ್ಗಳಿಂದ ಜಯ ಸಾಧಿಸಿದೆ. ಇದು 20 ವರ್ಷಗಳ ಬಳಿಕ ಐಸಿಸಿ ಟೂರ್ನಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ಭಾರತಕ್ಕೆ ದಕ್ಕಿದ ಮೊದಲ ಗೆಲುವಾಗಿದೆ.
ಇದೇ ಆತ್ಮ ವಿಶ್ವಾಸದಲ್ಲಿ ಈ ಬಾರಿ ಕೂಡ ಟೀಮ್ ಇಂಡಿಯಾ ಕಣಕ್ಕಿಳಿಯಲಿದೆ. ಆದರೆ ಅತ್ತ 2019 ರ ವಿಶ್ವಕಪ್ ಸೆಮಿಫೈನಲ್ನಲ್ಲಿ ಭಾರತಕ್ಕೆ ಸೋಲುಣಿಸಿದ್ದ ನ್ಯೂಝಿಲೆಂಡ್ ತಂಡವು ಮತ್ತೊಮ್ಮೆ ಇತಿಹಾಸವನ್ನು ಪುನರಾವರ್ತಿಸುವ ವಿಶ್ವಾಸದಲ್ಲಿದೆ. ಹೀಗಾಗಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಣರೋಚಕ ಪೈಪೋಟಿಯನ್ನು ನಿರೀಕ್ಷಿಸಬಹುದು.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ಕುಲ್ದೀಪ್ ಯಾದವ್, ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ದಾಖಲೆಗಳ ಸರದಾರ ಕಿಂಗ್ ಕೊಹ್ಲಿ ಮುಂದಿದೆ ಮೂರು ವಿಶ್ವ ದಾಖಲೆಗಳು