
ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಸೋಲಿನ ಬೆನ್ನಲ್ಲೇ ನ್ಯೂಝಿಲೆಂಡ್ ತಂಡ ಮುಂಬರುವ ಸರಣಿಗೆ ಸಜ್ಜಾಗುತ್ತಿದೆ. ಈ ಸರಣಿಯಲ್ಲಿ ಕಿವೀಸ್ ಪಡೆಯನ್ನು ಮುನ್ನಡೆಸುತ್ತಿರುವುದು ಮೈಕೆಲ್ ಬ್ರೇಸ್‌ವೆಲ್ ಎಂಬುದು ವಿಶೇಷ. ಅಂದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಝಿಲೆಂಡ್ ತಂಡದ ನಾಯಕರಾಗಿ ಕಾಣಿಸಿಕೊಂಡಿದ್ದ ಮಿಚೆಲ್ ಸ್ಯಾಂಟ್ನರ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಮಾರ್ಚ್ 16 ರಿಂದ ಶುರುವಾಗಲಿರುವ ಈ ಸರಣಿಯಲ್ಲಿ ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಸರಣಿಯಲ್ಲಿ ಒಟ್ಟು 5 ಟಿ20 ಪಂದ್ಯಗಳು ನಡೆಯಲಿದ್ದು, ಇದಕ್ಕಾಗಿ ಆಯ್ಕೆ ಮಾಡಲಾದ ತಂಡದಲ್ಲಿ 8 ಬದಲಾವಣೆ ಮಾಡಲಾಗಿದೆ.
ಅಂದರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದ 8 ಆಟಗಾರರು ಟಿ20 ಸರಣಿಯಿಂದ ಹೊರಗುಳಿದಿದ್ದಾರೆ. ಇಲ್ಲಿ ನಾಯಕ ಮಿಚೆಲ್ ಸ್ಯಾಂಟ್ನರ್ ಅಲ್ಲದೆ, ಟಾಮ್ ಲ್ಯಾಥಮ್, ಕೇನ್ ವಿಲಿಯಮ್ಸನ್, ರಚಿನ್ ರವೀಂದ್ರ, ಡೆವೊನ್ ಕಾನ್ವೆ, ವಿಲ್ ಯಂಗ್, ನಾಥನ್ ಸ್ಮಿತ್ ಮತ್ತು ಜಾಕೋಬ್ ಡಫಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ನ್ಯೂಝಿಲೆಂಡ್ ತಂಡದಿಂದ 8 ಆಟಗಾರರು ಹೊರಗುಳಿದ ಕಾರಣ, ಇಶ್ ಸೋಧಿ, ಬೆನ್ ಸಿಯರ್ಸ್‌ರಂತಹ ಆಟಗಾರರು ತಂಡಕ್ಕೆ ಮರಳಿದ್ದಾರೆ. ಬೆನ್ ಸಿಯರ್ಸ್ ಅವರನ್ನು ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆ ಮಾಡಲಾಗಿದ್ದರೂ, ಪಂದ್ಯಾವಳಿ ಆರಂಭಕ್ಕೂ ಮುನ್ನ ಮಂಡಿರಜ್ಜು ಗಾಯದಿಂದಾಗಿ ಅವರನ್ನು ಹೊರಗಿಡಬೇಕಾಯಿತು. ಈಗ ಅವರು ಆ ಗಾಯದಿಂದ ಚೇತರಿಸಿಕೊಂಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಆಡಿದ್ದ ಕೈಲ್ ಜೇಮಿಸನ್ ಮತ್ತು ವಿಲ್ ಒರೋಕ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಆದರೆ ಇಬ್ಬರೂ ಟಿ20 ಸರಣಿಯ ಮೊದಲ 3 ಪಂದ್ಯಗಳಿಗೆ ಮಾತ್ರ ಲಭ್ಯವಿರುತ್ತಾರೆ. ಹಾಗೆಯೇ ಭುಜದ ಗಾಯದಿಂದಾಗಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಿಂದ ಹೊರಗುಳಿದಿದ್ದ ಮ್ಯಾಟ್ ಹೆನ್ರಿ, ನಾಲ್ಕನೇ ಮತ್ತು ಐದನೇ ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ವಿರುದ್ಧ ಆಡಲಿದ್ದಾರೆ.
ಇನ್ನು ಈ ತಂಡದಲ್ಲಿ ಫಿನ್ ಅಲೆನ್, ಜಿಮ್ಮಿ ನೀಶಮ್ ಮತ್ತು ಟಿಮ್ ಸೀಫರ್ಟ್ ಕೂಡ ಕಾಣಿಸಿಕೊಂಡಿದ್ದಾರೆ. ಇವರಲ್ಲದೆ, ಟಿಮ್ ರಾಬಿನ್ಸನ್ ಮತ್ತು ಜ್ಯಾಕ್ ಫಾಕ್ಸ್‌ಗೂ ಅವಕಾಶ ಸಿಕ್ಕಿದೆ.
ಇದನ್ನೂ ಓದಿ: Champions Trophy 2025: ಒಂದೇ ಒಂದು ಪಂದ್ಯವಾಡದ ಮೂವರು ಆಟಗಾರರು ಇವರೇ
ನ್ಯೂಝಿಲೆಂಡ್ ಟಿ20 ತಂಡ: ಮೈಕೆಲ್ ಬ್ರೇಸ್‌ವೆಲ್ (ನಾಯಕ), ಫಿನ್ ಅಲೆನ್, ಮಾರ್ಕ್ ಚಾಪ್‌ಮನ್, ಜಾಕೋಬ್ ಡಫಿ, ಜ್ಯಾಕ್ ಫೌಲ್ಕ್ಸ್, ಮಿಚ್ ಹೇ, ಮ್ಯಾಟ್ ಹೆನ್ರಿ , ಕೈಲ್ ಜೇಮಿಸನ್, ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ವಿಲ್ ಒರೋಕ್, ಟಿಮ್ ರಾಬಿನ್ಸನ್, ಬೆನ್ ಸಿಯರ್ಸ್, ಟಿಮ್ ಸೀಫರ್ಟ್, ಇಶ್ ಸೋಧಿ.