
ಹ್ಯಾಮಿಲ್ಟನ್ನ ಸೆಡನ್ ಪಾರ್ಕ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು 423 ರನ್ಗಳ ಅಮೋಘ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ಪರ ನಾಯಕ ಟಾಮ್ ಲ್ಯಾಥಮ್ (63) ಅರ್ಧಶತಕ ಸಿಡಿಸಿದರು. ಇನ್ನು ಕೆಳ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಮಿಚೆಲ್ ಸ್ಯಾಂಟ್ನರ್ 76 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್ನಲ್ಲಿ 347 ರನ್ ಕಲೆಹಾಕಿ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡವು ಮ್ಯಾಟ್ ಹೆನ್ರಿ ದಾಳಿಗೆ ತತ್ತರಿಸಿದೆ. ಪರಿಣಾಮ ಕೇವಲ 143 ರನ್ಗಳಿಸಿ ಸರ್ವಪತನ ಕಂಡಿತು. ಕಿವೀಸ್ ಪರ ಹೆನ್ರಿ 4 ವಿಕೆಟ್ ಕಬಳಿಸಿದರೆ, ಸ್ಯಾಂಟ್ನರ್ ಹಾಗೂ ವಿಲಿಯಮ್ ಒರೋಕ್ ತಲಾ 3 ವಿಕೆಟ್ ಪಡೆದರು.
ಮೊದಲ ಇನಿಂಗ್ಸ್ನ 204 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ಪರ ವಿಲ್ ಯಂಗ್ 60 ರನ್ ಬಾರಿಸಿದರೆ, ಕೇನ್ ವಿಲಿಯಮ್ಸನ್ 156 ರನ್ಗಳ ಮ್ಯಾರಥಾನ್ ಇನಿಂಗ್ಸ್ ಆಡಿದರು. ಇನ್ನು ಡೇರಿಲ್ ಮಿಚೆಲ್ 60 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ನ್ಯೂಝಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 453 ರನ್ ಕಲೆಹಾಕಿತು.
ಪ್ರಥಮ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 657 ರನ್ಗಳ ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಇದಾಗ್ಯೂ ಜೇಕಬ್ ಬೆಥೆಲ್ (76) ಹಾಗೂ ಜೋ ರೂಟ್ (54) ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾಗಿ ನಿಂತರು.
ಆದರೆ ಜೇಕಬ್ ಹಾಗೂ ರೂಟ್ ವಿಕೆಟ್ ಸಿಗುತ್ತಿದ್ದಂತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ ನ್ಯೂಝಿಲೆಂಡ್ ಬೌಲರ್ಗಳು ಅಂತಿಮವಾಗಿ ಇಂಗ್ಲೆಂಡ್ ತಂಡವನ್ನು 234 ರನ್ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದರು. ಈ ಮೂಲಕ ಕಿವೀಸ್ ಪಡೆ ಮೂರನೇ ಟೆಸ್ಟ್ ಪಂದ್ಯವನ್ನು 423 ರನ್ಗಳಿಂದ ಗೆದ್ದುಕೊಂಡಿದೆ.
ಇದು ಟೆಸ್ಟ್ ಕ್ರಿಕೆಟ್ನಲ್ಲಿ ನ್ಯೂಝಿಲೆಂಡ್ ತಂಡದ ಸರ್ವಶ್ರೇಷ್ಠ ಗೆಲುವು. ಅದರಲ್ಲೂ ಇದೇ ಮೊದಲ ಬಾರಿಗೆ ಕ್ರಿಕೆಟ್ ಜನಕರಾದ ಇಂಗ್ಲೆಂಡ್ ತಂಡವನ್ನು 400 ಕ್ಕಿಂತ ಹೆಚ್ಚು ರನ್ಗಳಿಂದ ಮಣಿಸುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ. ಈ ಮೂಲಕ ಆಸ್ಟ್ರೇಲಿಯಾ, ಭಾರತ, ವೆಸ್ಟ್ ಇಂಡೀಸ್ ಬಳಿಕ ಇಂಗ್ಲೆಂಢ್ ತಂಡವನ್ನು 400 ಕ್ಕಿಂತ ಅಧಿಕ ರನ್ಗಳಿಂದ ಮಣಿಸಿದ ತಂಡವೆಂಬ ಕೀರ್ತಿಗೆ ನ್ಯೂಝಿಲೆಂಡ್ ಪಾತ್ರವಾಗಿದೆ.
ಇದಾಗ್ಯೂ ಈ ಸರಣಿ ಇಂಗ್ಲೆಂಡ್ ತಂಡದ ಪಾಲಾಗಿದೆ. ಇದಕ್ಕೂ ಮುನ್ನ ನಡೆದ ಮೊದಲ ಟೆಸ್ಟ್ನಲ್ಲಿ ಆಂಗ್ಲರು 8 ವಿಕೆಟ್ಗಳ ಜಯ ಸಾಧಿಸಿದರೆ, ಎರಡನೇ ಪಂದ್ಯದಲ್ಲಿ 323 ರನ್ಗಳ ಗೆಲುವು ಸಾಧಿಸಿತ್ತು. ಈ ಮೂಲಕ 2-1 ಅಂತರದಿಂದ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ವಿಲ್ ಯಂಗ್ , ಕೇನ್ ವಿಲಿಯಮ್ಸನ್ , ರಚಿನ್ ರವೀಂದ್ರ , ಡೇರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) ಗ್ಲೆನ್ ಫಿಲಿಪ್ಸ್ , ಮಿಚೆಲ್ ಸ್ಯಾಂಟ್ನರ್ , ಮ್ಯಾಟ್ ಹೆನ್ರಿ , ಟಿಮ್ ಸೌಥಿ , ವಿಲಿಯಂ ಒರೋಕ್.
ಇದನ್ನೂ ಓದಿ: ಪಾಕಿಸ್ತಾನ್ ಪರ ಕಣಕ್ಕಿಳಿದ ಇಬ್ಬರು ಹಿಂದೂ ಕ್ರಿಕೆಟಿಗರು ಯಾರು ಗೊತ್ತಾ?
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಜೇಕಬ್ ಬೆಥೆಲ್ , ಜೋ ರೂಟ್ , ಹ್ಯಾರಿ ಬ್ರೂಕ್ , ಒಲೀ ಪೋಪ್ (ವಿಕೆಟ್ ಕೀಪರ್) , ಬೆನ್ ಸ್ಟೋಕ್ಸ್ (ನಾಯಕ) , ಗಸ್ ಅಟ್ಕಿನ್ಸನ್ , ಮ್ಯಾಥ್ಯೂ ಪಾಟ್ಸ್ , ಬ್ರೈಡನ್ ಕಾರ್ಸೆ , ಶೋಯೆಬ್ ಬಶೀರ್.