10 ಭರ್ಜರಿ ಸಿಕ್ಸ್​: ಪವರ್​ಫುಲ್ ಶತಕ ಸಿಡಿಸಿದ ಪೂರನ್

| Updated By: ಝಾಹಿರ್ ಯೂಸುಫ್

Updated on: Sep 07, 2023 | 2:30 PM

Nicholas Pooran: ಮೊದಲ ವಿಕೆಟ್​ ಪತನದೊಂದಿಗೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಚೆಂಡಾಡಿದರು. ಬಾರ್ಬಡೋಸ್ ರಾಯಲ್ಸ್ ಬೌಲರ್​ಗಳು ವಿಕೆಟ್​ ಪಡೆಯುತ್ತಿದ್ದರೆ, ಮತ್ತೊಂದೆಡೆ ಪೂರನ್ ಬೆಂಡೆತ್ತಿದರು.

10 ಭರ್ಜರಿ ಸಿಕ್ಸ್​: ಪವರ್​ಫುಲ್ ಶತಕ ಸಿಡಿಸಿದ ಪೂರನ್
Nicholas Pooran
Follow us on

ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ ನಿಕೋಲಸ್ ಪೂರನ್ (ನಿಕ್ಕಿ-ಪಿ) ತೂಫಾನ್ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಬಾರ್ಬಡೋಸ್ ರಾಯಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೂರನ್ ಅಜೇಯ ಸೆಂಚುರಿ ಸಿಡಿಸಿದರು. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾರ್ಬಡೋಸ್ ರಾಯಲ್ಸ್ ತಂಡದ ನಾಯಕ ರೋವ್​ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಇತ್ತ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮಾರ್ಕ್​ ಡೇಯಲ್ ಕೇವಲ 6 ರನ್​ಗಳಿಸಿ ಕೈಲ್ ಮೇಯರ್ಸ್​ಗೆ ವಿಕೆಟ್ ಒಪ್ಪಿಸಿದ್ದರು. ಇನ್ನು ಮತ್ತೋರ್ವ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 30 ಎಸೆತಗಳಲ್ಲಿ 35 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

ಪೂರನ್​ ಪವರ್​ಗೆ ತತ್ತರಿಸಿದ ರಾಯಲ್ಸ್:

ಮೊದಲ ವಿಕೆಟ್​ ಪತನದೊಂದಿಗೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಚೆಂಡಾಡಿದರು. ಬಾರ್ಬಡೋಸ್ ರಾಯಲ್ಸ್ ಬೌಲರ್​ಗಳು ವಿಕೆಟ್​ ಪಡೆಯುತ್ತಿದ್ದರೆ, ಮತ್ತೊಂದೆಡೆ ಪೂರನ್ ಬೆಂಡೆತ್ತುತ್ತಿದ್ದರು.

ಪರಿಣಾಮ ನಿಕೋಲಸ್ ಪೂರನ್ ಬ್ಯಾಟ್​ನಿಂದ ಕೇವಲ 51 ಎಸೆತಗಳಲ್ಲಿ ಶತಕ ಮೂಡಿಬಂತು. ಇನ್ನು ಕೆಳ ಕ್ರಮಾಂಕದಲ್ಲಿ ಆ್ಯಂಡ್ರೆ ರಸೆಲ್ 22 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಫೋರ್​ನೊಂದಿಗೆ 39 ರನ್ ಬಾರಿಸಿ ಉತ್ತಮ ಸಾಥ್ ನೀಡಿದರು.

ಅಂತಿಮವಾಗಿ 53 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ ನಿಕೋಲಸ್ ಪೂರನ್ ಅಜೇಯ 102 ರನ್ ಬಾರಿಸಿದರು. ಇದರೊಂದಿಗೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದ ಮೊತ್ತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 208 ಕ್ಕೆ ಬಂದು ನಿಂತಿತು.

ಕಠಿಣ ಟಾರ್ಗೆಟ್ ಪಡೆದ ಬಾರ್ಬಡೋಸ್ ರಾಯಲ್ಸ್:

209 ರನ್​ಗಳ ಕಠಿಣ ಗುರಿ ಪಡೆದ ಬಾರ್ಬಡೋಸ್ ರಾಯಲ್ಸ್ ತಂಡಕ್ಕೆ ಕೈಲ್ ಮೇಯರ್ಸ್ ಸಿಡಿಲಬ್ಬರದ ಆರಂಭ ಒದಗಿಸಿದ್ದರು. 45 ಎಸೆತಗಳನ್ನು ಎದುರಿಸಿದ ಎಡಗೈ ದಾಂಡಿಗ 4 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 70 ರನ್ ಬಾರಿಸಿದರು.

ಆದರೆ ಮೇಯರ್ಸ್​ರನ್ನು ಹೊರತುಪಡಿಸಿದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಬಾರ್ಬಡೋಸ್ ರಾಯಲ್ಸ್ 20 ಓವರ್​ಗಳಲ್ಲಿ 7 ವಿಕೆಟ್ ಕಳೆದುಕೊಂಡು 166 ರನ್​ಗಳಿಸಲಷ್ಟೇ ಶಕ್ತರಾದರು.

ಟ್ರಿನ್‌ಬಾಗೊ ನೈಟ್ ರೈಡರ್ಸ್​ಗೆ ಭರ್ಜರಿ ಜಯ:

ಬಾರ್ಬಡೋಸ್ ರಾಯಲ್ಸ್ ತಂಡದ ಇನಿಂಗ್ಸ್​ 166 ರನ್​ಗಳಿಗೆ ಅಂತ್ಯವಾಗುವುದರೊಂದಿಗೆ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡವು 42 ರನ್​ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕೀರನ್ ಪೊಲಾರ್ಡ್ ನೇತೃತ್ವದ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪಡೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. ಸದ್ಯ ಮೊದಲ ಸ್ಥಾನದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವಿದೆ.

ಟ್ರಿನ್‌ಬಾಗೊ ನೈಟ್ ರೈಡರ್ಸ್ ಪ್ಲೇಯಿಂಗ್ 11: ಮಾರ್ಟಿನ್ ಗಪ್ಟಿಲ್ , ಮಾರ್ಕ್ ಡೇಯಲ್ , ನಿಕೋಲಸ್ ಪೂರನ್ , ಲೋರ್ಕನ್ ಟಕರ್ (ವಿಕೆಟ್ ಕೀಪರ್) , ಕೀರನ್ ಪೊಲಾರ್ಡ್ (ನಾಯಕ) , ಅಕೇಲ್ ಹೊಸೈನ್ , ಆಂಡ್ರೆ ರಸೆಲ್ , ಸುನಿಲ್ ನರೈನ್ , ಅಲಿ ಖಾನ್ , ವಕಾರ್ ಸಲಾಮ್ಖೈಲ್ , ಜೇಡನ್ ಸೀಲ್ಸ್.

ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

ಬಾರ್ಬಡೋಸ್ ರಾಯಲ್ಸ್ ಪ್ಲೇಯಿಂಗ್ 11: ಕೈಲ್ ಮೇಯರ್ಸ್ , ರಹಕೀಮ್ ಕಾರ್ನ್‌ವಾಲ್ , ಲಾರಿ ಇವಾನ್ಸ್ , ಅಲಿಕ್ ಅಥಾನಾಝ್, ರೋವ್‌ಮನ್ ಪೊವೆಲ್ (ನಾಯಕ) , ಜೇಸನ್ ಹೋಲ್ಡರ್ , ನೈಮ್ ಯಂಗ್ , ರಿವಾಲ್ಡೊ ಕ್ಲಾರ್ಕ್ (ವಿಕೆಟ್) , ರೋಲೋಫ್ ವ್ಯಾನ್ ಡೆರ್ ಮೆರ್ವೆ , ಕೈಸ್ ಅಹ್ಮದ್ , ಒಬೆಡ್ ಮೆಕಾಯ್.