ಕೇವಲ 13 ವರ್ಷ, 1400 ಕ್ಕೂ ಹೆಚ್ಚು ರನ್: ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಸದ್ದು ಮಾಡುತ್ತಿರುವ ನಿತೀಶ್ ಆರ್ಯ
Nitish Arya: ನಿತೀಶ್ ಆರ್ಯ 7ನೇ ತರಗತಿ ವಿದ್ಯಾರ್ಥಿ. ಸುಮಾರು 3 ವರ್ಷಗಳ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. KSCA ಕಪ್ 16 ವರ್ಷದೊಳಗಿನವರ ಟೂರ್ನಿಯಲ್ಲಿ ಇವರು 3 ಶತಕ ಮತ್ತು 3 ಅರ್ಧಶತಕಗಳೊಂದಿಗೆ 565 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿಯಾದ 13 ವರ್ಷದ ನಿತೀಶ್ ಆರ್ಯ (Nitish Arya) ಕರ್ನಾಟಕ ಕ್ರಿಕೆಟ್ ವಲಯದಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ವಿವಿಧ ಪಂದ್ಯಾವಳಿಗಳಲ್ಲಿ ರನ್ ಮಳೆಯನ್ನೇ ಸುರಿಸಿರುವ ಇವರು ಪ್ರಸ್ತುತ 2023-2024 ಋತುವಿನಲ್ಲಿ ಈಗಾಗಲೇ 1,400 ರನ್‌ಗಳ ಗಡಿದಾಟಿ ಮುನ್ನುಗ್ಗುತ್ತಿದ್ದಾರೆ. ಪ್ರತಿಯೊಬ್ಬ ಯುವ ಕ್ರಿಕೆಟಿಗನಂತೆ, ನಿತೀಶ್ ಮೂರೂ ಸ್ವರೂಪಗಳಲ್ಲಿ ಭಾರತದ ಕ್ಯಾಪ್ ಧರಿಸುವ ಕನಸು ಕಾಣುತ್ತಿದ್ದು, ತನ್ನ ಆರಾಧ್ಯ ಕೊಹ್ಲಿಯನ್ನು ಭೇಟಿಯಾಗಲು ಕಾದುಕುಳಿತಿದ್ದಾರೆ. ಇವರು ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದು, ರಾಜಾಜಿನಗರ ಕ್ರಿಕೆಟರ್ಸ್ ಮತ್ತು ಅವರ ಶಾಲಾ ತಂಡ – ಮ್ಯಾಕ್ಸ್ ಮುಲ್ಲರ್ ಹೈಸ್ಕೂಲ್ (ಬಸವೇಶ್ವರನಗರ) ಗಾಗಿ ಆಡುತ್ತಾರೆ.
ನಿತೀಶ್ ಆರ್ಯ 7ನೇ ತರಗತಿ ವಿದ್ಯಾರ್ಥಿ. ಸುಮಾರು 3 ವರ್ಷಗಳ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದರು. KSCA ಕಪ್ 16 ವರ್ಷದೊಳಗಿನವರ ಟೂರ್ನಿಯಲ್ಲಿ ಇವರು 3 ಶತಕ ಮತ್ತು 3 ಅರ್ಧಶತಕಗಳೊಂದಿಗೆ 565 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು. U-16 ಪಂದ್ಯಾವಳಿಯಲ್ಲಿ 13 ನೇ ವಯಸ್ಸಿನಲ್ಲಿ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವುದು ನಿಜಕ್ಕೂ ದೊಡ್ಡ ಸಾಧನೆಯಾಗಿದೆ.
ಕೆಎಸ್‌ಸಿಎ ನಡೆಸುತ್ತಿರುವ 14 ವರ್ಷದೊಳಗಿನವರ ಟೂರ್ನಿಗಳಲ್ಲಿ ನಿತೀಶ್ ಆರ್ಯ ಅದ್ಭುತವಾಗಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ರಾಜಾಜಿನಗರ ಕ್ರಿಕೆಟರ್ಸ್ ಕಾರ್ಯದರ್ಶಿ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ತಂಡದ ಶಿವಮೊಗ್ಗ ಲಯನ್ಸ್ ಮಾಲೀಕ ಆರ್ ಕುಮಾರ್ ಇವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.
ಕೊನೆಯ ಎಸೆತದಲ್ಲಿ ರಿಂಕು ಬಾರಿಸಿದ ಸಿಕ್ಸರ್ ಸ್ಕೋರ್ ಬೋರ್ಡ್ನಲ್ಲಿ ದಾಖಲಾಗಲಿಲ್ಲ! ಯಾಕೆ ಗೊತ್ತಾ?
ನಿತೀಶ್ ಅವರು ವಿಕ್ಟರಿ ಕ್ರಿಕೆಟ್ ಕ್ಲಬ್‌ಗಾಗಿ ಕೆಎಸ್‌ಸಿಎಯ 4 ನೇ ಡಿವಿಷನ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇಲ್ಲಿಯವರೆಗೆ, ಅವರು 4 ಪಂದ್ಯಗಳಲ್ಲಿ ಒಂದು ಅರ್ಧಶತಕದೊಂದಿಗೆ ಅಲ್ಲಿಯೂ ಉತ್ತಮ ಸಾಧನೆ ಮಾಡಿದ್ದಾರೆ. ರಾಜಾಜಿನಗರ ಕ್ರಿಕೆಟಿಗರ ತರಬೇತುದಾರ ವಿನಯ್ ಕುಮಾರ್ ಎನ್‌ಪಿ ಮಾತನಾಡಿ, ”ನಿತೀಶ್ ಅವರು ಸಮರ್ಪಿತ ಕ್ರಿಕೆಟಿಗರಾಗಿದ್ದಾರೆ, ಅವರು ದಿನಕ್ಕೆ 6 ರಿಂದ 7 ಗಂಟೆಗಳ ಕಾಲ ತರಬೇತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ 5 ರಿಂದ 7 ರವರೆಗೆ ಮತ್ತು ಮತ್ತೆ ಸಂಜೆ 3 ರಿಂದ ಸಂಜೆ 7 ರವರೆಗೆ ತರಬೇತಿ ನೀಡುತ್ತಿದ್ದೇನೆ,” ಎಂದಿದ್ದಾರೆ.
ನಿತೀಶ್ ಸಾಧನೆ ಕೇವಲ ಕ್ರಿಕೆಟ್ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ಕ್ರಿಕೆಟ್ ಜೊತೆಗೆ ಓದಿನಲ್ಲೂ ಮಂದಿದ್ದಾರೆ. ಶೇಕಡಾ 80 ರಿಂದ 90 ರಷ್ಟು ಅಂಕ ಗಳಿಸುತ್ತಿದ್ದಾರೆ. ಅವರ ಶಿಕ್ಷಣ ಸಂಸ್ಥೆ ಮತ್ತು ಶಾಲಾ ತರಬೇತುದಾರ ಲಕ್ಷ್ಮೀಕಾಂತ್, ನಿತೀಶ್ಗೆ ನಿರಂತರವಾಗಿ ಬೆಂಬಲ ಕೂಡ ನೀಡುತ್ತಿದ್ದಾರೆ. ಸದ್ಯ ರಾಜ್ಯ ಕ್ರಿಕೆಟ್ ತಂಡದ ಕದ ತಟ್ಟಿರುವ ನಿತೀಶ್ ಅವರು ವಿರಾಟ್ ಕೊಹ್ಲಿ ರೀತಿ ದೊಡ್ಡ ಕ್ರಿಕೆಟಿಗನಾಗಲಿ ಎಂಬುದು ಎಲ್ಲರ ಆಶಯ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:00 am, Sat, 25 November 23