
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಹಿನ್ನಡೆ ಅನುಭವಿಸಿರುವ ಟೀಂ ಇಂಡಿಯಾಕ್ಕೆ (Team India) ಇದೀಗ ಮತ್ತೊಂದು ಆಘಾತ ಎದುರಾಗಿದೆ. ಈ ಸರಣಿಯಲ್ಲಿ ಟೀಂ ಇಂಡಿಯಾವನ್ನು ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. 4ನೇ ಟೆಸ್ಟ್ ಆರಂಭಕ್ಕೂ ಮುನ್ನ ವೇಗದ ಬೌಲರ್‌ಗಳಾದ ಅರ್ಶ್‌ದೀಪ್ ಸಿಂಗ್ ಮತ್ತು ಆಕಾಶ್ ದೀಪ್ ಗಾಯಗೊಂಡಿರುವುದು ತಂಡವನ್ನು ಈಗಾಗಲೇ ಸಂಕಷ್ಟಕ್ಕೆ ಸಿಲುಕಿಸಿತ್ತು. ಆದರೆ ಇದೀಗ ಈ ಗಾಯಾಳುಗಳ ಪಟ್ಟಿಗೆ ತಂಡದ ಯುವ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitish Kumar Reddy) ಅವರ ಹೆಸರೂ ಕೂಡ ಸೇರ್ಪಡೆಗೊಂಡಿದೆ. ವರದಿಗಳ ಪ್ರಕಾರ, ಗಾಯದಿಂದಾಗಿ ರೆಡ್ಡಿ ಸರಣಿಯ ಉಳಿದ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಜುಲೈ 23 ರಿಂದ ಮ್ಯಾಂಚೆಸ್ಟರ್‌ನಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಟೀಂ ಇಂಡಿಯಾ ನಿರಂತರವಾಗಿ ಅಭ್ಯಾಸ ಮತ್ತು ತರಬೇತಿಯಲ್ಲಿ ತೊಡಗಿಸಿಕೊಂಡಿದೆ. ಮಾಧ್ಯಮ ವರದಿಗಳ ಪ್ರಕಾರ, 22 ವರ್ಷದ ರೆಡ್ಡಿ ಪಂದ್ಯಕ್ಕೆ 3 ದಿನಗಳ ಮೊದಲು, ಜುಲೈ 20 ರ ಭಾನುವಾರ ಜಿಮ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಗ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದಾರೆ. ಇದರ ನಂತರ, ಅವರನ್ನು ತಕ್ಷಣವೇ ಸ್ಕ್ಯಾನ್ಗೆ ಒಳಪಡಿಸಲಾಗಿದ್ದು, ಇದರಲ್ಲಿ ಅಸ್ಥಿರಜ್ಜು ಗಾಯ ಕಂಡುಬಂದಿದೆ. ಈ ಕಾರಣದಿಂದಾಗಿ, ಈ ಸರಣಿಯಲ್ಲಿ ರೆಡ್ಡಿ ಅವರ ಪ್ರಯಾಣ ಇಲ್ಲಿಗೆ ಕೊನೆಗೊಂಡಿದೆ.
ರೆಡ್ಡಿ ಅವರ ಗಾಯ ಎಷ್ಟು ಗಂಭೀರವಾಗಿದೆ ಮತ್ತು ಅವರು ಎಷ್ಟು ಕಾಲ ಮೈದಾನದಿಂದ ಹೊರಗುಳಿಯುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಮಾತ್ರ ತಿಳಿಯಲಿದೆ. ಆದಾಗ್ಯೂ, ಬಿಸಿಸಿಐ, ನಿತೀಶ್ ರೆಡ್ಡಿ ಗಾಯಗೊಂಡಿರುವ ಬಗ್ಗೆ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಅಲ್ಲದೆ ನಿತೀಶ್ ಅವರ ಬದಲಿಯಾಗಿ ಬೇರೆ ಯಾರನ್ನಾದರೂ ತಂಡಕ್ಕೆ ಸೇರಿಸಿಕೊಳ್ಳಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ.
ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಲಿಷ್ಠ ಟೆಸ್ಟ್ ಚೊಚ್ಚಲ ಪಂದ್ಯವಾಡಿದ ನಿತೀಶ್‌ಗೆ ಈ ಸರಣಿ ವಿಶೇಷವಾಗಿರಲಿಲ್ಲ. ಮೊದಲ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗಲಿಲ್ಲ ಆದರೆ ಎರಡನೇ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ಬದಲಿಗೆ ತಂಡಕ್ಕೆ ಎಂಟ್ರಿಕೊಟ್ಟಿದ್ದ ನಿತೀಶ್‌ಗೆ, ಈ ಪಂದ್ಯದಲ್ಲಿ ವಿಶೇಷವಾದದ್ದೇನೂ ಮಾಡಲು ಸಾಧ್ಯವಾಗಲಿಲ್ಲ, ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 2 ರನ್ ಬಾರಿಸಿದ್ದ ಅವರು ಬೌಲಿಂಗ್‌ನಲ್ಲಿಯೂ ಯಾವುದೇ ವಿಕೆಟ್ ಪಡೆಯಲಿಲ್ಲ. ಇದರ ಹೊರತಾಗಿಯೂ, ಅವರನ್ನು ಮೂರನೇ ಟೆಸ್ಟ್‌ನಲ್ಲಿ ಆಯ್ಕೆ ಮಾಡಲಾಯಿತು. ಅದರಂತೆ ಮೊದಲ ಇನ್ನಿಂಗ್ಸ್ನಲ್ಲಿ 30 ರನ್ಗಳ ಕಾಣಿಕೆ ನೀಡಿದ್ದ ನಿತೀಶ್ ಎರಡನೇ ಇನ್ನಿಂಗ್ಸ್ನಲ್ಲಿ 13 ರನ್‌ಗಳಿಗೆ ಸುಸ್ತಾಗಿದ್ದರು. ಆದರೆ ಬೌಲಿಂಗ್ನಲ್ಲಿ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಆದರೆ ಬ್ಯಾಟಿಂಗ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ದೀರ್ಘಕಾಲ ಕ್ರೀಸ್‌ನಲ್ಲಿದ್ದ ನಿತೀಶ್‌ಗೆ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಗಲಿಲ್ಲ.
ರೆಡ್ಡಿ ಗಾಯವು ಸರಣಿಯಲ್ಲಿ ಹಿಂದುಳಿದಿರುವ ಮತ್ತು ಈಗಾಗಲೇ ಗಾಯಗಳಿಂದ ಬಳಲುತ್ತಿರುವ ಭಾರತೀಯ ತಂಡದ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡಿದೆ. ಈಗಾಗಲೇ ಆಕಾಶ್ ದೀಪ್ (ಬೆನ್ನು ನೋವು) ಮತ್ತು ಎಡಗೈ ವೇಗದ ಬೌಲರ್ ಅರ್ಶ್‌ದೀಪ್ (ಕೈಯಲ್ಲಿ ಗಾಯ) ಗಾಯದಿಂದಾಗಿ ನಾಲ್ಕನೇ ಟೆಸ್ಟ್‌ನಿಂದ ಬಹುತೇಕ ಹೊರಗುಳಿದಿದ್ದಾರೆ. ಆಕಾಶ್ ದೀಪ್ ಎರಡನೇ ಮತ್ತು ಮೂರನೇ ಟೆಸ್ಟ್‌ಗಳಲ್ಲಿ ಭಾಗವಹಿಸಿದ್ದರು, ಆದರೆ ಅರ್ಶ್‌ದೀಪ್ ಇನ್ನೂ ಚೊಚ್ಚಲ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಅವರು ಕೊನೆಯ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಯೂ ಇದೆ. ಈ ಕಾರಣದಿಂದಾಗಿ, ಆಯ್ಕೆದಾರರು ಯುವ ವೇಗದ ಬೌಲರ್ ಅನ್ಶುಲ್ ಕಾಂಬೋಜ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದ್ದಾರೆ. ರೆಡ್ಡಿ ಅವರ ಬದಲಿಯಾಗಿ, ತಂಡವು ಶಾರ್ದೂಲ್ ಠಾಕೂರ್ ಅವರನ್ನು ಆಲ್‌ರೌಂಡರ್ ಆಗಿ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ಹೊಂದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 pm, Sun, 20 July 25