NZ vs PAK: ಕಿವೀಸ್ ಕಿವಿ ಹಿಂಡಿದ ಬಾಬರ್ ಪಡೆ; ವಿಶ್ವಕಪ್​ ಫೈನಲ್​ಗೆ ಎಂಟ್ರಿಕೊಟ್ಟ ಪಾಕಿಸ್ತಾನ..!

| Updated By: ಪೃಥ್ವಿಶಂಕರ

Updated on: Nov 09, 2022 | 5:19 PM

T20 World Cup 2022: 2007ರಲ್ಲಿ ಆಡಿದ ಮೊದಲ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಆದರೆ 2009ರಲ್ಲಿ ಆಡಿದ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದ ಪಾಕಿಸ್ತಾನ ಪ್ರಶಸ್ತಿಯನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

NZ vs PAK: ಕಿವೀಸ್ ಕಿವಿ ಹಿಂಡಿದ ಬಾಬರ್ ಪಡೆ; ವಿಶ್ವಕಪ್​ ಫೈನಲ್​ಗೆ ಎಂಟ್ರಿಕೊಟ್ಟ ಪಾಕಿಸ್ತಾನ..!
pak vs nz
Follow us on

2022ರ ಟಿ20 ವಿಶ್ವಕಪ್‌ನ (T20 World Cup 2022) ಮೊದಲೆರಡು ಪಂದ್ಯಗಳಲ್ಲಿ ಭಾರತ ಮತ್ತು ಜಿಂಬಾಬ್ವೆ (India and Zimbabwe) ವಿರುದ್ಧ ಸೋಲು ಕಂಡಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ (Pakistan cricket team) ಪುನರಾಗಮನ ಮಾಡಿದ ರೀತಿಯನ್ನು ಯಾರೂ ಕೂಡ ಊಹಿಸಿರಲಿಲ್ಲ. ವಾರದ ಹಿಂದೆ ವಿಶ್ವಕಪ್‌ನಿಂದ ಹೊರಗುಳಿಯಲಿದೆ ಎಂದು ಅನಿಸಿಕೊಂಡಿದ್ದ ತಂಡವು ಇದೀಗ ವಿಶ್ವಕಪ್‌ನ ಫೈನಲ್‌ಗೆ ತಲುಪಿ, ಎಲ್ಲರನ್ನೂ ಅಚ್ಚರಿಗೊಳಿಸಿದೆ. ಸಿಡ್ನಿ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾಬರ್ ಅಜಮ್ (Babar Azam) ನೇತೃತ್ವದ ಪಾಕಿಸ್ತಾನ ತಂಡ ಮತ್ತೊಮ್ಮೆ ಏಕಪಕ್ಷೀಯ ಶೈಲಿಯಲ್ಲಿ ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಮೂರನೇ ಬಾರಿಗೆ ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿದೆ.

ನವೆಂಬರ್ 6 ರಂದು ತಮ್ಮ ಕೊನೆಯ ಸೂಪರ್-12 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿ ಸೆಮಿಫೈನಲ್ ತಲುಪಿದ ಪಾಕಿಸ್ತಾನಿ ತಂಡವು ನವೆಂಬರ್ 9 ಬುಧವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದೆ. 1992 ರಿಂದಲೂ ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಪ್ರಾಬಲ್ಯ ಮೆರೆದಿರುವ ಪಾಕಿಸ್ತಾನ ತಂಡ ಈ ವಿಶ್ವಕಪ್‌ನಲ್ಲೂ ಇತಿಹಾಸವನ್ನು ಬದಲಾಯಿಸಲು ಬಿಡಲಿಲ್ಲ.

ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿ ಪಾಕಿಸ್ತಾನಕ್ಕೆ 153 ರನ್‌ಗಳ ಗುರಿ ನೀಡಿದರು. 153 ರನ್‌ಗಳ ಗುರಿಯನ್ನು ಪಡೆದಿದ್ದ ಪಾಕಿಸ್ತಾನ ತಂಡ ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ 13 ವರ್ಷಗಳ ಬಳಿಕ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿದೆ. 2007ರಲ್ಲಿ ಆಡಿದ ಮೊದಲ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಫೈನಲ್ ತಲುಪಿದ್ದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ. ಆದರೆ 2009ರಲ್ಲಿ ಆಡಿದ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದ ಪಾಕಿಸ್ತಾನ ಪ್ರಶಸ್ತಿಯನ್ನೂ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಫಾರ್ಮ್​ಗೆ ಮರಳಿದ ಬಾಬರ್-ರಿಜ್ವಾನ್

ಕಿವೀಸ್ ಪಡೆಯನ್ನು ಕಡಿಮೆ ರನ್​ಗಳಿಗೆ ಕಟ್ಟಿಹಾಕಿದ ಬಳಿಕ ರನ್ ಬೆನ್ನಟ್ಟಿದ ಪಾಕಿಸ್ತಾನಕ್ಕೆ ತಂಡದ ಆರಂಭಿಕರು ಉತ್ತಮ ಆರಂಭ ನೀಡಿದರು. ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅತ್ಯಂತ ಮಹತ್ವದ ಪಂದ್ಯದಲ್ಲಿ ತಮ್ಮ ಹಳೆಯ ಫಾರ್ಮ್​ಗೆ ಮರಳುವ ಮೂಲಕ ಅಮೋಘ ಶತಕದ ಜೊತೆಯಾಟ ನಡೆಸಿದರು. ಅಲ್ಲದೆ ಬಾಬರ್-ರಿಜ್ವಾನ್ ಈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ 50 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಬಾಬರ್ ಅಜಮ್ 42 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರು. ಅಲ್ಲದೆ ರಿಜ್ವಾನ್ ಅವರೊಂದಿಗೆ ಆರಂಭಿಕ ವಿಕೆಟ್‌ಗೆ 105 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಬಳಿಕ ರಿಜ್ವಾನ್ ಕೂಡ 57 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕೊನೆಯ ಓವರ್‌ನಲ್ಲಿ ಒಟ್ಟು 3 ವಿಕೆಟ್ ಕಳೆದುಕೊಂಡು ಪಾಕಿಸ್ತಾನ ಗುರಿ ತಲುಪಿತು.

ಬಲಿಷ್ಠ ಬೌಲಿಂಗ್, ಸ್ಟ್ರಾಂಗ್ ಫೀಲ್ಡಿಂಗ್

ಟೂರ್ನಿಯಲ್ಲಿ ಸತತವಾಗಿ ಉತ್ತಮ ಬೌಲಿಂಗ್ ಮಾಡುತ್ತಿರುವ ಪಾಕಿಸ್ತಾನ ತಂಡ ಈ ಪಂದ್ಯದಲ್ಲೂ ಅದೇ ಆಟ ಪ್ರದರ್ಶಿಸಿತು. ವಿಶೇಷವಾಗಿ ಫಾರ್ಮ್ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ತಂಡದ ಬೌಲಿಂಗ್ ಅನ್ನು ಉತ್ತುಂಗಕ್ಕೆ ಕೊಂಡೊಯ್ದರು. ಅದರಲ್ಲೂ ಮೊದಲ ಓವರ್‌ನಲ್ಲಿಯೇ ಫಿನ್ ಅಲೆನ್ ಅವರನ್ನು ಎಲ್‌ಬಿಡಬ್ಲ್ಯೂ ಔಟ್ ಮಾಡುವ ಮೂಲಕ ತಂಡಕ್ಕೆ ಉತ್ತಮ ಆರಂಭವನ್ನು ನೀಡಿದರು.

ಈ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಉತ್ತಮವಾದ ವಿಷಯವೆಂದರೆ ಅವರ ಫೀಲ್ಡಿಂಗ್. ಅದರಲ್ಲೂ ಅನೇಕ ಬೌಂಡರಿಗಳನ್ನು ಸೇವ್ ಮಾಡುವುದರೊಂದಿಗೆ ಕಿವೀಸ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಷ್ಟೇ ಅಲ್ಲದೆ ಅದ್ಭುತ ಫೀಲ್ಡಿಂಗ್ ಮೂಲಕ ಶಾದಾಬ್ ಖಾನ್ ಡೆವೊನ್ ಕಾನ್ವೇ ಅವರನ್ನು ರನೌಟ್ ಮಾಡಿ ಕಿವೀಸ್​ ಪಡೆಗೆ ಬಿಗ್ ಶಾಕ್ ನೀಡಿದರು.

ಮಿಚೆಲ್ ಫಿಫ್ಟಿ..

ನ್ಯೂಜಿಲೆಂಡ್ ಪರ ಡ್ಯಾರಿಲ್ ಮಿಚೆಲ್ 53 ರನ್ ಗಳಿಸಿದರು. ಅವರು ಜಿಮ್ಮಿ ನೀಶಮ್ ಅವರೊಂದಿಗೆ 22 ಎಸೆತಗಳಲ್ಲಿ 32 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಮಿಚೆಲ್ ಅವರ ಬ್ಯಾಟಿಂಗ್‌ನಿಂದಾಗಿ ನ್ಯೂಜಿಲೆಂಡ್ ಸ್ಕೋರ್ 150ಕ್ಕೆ ತಲುಪಿತು.

ವಿಲಿಯಮ್ಸನ್ ಪ್ರಮುಖ ಇನ್ನಿಂಗ್ಸ್..

ಸೆಮಿಫೈನಲ್‌ನಂತಹ ಪ್ರಮುಖ ಪಂದ್ಯದಲ್ಲಿ ನಾಯಕ ವಿಲಿಯಮ್ಸನ್ 46 ರನ್‌ಗಳ ಇನಿಂಗ್ಸ್ ಆಡಿದ್ದರು. ಡ್ಯಾರಿಲ್ ಮಿಚೆಲ್ ಜೊತೆಗೆ 50 ಎಸೆತಗಳಲ್ಲಿ 68 ರನ್ ಜೊತೆಯಾಟ ನಡೆಸಿ ತಂಡವನ್ನು ಆರಂಭಿಕ ಹಿನ್ನಡೆಯಿಂದ ಪಾರು ಮಾಡಿದರು.

ಶಾಹೀನ್ ಅದ್ಭುತ ಬೌಲಿಂಗ್..

ಪಾಕಿಸ್ತಾನ ಪರ ಅದ್ಭುತ ಬೌಲಿಂಗ್ ಮಾಡಿದ ಶಾಹೀನ್ ಶಾ ಆಫ್ರಿದಿ 2 ವಿಕೆಟ್ ಪಡೆದರು. ಅವರು ನಿರ್ಣಾಯಕ ಸಮಯದಲ್ಲಿ ಆರಂಭಿಕ ಫಿನ್ ಅಲೆನ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅವರ ವಿಕೆಟ್ಗಳನ್ನು ಪಡೆದರು. ಅದಕ್ಕಿಂತ ಮುಖ್ಯವಾಗಿ 4 ಓವರ್‌ಗಳಲ್ಲಿ 24 ರನ್‌ಗಳನ್ನು ಮಾತ್ರ ಬಿಟ್ಟುಕೊಟ್ಟರು.

Published On - 4:56 pm, Wed, 9 November 22