
ಹರಾರೆಯಲ್ಲಿ ನಡೆದ ಟಿ20 ತ್ರಿಕೋನ ಸರಣಿಯ (T20 Tri-Series) ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ (New Zealand vs South Africa) ಮುಖಾಮುಖಿಯಾಗಿದ್ದವು. ಉಭಯ ತಂಡಗಳ ನಡುವೆ ನಡೆದ ಈ ರೋಮಾಂಚಕ ಪಂದ್ಯದಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾವನ್ನು 3 ರನ್‌ಗಳಿಂದ ಸೋಲಿಸಿ ಟ್ರೋಫಿಯನ್ನು ಗೆದ್ದುಕೊಂಡಿತು. ವಾಸ್ತವವಾಗಿ ಒಂದು ಹಂತದಲ್ಲಿ ದಕ್ಷಿಣ ಆಫ್ರಿಕಾ ಬಹಳ ಸುಲಭವಾಗಿ ಗೆಲುವಿನತ್ತ ಸಾಗುತ್ತಿತ್ತು, ಆದರೆ ಕೊನೆ ಕೊನೆಯಲ್ಲಿ ಕರಾರುವಕ್ಕಾದ ದಾಳಿ ಮಾಡಿದ ನ್ಯೂಜಿಲೆಂಡ್ ಅರ್ಹ ಗೆಲುವು ದಾಖಲಿಸಿತು. ಡಬ್ಲ್ಯೂಟಿಸಿ ಫೈನಲ್ ಗೆದ್ದು ಚೋಕರ್ ಹಣೆ ಪಟ್ಟಿಯನ್ನು ಕಳಚಿದ್ದ ದಕ್ಷಿಣ ಆಫ್ರಿಕಾ ತಂಡ ತ್ರಿಕೋನ ಸರಣಿ ಸೋಲುವುದರೊಂದಿಗೆ ಮತ್ತೊಮ್ಮೆ ಚೋಕರ್ ಎನಿಸಿಕೊಂಡಿತು.
ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಟಿಮ್ ಸೀಫರ್ಟ್ 28 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ನಂತರ ಡೆವೊನ್ ಕಾನ್ವೇ ಮತ್ತು ರಾಚಿನ್ ರವೀಂದ್ರ ತಲಾ 47 ರನ್ ಗಳಿಸುವ ಮೂಲಕ ತಂಡವನ್ನು ಭದ್ರ ಸ್ಥಿತಿಗೆ ಕೊಂಡೊಯ್ದರು. ಇದರಿಂದಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 180 ರನ್ ಗಳಿಸಿತು.
Kiwis best fast bowler in all formats right now defend 7 runs in last over when south africa has 6 wickets in hands 👏👏👏#SAvsNZ pic.twitter.com/qFR64YZFKH
— Mustafa (@mustafamasood0) July 26, 2025
181 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಲುವಾನ್ ಪ್ರಿಟೋರಿಯಸ್ ಮತ್ತು ರೀಜಾ ಹೆಂಡ್ರಿಕ್ಸ್ ಮೊದಲ ವಿಕೆಟ್‌ಗೆ 92 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಪ್ರಿಟೋರಿಯಸ್ 51 ರನ್ ಮತ್ತು ರೀಜಾ ಹೆಂಡ್ರಿಕ್ಸ್ 37 ರನ್ ಗಳಿಸಿದರು. ಇವರಲ್ಲದೆ, ಡೆವಾಲ್ಡ್ ಬ್ರೆವಿಸ್ ಕೂಡ 16 ಎಸೆತಗಳಲ್ಲಿ 31 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಇದರಿಂದಾಗಿ ದಕ್ಷಿಣ ಆಫ್ರಿಕಾ 15 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 151 ರನ್ ಗಳಿಸಿತು. ಆದರೆ ಇದರ ನಂತರ ಆಫ್ರಿಕಾ ತಂಡದ ಇನ್ನಿಂಗ್ಸ್ ಹಳಿ ತಪ್ಪಲಾರಂಭಿಸಿತು.
Champions League T20: 12 ವರ್ಷಗಳ ನಂತರ ಮತ್ತೆ ಆರಂಭವಾಗಲಿದೆ ಚಾಂಪಿಯನ್ಸ್ ಲೀಗ್ ಟಿ20
ಪಂದ್ಯವನ್ನು ಗೆಲ್ಲಲು ದಕ್ಷಿಣ ಆಫ್ರಿಕಾ ಕೊನೆಯ 7 ಎಸೆತಗಳಲ್ಲಿ 7 ರನ್ ಗಳಿಸಬೇಕಾಗಿತ್ತು. ಇದಾದ ನಂತರ, ಕೊನೆಯ 6 ಎಸೆತಗಳಲ್ಲಿಯೂ 7 ರನ್‌ಗಳು ಬೇಕಾಗಿದ್ದವು. ಆದರೆ ಒತ್ತಡದಲ್ಲಿಯೂ ಮ್ಯಾಟ್ ಹೆನ್ರಿ ಅದ್ಭುತ ಬೌಲಿಂಗ್ ಮಾಡಿ ಕೊನೆಯ ಓವರ್ನಲ್ಲಿ ಕೇವಲ 3 ರನ್ ನೀಡಿ 2 ವಿಕೆಟ್‌ಗಳನ್ನು ಪಡೆದರು. ಇದರಿಂದಾಗಿ ನ್ಯೂಜಿಲೆಂಡ್ ತಂಡವು ಈ ಪಂದ್ಯವನ್ನು 3 ರನ್‌ಗಳಿಂದ ಗೆದ್ದುಕೊಂಡಿತು. ಇಡೀ ಟೂರ್ನಿಯಲ್ಲಿ ಅಜೇಯ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಲೀಗ್ ಹಂತದಲ್ಲಿ ಆಡಿದ ನಾಲ್ಕು ಪಂದ್ಯಗಳನ್ನು ಗೆಲ್ಲುವುದರೊಂದಿಗೆ ಫೈನಲ್ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:42 pm, Sat, 26 July 25