NZ vs SL: ವೆಲ್ಲಿಂಗ್ಟನ್​ನಲ್ಲಿ ಇನ್ನಿಂಗ್ಸ್ ಸೋಲುಂಡ ಲಂಕಾ; ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್

NZ vs SL: ವೆಲ್ಲಿಂಗ್ಟನ್​ನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಕಿವೀಸ್ ತಂಡ ಇನ್ನಿಂಗ್ಸ್ ಹಾಗೂ 58 ರನ್​ಗಳ ಬೃಹತ್ ಅಂತರದ ಜಯ ಸಾಧಿಸಿದೆ.

NZ vs SL: ವೆಲ್ಲಿಂಗ್ಟನ್​ನಲ್ಲಿ ಇನ್ನಿಂಗ್ಸ್ ಸೋಲುಂಡ ಲಂಕಾ; ಸರಣಿ ಕ್ಲೀನ್ ಸ್ವೀಪ್ ಮಾಡಿದ ನ್ಯೂಜಿಲೆಂಡ್
ನ್ಯೂಜಿಲೆಂಡ್ ಟೆಸ್ಟ್ ತಂಡ

Updated on: Mar 20, 2023 | 12:46 PM

ವೆಲ್ಲಿಂಗ್ಟನ್​ನಲ್ಲಿ ನಡೆದ ನ್ಯೂಜಿಲೆಂಡ್ ಮತ್ತು ಶ್ರೀಲಂಕಾ (Sri Lanka vs New Zealand ) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಕಿವೀಸ್ ತಂಡ ಇನ್ನಿಂಗ್ಸ್ ಹಾಗೂ 58 ರನ್​ಗಳ ಬೃಹತ್ ಅಂತರದ ಜಯ ಸಾಧಿಸಿದೆ. ಇದರೊಂದಿಗೆ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕಿವೀಸ್ ಕ್ಲೀನ್ ಸ್ವೀಪ್ ಮಾಡಿದೆ. ವೆಲ್ಲಿಂಗ್‌ಟನ್‌ನಲ್ಲಿ (Wellington Test) ಶ್ರೀಲಂಕಾ ತಂಡಕ್ಕೆ ಫಾಲೋ-ಆನ್‌ ಹೇರಿದ ನ್ಯೂಜಿಲೆಂಡ್ ತಂಡ ಇನ್ನಿಂಗ್ಸ್ ಜಯ ದಾಖಲಿಸಿತು. ಇದಕ್ಕೂ ಮೊದಲು ಕ್ರೈಸ್ಟ್‌ಚರ್ಚ್​ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಶ್ರೀಲಂಕಾ ತಂಡವನ್ನು 1 ರನ್​ಗಳಿಂದ ಮಣಿಸಿದ್ದ ನ್ಯೂಜಿಲೆಂಡ್ ತಂಡ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿತ್ತು. ಇದೇ ಟೆಸ್ಟ್​ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ್ದ ಟಿಮ್ ಸೌಥಿ (Tim Southee) ಬಳಗ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಫ್ (ICC World Test Championship)​ ಫೈನಲ್​ಗೇರಲು ಹಾದಿಯನ್ನು ಸುಗಮಗೊಳಿಸಿತ್ತು.​

ವೆಲ್ಲಿಂಗ್ಟನ್ ಟೆಸ್ಟ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿಯೇ ಸ್ಕೋರ್ ಬೋರ್ಡ್‌ನಲ್ಲಿ 580 ರನ್‌ಗಳ ಬೃಹತ್ ಟಾರ್ಗೆಟ್ ಪೋಸ್ಟ್ ಮಾಡಿತು. 8 ವಿಕೆಟ್ ಕಳೆದುಕೊಂಡು 580 ರನ್ ಕಲೆ ಹಾಕಿದ ಕಿವೀಸ್ ಪಡೆ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಕಿವೀಸ್ ಪರ ಕೇನ್ ವಿಲಿಯಮ್ಸನ್ ಮತ್ತು ಹೆನ್ರಿ ನಿಕೋಲ್ಸ್ ಇಬ್ಬರೂ ದ್ವಿಶತಕ ಸಿಡಿಸಿ ಮಿಂಚಿದರು.

IPL 2023: ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ 10 ವಿದೇಶಿ ಆಟಗಾರರು ಇವರೇ..

ರನ್ ಶಿಖರ ಕಟ್ಟಿದ ಕೇನ್, ಹೆನ್ರಿ

ನ್ಯೂಜಿಲೆಂಡ್ ತಂಡವನ್ನು 580 ರನ್‌ಗಳಿಗೆ ಕೊಂಡೊಯ್ಯುವಲ್ಲಿ ಕೇನ್ ವಿಲಿಯಮ್ಸನ್ ಹಾಗೂ ಹೆನ್ರಿ ನಿಕೋಲ್ಸ್ ಪ್ರಮುಖ ಪಾತ್ರವಹಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಕೇನ್ ವಿಲಿಯಮ್ಸನ್ 215 ರನ್ ಬಾರಿಸಿದರೆ, ಹೆನ್ರಿ ನಿಕೋಲ್ಸ್ 240 ಎಸೆತಗಳನ್ನು ಎದುರಿಸಿ ಅಜೇಯ 200 ರನ್ ಬಾರಿಸಿದರು. ಇವರಿಬ್ಬರ ನಡುವೆ 350ಕ್ಕೂ ಹೆಚ್ಚು ರನ್​ಗಳ ಜೊತೆಯಾಟ ಕೂಡ ಏರ್ಪಟ್ಟಿತ್ತು. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿಯೇ ಮೇಲುಗೈ ಸಾಧಿಸಿದ ಕಿವೀಸ್, ಶ್ರೀಲಂಕಾ ತಂಡದ ಮೇಲೆ ಒತ್ತಡ ಹೇರಿತು.

164 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಶ್ರೀಲಂಕಾ

ನ್ಯೂಜಿಲೆಂಡ್ ನೀಡಿದ ಬಿಗ್ ಟಾರ್ಗೆಟ್ ಬೆನ್ನಟ್ಟಿದ ಲಂಕಾ ಪಡೆ ಎಲ್ಲಿಯೂ ಹೋರಾಟದ ಪ್ರದರ್ಶನ ನೀಡಲಿಲ್ಲ. ನಾಯಕ ದಿಮುತ್ ಕರುಣಾರತ್ನೆ ಅವರ 89 ರನ್‌ಗಳ ಹೊರತಾಗಿಯೂ ತಂಡ ಮೊದಲ ಇನ್ನಿಂಗ್ಸ್ ಕೇವಲ 164 ರನ್‌ಗಳಿಗೆ ಕುಸಿಯಿತು. ಇದರಿಂದ ದೊಡ್ಡ ಮುನ್ನಡೆ ಪಡೆದ ಕಿವೀಸ್ ಪಡೆ ಶ್ರೀಲಂಕಾಗೆ ಫಾಲೋ-ಆನ್ ನೀಡಲು ನಿರ್ಧರಿಸಿತು.

ಎರಡನೇ ಇನ್ನಿಂಗ್ಸ್‌ನಲ್ಲಿ 358 ರನ್​ಗಳಿಗೆ ಆಲೌಟ್

ಪಂದ್ಯದ ಮೂರನೇ ದಿನದವರೆಗೆ ಶ್ರೀಲಂಕಾದ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 2 ವಿಕೆಟ್‌ಗಳು ಮಾತ್ರ ಬಿದ್ದಿದ್ದವು. ಆದರೆ ನಾಲ್ಕನೇ ದಿನ ಶ್ರೀಲಂಕಾ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 358 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ನ್ಯೂಜಿಲೆಂಡ್‌ ತಂಡ ಇನಿಂಗ್ಸ್ ಮತ್ತು 58 ರನ್‌ಗಳ ಗೆಲುವು ಸಾಧಿಸಿತು. ಇಡೀ ಸರಣಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಕೇನ್ ವಿಲಿಯಮ್ಸನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹೆನ್ರಿ ನಿಕೋಲ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಬಾಚಿಕೊಂಡರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:39 pm, Mon, 20 March 23