ವಿಶ್ವಕಪ್ ವೇಳಾಪಟ್ಟಿಯಲ್ಲಿ ಮತ್ತೆ ಬದಲಾವಣೆ? ಹೈದರಾಬಾದ್ ಅಧಿಕಾರಿಗಳಿಂದ ಬಿಸಿಸಿಐಗೆ ಮನವಿ!
ODI World Cup 2023: ವಿವಿಧ ರಾಜ್ಯ ಸಂಸ್ಥೆಗಳ ಮನವಿಯ ನಂತರ ವಿಶ್ವಕಪ್ ವೇಳಾಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಯಿತು. ಆರಂಭಿಕ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಮತ್ತೊಮ್ಮೆ ಐಸಿಸಿ ಪರಿಷ್ಕೃತ ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಹೈದರಾಬಾದ್‌ನ ಅಧಿಕಾರಿಗಳು ಪಂದ್ಯಗಳ ದಿನಾಂಕವನ್ನು ಬದಲಾಯಿಸಲು ವಿನಂತಿಸಿದ್ದಾರೆ ಎಂದು ವರದಿಯಾಗಿದೆ.

ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಏಕದಿನ ವಿಶ್ವಕಪ್ಗೆ (ODI World Cup 2023) ಪ್ರಾರಂಭವಾಗಲು ಇನ್ನು 2 ತಿಂಗಳಿಗಿಂತ ಕಡಿಮೆ ಸಮಯವಿದೆ. ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಇಡೀ ಪಂದ್ಯಾವಳಿ ಭಾರತದಲ್ಲಿ ನಡೆಯಲಿದೆ. ಹೀಗಾಗಿ ಪಂದ್ಯಾವಳಿಗೆ ಯಾವುದೇ ತೊಂದರೆಯಾಗದಂತೆ ನೀಗವಹಿಸಲು ಬಿಸಿಸಿಐ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ವಿಶ್ವಕಪ್ನ ಟಿಕೆಟ್‌ಗಳ ಮಾರಾಟ ಕೂಡ ಆರಂಭವಾಗಲಿವೆ. ಆದರೆ ಅದಕ್ಕೂ ಮುನ್ನ ಬಿಸಿಸಿಐಗೆ (BCCI) ಹೊಸ ತಲೆನೋವು ಎದುರಾಗಿದೆ. ವಾಸ್ತವವಾಗಿ ವಿವಿಧ ರಾಜ್ಯ ಸಂಸ್ಥೆಗಳ ಮನವಿಯ ನಂತರ ವಿಶ್ವಕಪ್ ವೇಳಾಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಯಿತು. ಆರಂಭಿಕ ವೇಳಾಪಟ್ಟಿಯನ್ನು ಪ್ರಕಟಿಸಿದ ನಂತರ ಮತ್ತೊಮ್ಮೆ ಐಸಿಸಿ (ICC) ಪರಿಷ್ಕೃತ ವಿಶ್ವಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಹೈದರಾಬಾದ್‌ನ (Hyderabad) ಅಧಿಕಾರಿಗಳು ಪಂದ್ಯಗಳ ದಿನಾಂಕವನ್ನು ಬದಲಾಯಿಸಲು ವಿನಂತಿಸಿದ್ದಾರೆ ಎಂದು ವರದಿಯಾಗಿದೆ.
ವಾಸ್ತವವಾಗಿ ಹೈದರಾಬಾದ್‌ನ ಉಪ್ಪಲ್‌ನಲ್ಲಿರುವ ರಾಜೀವ್ ಗಾಂಧಿ ಕ್ರೀಡಾಂಗಣವು ಅಕ್ಟೋಬರ್ 9 ರಂದು ನ್ಯೂಜಿಲೆಂಡ್ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ನಂತರದ ದಿನವೇ ಅಂದರೆ, ಅಕ್ಟೋಬರ್ 10 ರಂದು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ಇದೇ ಮೈದಾನದಲ್ಲಿ ಮತ್ತೊಂದು ಪಂದ್ಯ ನಡೆಯಲ್ಲಿದೆ. ವಾಸ್ತವವಾಗಿ ಪಾಕಿಸ್ತಾನ-ಶ್ರೀಲಂಕಾ ನಡುವಿನ ಪಂದ್ಯ ಅಕ್ಟೋಬರ್ 12 ರಂದು ನಡೆಯಬೇಕಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯಲ್ಲಿ ಕೆಲವು ಪಂದ್ಯಗಳ ದಿನಾಂಕದ ಬದಲಾದ ಪರಿಣಾಮದಿಂದಾಗಿ 12 ರಂದು ನಡೆಯಬೇಕಿದ್ದ ಪಾಕಿಸ್ತಾನ-ಶ್ರೀಲಂಕಾ ನಡುವಿನ ಪಂದ್ಯವನ್ನು ಅಕ್ಟೋಬರ್ 10ಕ್ಕೆ ಬದಲಾಯಿಸಿತು.
ಭದ್ರತೆಯನ್ನು ಒದಗಿಸಲು ಸಾಧ್ಯವಿಲ್ಲ
ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಇದೀಗ ವೇಳಾಪಟ್ಟಿಯಲ್ಲಿ ಬದಲಾವಣೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಪತ್ರ ಬರೆದಿದೆ ಎಂದು ವರದಿ ಮಾಡಿದೆ. ಇದಕ್ಕೆ ಕಾರಣವನ್ನು ನೀಡಿರುವ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್, ಹೈದರಾಬಾದ್ ಪೊಲೀಸರು ಸತತ ಎರಡು ದಿನಗಳಲ್ಲಿ ನಡೆಯಲ್ಲಿರುವ ಎರಡು ಪಂದ್ಯಗಳಿಗೆ ಭದ್ರತೆಯನ್ನು ಒದಗಿಸಲು ಸಾಧ್ಯವಿಲ್ಲ. ಹೀಗಾಗಿ ಪಂದ್ಯದ ದಿನಾಂಕವನ್ನು ಬದಲಿಸಲು ಮನವಿ ಮಾಡಿದೆ ಎಂದು ವರದಿಯಾಗಿದೆ.
ಈ ಮೊದಲು ವೇಳಾಪಟ್ಟಿಯಲ್ಲಿ ಬದಲಾವಣೆ
ವಾಸ್ತವವಾಗಿ ಐಸಿಸಿ ಪ್ರಕಟಿಸಿದ್ದ ಹೊಸ ವೇಳಾಪಟ್ಟಿಯ ಪ್ರಕಾರ ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ ಅಂದು ಭಾರತದಲ್ಲಿ ನವರಾತ್ರಿ ಇರುವುದರಿಂದ ಪಂದ್ಯದ ಭದ್ರತೆಗೆ ಎದುರಾಗುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಹೈವೋಲ್ಟೇಜ್ ಕದನವನ್ನು ಅಕ್ಟೋಬರ್ 14 ರಂದು ನಡೆಸಲು ತೀರ್ಮಾನಿಸಲಾಯಿತು. ಹಾಗೆಯೇ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯವನ್ನು ಅಕ್ಟೋಬರ್ 9 ಕ್ಕೆ ಬದಲಿಸಲಾಯಿತು.
ಹಾಗೆಯೇ ನವೆಂಬರ್ 12 ರಂದು ಕಾಳಿ ಪೂಜೆ ಹಬ್ಬ ಇರುವುದರಿಂದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ದಿನಾಂಕವನ್ನು ಬದಲಿಸುವಂತೆ ಕ್ರಿಕೆಟ್ ಅಸೋಸಿಯೇಷನ್ ಆಫ್ ಬೆಂಗಾಲ್ ಕೂಡ ವಿನಂತಿಸಿತ್ತು. ಹೀಗಾಗಿ ಆ ಪಂದ್ಯವನ್ನು ಈಗ ನವೆಂಬರ್ 11 ರಂದು ನಡೆಸಲು ತೀರ್ಮಾನಿಸಲಾಗಿದೆ.
ಈ ಮೈದಾನದಲ್ಲಿ ಭಾರತದ ಪಂದ್ಯಗಳಿಲ್ಲ
ಇದೀಗ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮನವಿ ಮೇರೆಗೆ ಮತ್ತೊಮ್ಮೆ ವೇಳಾಪಟ್ಟಿ ಬದಲಾವಣೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಎರಡು ಪಂದ್ಯಗಳ ಹೊರತಾಗಿ, ಈ ಮೈದಾನದಲ್ಲಿ ಅಕ್ಟೋಬರ್ 6 ರಂದು ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್ಸ್ ನಡುವಿನ ಪಂದ್ಯ ಕೂಡ ನಡೆಯಲ್ಲಿದೆ. ಪ್ರಾಸಂಗಿಕವಾಗಿ, ಈ ಮೈದಾನದಲ್ಲಿ ಟೀಂ ಇಂಡಿಯಾದ ಯಾವುದೇ ಪಂದ್ಯವನ್ನು ನಿಗದಿಪಡಿಸಲಾಗಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
