ಅಕ್ಟೋಬರ್ 5 ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ಗೆ (ODI World Cup 2023) ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಟೂರ್ನಿಯ ಉದ್ಘಾಟನಾ ಪಂದ್ಯ ವಿಶ್ವದ ಅತ್ಯಂತ ದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಮೈದಾನದಲ್ಲಿ ನಡೆಯಲ್ಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಹಾಗೂ ಕಳೆದ ಬಾರಿಯ ರನ್ನರ್ ಅಪ್ ತಂಡವಾದ ನ್ಯೂಜಿಲೆಂಡ್ (England vs New Zealand) ನಡುವೆ ನಡೆಯಲ್ಲಿದೆ. ಆದರೆ ಅದಕ್ಕೂ ಮುನ್ನ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳು ಇದೇ ಸೆಪ್ಟೆಂಬರ್ 29 ರಿಂದ ಆರಂಭವಾಗಲಿರುವ ಅಭ್ಯಾಸ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಈಗಾಗಲೇ ನಿಗದಿಯಾಗಿರುವಂತೆ ಪಾಕಿಸ್ತಾನ ತಂಡ ಕೂಡ ಸೆಪ್ಟೆಂಬರ್ 29 ರಂದು ನ್ಯೂಜಿಲೆಂಡ್ (Pakistan vs New Zealand) ವಿರುದ್ಧ ತನ್ನ ಅಭ್ಯಾಸ ಪಂದ್ಯವನ್ನು ಆಡಲಿದೆ.
ಈ ಪಂದ್ಯಕ್ಕಾಗಿ ನ್ಯೂಜಿಲೆಂಡ್ ತಂಡದ ಕೆಲ ಆಟಗಾರರು ಈಗಾಗಲೇ ಮಂಗಳವಾರ ರಾತ್ರಿಯೇ ಹೈದರಾಬಾದ್ ತಲುಪಿದ್ದು, ಉಳಿದ ಆಟಗಾರರು ಬುಧವಾರ ನಗರಕ್ಕೆ ಆಗಮಿಸಲಿದ್ದಾರೆ. ತಡವಾಗಿ ವೀಸಾ ಪಡೆದ ಪಾಕಿಸ್ತಾನಿ ಆಟಗಾರರು ದುಬೈ ಮೂಲಕ ಬುಧವಾರ ರಾತ್ರಿ 8.15ಕ್ಕೆ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಪಾರ್ಕ್ ಹಯಾತ್ ಹೋಟೆಲ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ವಸತಿ ವ್ಯವಸ್ಥೆ ಮಾಡಲಾಗಿದ್ದು, ನ್ಯೂಜಿಲೆಂಡ್ ತಂಡಕ್ಕೆ ಐಟಿಸಿ ಕಾಕತೀಯಾದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
‘ತಪ್ಪು ನಮ್ಮದೆ ಭಾರತವನ್ನು ದೂರಬೇಡಿ’; ವೀಸಾ ವಿಳಂಬ ವಿವಾದಕ್ಕೆ ಸ್ಪಷ್ಟನೆ ನೀಡಿದ ಪಾಕ್ ಮಂಡಳಿ
ಪಾಕಿಸ್ತಾನ ತಂಡ ಸುಮಾರು 15 ದಿನಗಳ ಕಾಲ ಹೈದರಾಬಾದ್‌ನಲ್ಲಿ ತಂಗಲಿದೆ. ಸೆಪ್ಟೆಂಬರ್ 29 ರಂದು ಪಾಕಿಸ್ತಾನ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ನಂತರ ಅಕ್ಟೋಬರ್ 3 ರಂದು ಆಸೀಸ್ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಇದಲ್ಲದೆ ವಿಶ್ವಕಪ್ ಟೂರ್ನಿಯ ಮೂರು ಪ್ರಮುಖ ಪಂದ್ಯಗಳು ಹೈದರಾಬಾದ್‌ನಲ್ಲಿಯೇ ನಡೆಯಲಿವೆ. ಇದರಲ್ಲಿ ಪಾಕಿಸ್ತಾನ ಮತ್ತು ನೆದರ್ಲೆಂಡ್ ನಡುವಿನ ಪಂದ್ಯ ಅಕ್ಟೋಬರ್ 6 ರಂದು ನಡೆದರೆ, ಅಕ್ಟೋಬರ್ 9 ರಂದು ನೆದರ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ನಡೆಯಲ್ಲಿದೆ. ಕೊನೆಯದಾಗಿ ಅಕ್ಟೋಬರ್ 12 ರಂದು ಶ್ರೀಲಂಕಾ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯ ನಡೆಯಲ್ಲಿದೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಅಭ್ಯಾಸ ಪಂದ್ಯವು ಸೆಪ್ಟೆಂಬರ್ 29 ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಈ ಮೊದಲು ಪಂದ್ಯದ ಟಿಕೆಟ್‌ಗಳನ್ನು ಮಾರಾಟ ಮಾಡಿತ್ತು. ಆದರೆ, ಗಣೇಶ ವಿಸರ್ಜನೆ ಹಾಗೂ ಮಿಲಾದ್ ಉನ್ ನಬಿ ಮೆರವಣಿಗೆ ಏಕಕಾಲದಲ್ಲಿ ಇರುವುದರಿಂದ ಪಂದ್ಯಕ್ಕೆ ಸೂಕ್ತ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹೈದರಾಬಾದ್ ಪೊಲೀಸರು, ಮಂಡಳಿಗೆ ತಿಳಿಸಿದ್ದರು. ಹೀಗಾಗಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮಾರಾಟವಾದ ಟಿಕೆಟ್‌ಗಳ ಹಣವನ್ನು ಮರುಪಾವತಿ ಮಾಡುತ್ತಿದ್ದು, ಈ ಅಭ್ಯಾಸ ಪಂದ್ಯವನ್ನು ಅಭಿಮಾನಿಗಳಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಹೈದರಾಬಾದ್ ಮೈದಾನದಲ್ಲಿ ಅಭ್ಯಾಸ ಪಂದ್ಯವಲ್ಲದೆ, ವಿಶ್ವಕಪ್‌ನಲ್ಲಿ ಪ್ರಮುಖ ಪಂದ್ಯಗಳನ್ನು ಆಡಲಿರುವ ಆಸ್ಟ್ರೇಲಿಯಾ, ನೆದರ್ಲೆಂಡ್ ಮತ್ತು ಶ್ರೀಲಂಕಾ ತಂಡಗಳಿಗೆ ಬಿಸಿಸಿಐ ವಸತಿ ವ್ಯವಸ್ಥೆ ಮಾಡಿದೆ. ಬಿಸಿಸಿಐ ಅಧಿಕಾರಿಗಳು ಆಸ್ಟ್ರೇಲಿಯಾ ಮತ್ತು ನೆದರ್ಲೆಂಡ್ ತಂಡಗಳಿಗೆ ತಾಜ್ ಕೃಷ್ಣದಲ್ಲಿ ಮತ್ತು ಶ್ರೀಲಂಕಾ ತಂಡಕ್ಕೆ ನೋವಾಟೆಲ್ ಏರ್‌ಪೋರ್ಟ್ ಹೋಟೆಲ್‌ನಲ್ಲಿ ವಸತಿ ವ್ಯವಸ್ಥೆ ಮಾಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Wed, 27 September 23