ಭಾರತ ಮತ್ತು ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್ ಪಂದ್ಯವು ನಾಳೆಯಿಂದ (ಫೆ.23) ಶುರುವಾಗಲಿದೆ. ರಾಂಚಿಯ ಜೆಎಸ್ಸಿಎ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಇಂಗ್ಲೆಂಡ್ ಪಾಲಿಗೆ ನಿರ್ಣಾಯಕ. ಏಕೆಂದರೆ ಐದು ಪಂದ್ಯಗಳ ಸರಣಿಯಲ್ಲಿ ಇದೀಗ ಟೀಮ್ ಇಂಡಿಯಾ 2-1 ಅಂತರದಿಂದ ಮುನ್ನಡೆ ಹೊಂದಿದೆ. ಒಂದು ವೇಳೆ 4ನೇ ಪಂದ್ಯದಲ್ಲಿ ಇಂಗ್ಲೆಂಡ್ ಸೋತರೆ ಸರಣಿ ಭಾರತ ತಂಡದ ಪಾಲಾಗಲಿದೆ. ಹೀಗಾಗಿ ರಾಂಚಿ ಟೆಸ್ಟ್ ಪಂದ್ಯದಲ್ಲಿ ಗೆದ್ದು ಸರಣಿಯನ್ನು ಸಮಬಲಗೊಳಿಸುವ ಅನಿವಾರ್ಯತೆ ಬೆನ್ ಸ್ಟೋಕ್ಸ್ ಪಡೆ ಮುಂದಿದೆ.
ಇದಕ್ಕಾಗಿಯೇ ತಂಡದ ಬೌಲಿಂಗ್ ಲೈನಪ್ನಲ್ಲಿ ಮಹತ್ವದ ಬದಲಾವಣೆ ಮಾಡಿಕೊಳ್ಳಲು ಇಂಗ್ಲೆಂಡ್ ತಂಡ ಪ್ಲ್ಯಾನ್ ರೂಪಿಸಿದೆ. ಅತ್ತ ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಹಿರಿಯ ವೇಗಿ ಜೇಮ್ಸ್ ಅ್ಯಂಡರ್ಸನ್ಗೆ ನಾಲ್ಕನೇ ಮ್ಯಾಚ್ ವೇಳೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ.
ಅಲ್ಲದೆ ಅ್ಯಂಡರ್ಸನ್ ಬದಲಿ ಆಟಗಾರನಾಗಿ ಒಲೀ ರಾಬಿನ್ಸನ್ ಅವರನ್ನು ಕಣಕ್ಕಿಳಿಸಲು ಇಂಗ್ಲೆಂಡ್ ಯೋಜನೆ ರೂಪಿಸಿದೆ. ಏಕೆಂದರೆ ಕಳೆದ ಮೂರು ಪಂದ್ಯಗಳಲ್ಲೂ ರಾಬಿನ್ಸನ್ ಬೆಂಚ್ ಕಾದಿದ್ದಾರೆ. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಅವರನ್ನು ಆಡಿಸುವ ಸಾಧ್ಯತೆ ಹೆಚ್ಚಿದೆ.
ಒಲೀ ರಾಬಿನ್ಸನ್ ಟೀಮ್ ಇಂಡಿಯಾ ವಿರುದ್ಧ ಇದುವರೆಗೆ 4 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 8 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿರುವ ಅವರು ಬರೋಬ್ಬರಿ 21 ವಿಕೆಟ್ಗಳನ್ನು ಕಬಳಿಸಿದ್ದಾರೆ. ಇದೇ ವೇಳೆ 2 ಬಾರಿ ಐದು ವಿಕೆಟ್ಗಳನ್ನು ಸಹ ಪಡೆದಿದ್ದಾರೆ.
ಅಂದರೆ ಭಾರತದ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ದಾಖಲೆಯೊಂದು ರಾಬಿನ್ಸನ್ ಬೆನ್ನಿಗಿದೆ. ಹೀಗಾಗಿ ರಾಂಚಿ ಟೆಸ್ಟ್ನಲ್ಲಿ ಇಂಗ್ಲೆಂಡ್ ತಂಡವು ಘಾತಕ ವೇಗಿಯನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ ಎನ್ನಬಹುದು.
ಹೀಗೆ ನಿರ್ಣಾಯಕ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಒಲೀ ರಾಬಿನ್ಸನ್ ಟೀಮ್ ಇಂಡಿಯಾ ಪಾಲಿಗೆ ಮಾರಕವಾಗಲಿದ್ದಾರಾ ಎಂಬುದು ಮುಂದಿನ ಐದು ದಿನಗಳಲ್ಲಿ ಗೊತ್ತಾಗಲಿದೆ. ಅಲ್ಲಿಯವರೆಗೂ ಕಾಯಲೇಬೇಕು.
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂಡರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಡ್ಯಾನ್ ಲಾರೆನ್ಸ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಒಲೀ ಪೋಪ್, ಒಲೀ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.
ಇದನ್ನೂ ಓದಿ: Australia: ಆಸ್ಟ್ರೇಲಿಯಾ ದಾಖಲೆ… ಅತ್ಯಂತ ಕಳಪೆ ದಾಖಲೆ
ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯವು ಫೆಬ್ರವರಿ 23 ರಿಂದ ಶುರುವಾಗಲಿದೆ. ಭಾರತೀಯ ಕಾಲಮಾನ ಬೆಳಿಗ್ಗೆ 9 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದ್ದು, 9.30 ರಿಂದ ಪಂದ್ಯ ಶುರುವಾಗಲಿದೆ. ಇನ್ನು ಈ ಪಂದ್ಯದ ನೇರ ಪ್ರಸಾರವನ್ನು ಸ್ಪೋರ್ಟ್ಸ್ 18 ಚಾನೆಲ್ ಹಾಗೂ ಜಿಯೋ ಸಿನಿಮಾ ಆ್ಯಪ್ನಲ್ಲಿ ವೀಕ್ಷಿಸಬಹುದು.