ವಿರಾಟ್ ಕೊಹ್ಲಿ vs ಬಾಬರ್ ಆಝಂ... ಈ ಇಬ್ಬರಲ್ಲಿ ಯಾರ ಕವರ್ ಡ್ರೈವ್ ಶಾಟ್ ಉತ್ತಮ ಎಂಬ ಪ್ರಶ್ನೆ ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಅತ್ತ ಪ್ರಶ್ನೆ ಕೇಳಿಸಿಕೊಂಡ ಅನೇಕ ಆಟಗಾರರು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕಿಂಗ್ ಕೊಹ್ಲಿ ಹೆಸರನ್ನೇಳಿದರೆ, ಮತ್ತೆ ಕೆಲವರು ಪಾಕಿಸ್ತಾನ್ ತಂಡದ ಮಾಜಿ ನಾಯಕ ಬಾಬರ್ ಆಝಂ ಹೆಸರನ್ನು ಉಚ್ಚರಿಸಿದ್ದಾರೆ.
ಇದೇ ಪ್ರಶ್ನೆಯನ್ನು ಪಾಕಿಸ್ತಾನದ ಇಬ್ಬರು ಎಡಗೈ ವೇಗಿಗಳ ಮುಂದಿಡಲಾಗಿದೆ. ಈ ಇಬ್ಬರು ಬೌಲರ್ಗಳು ವಿರಾಟ್ ಕೊಹ್ಲಿಗೆ ಚೆಂಡೆಸೆದಿದ್ದಾರೆ. ಹಾಗೆಯೇ ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಬಾಬರ್ ಆಝಂಗೂ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಶಾಹೀನ್ ಅಫ್ರಿದಿ ಹಾಗೂ ಮೊಹಮ್ಮದ್ ಅಮೀರ್ ಅವರ ಉತ್ತರ ಏನಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿತ್ತು.
ಶೊಯೆಬ್ ಮಲಿಕ್ ನಡೆಸಿಕೊಡುವ ಚಿಟ್ಚಾಟ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಮೊಹಮ್ಮದ್ ಅಮೀರ್ ಹಾಗೂ ಶಾಹೀನ್ ಅಫ್ರಿದಿಗೆ, ವಿರಾಟ್ ಕೊಹ್ಲಿ ಮತ್ತು ಬಾಬರ್ ಆಝಂ... ಇವರಿಬ್ಬರಲ್ಲಿ ಯಾರ ಕವರ್ ಡ್ರೈವ್ ಅತ್ಯುತ್ತಮ ಎಂಬ ಪ್ರಶ್ನೆಯನ್ನು ಕೇಳಲಾಗಿದೆ.
ಈ ಪ್ರಶ್ನೆಗೆ ಮೊಹಮ್ಮದ್ ಅಮೀರ್ ಥಟ್ಟನೆ ವಿರಾಟ್ ಕೊಹ್ಲಿ ಎಂದು ಉತ್ತರ ನೀಡಿದ್ದಾರೆ. ಅಮೀರ್ ಪ್ರಕಾರ ವಿಶ್ವ ಕ್ರಿಕೆಟ್ನಲ್ಲಿ ಕಿಂಗ್ ಕೊಹ್ಲಿ ಅತ್ಯುತ್ತಮ ಕವರ್ ಡ್ರೈವ್ ಶಾಟ್ ಬಾರಿಸುತ್ತಾರೆ. ಹೀಗಾಗಿ ಬಾಬರ್ಗಿಂತ ವಿರಾಟ್ ಕೊಹ್ಲಿಯ ಶಾಟ್ ಬೆಸ್ಟ್ ಎಂದಿದ್ದಾರೆ.
ಅತ್ತ ಪಾಕಿಸ್ತಾನ್ ತಂಡದ ನಾಯಕ ಶಾಹೀನ್ ಅಫ್ರಿದಿ, ಬಾಬರ್ ಆಝಂ ಅವರ ಕವರ್ ಡ್ರೈವ್ ಅತ್ಯುತ್ತಮ ಎಂದಿದ್ದಾರೆ. ಇದರ ಬೆನ್ನಲ್ಲೇ ಮೊಹಮ್ಮದ್ ಅಮೀರ್ ಆಶ್ಚರ್ಯದಿಂದ ಶಾಹೀನ್ ಮುಖವನ್ನು ದಿಟ್ಟಿಸಿ ನೋಡಿದ್ದು, ಇಬ್ಬರೂ ಕೂಡ ನಗಲಾರಂಭಿಸಿದ್ದಾರೆ.
ಅಂದರಂತೆ ಮೊಹಮ್ಮದ್ ಅಮೀರ್ ಪ್ರಕಾರ ವಿರಾಟ್ ಕೊಹ್ಲಿಯ ಕವರ್ ಡ್ರೈವ್ ವಿಶ್ವದಲ್ಲೇ ಅತ್ಯುತ್ತಮವಾಗಿದ್ದರೆ, ಶಾಹೀನ್ ಅಫ್ರಿದಿ ಬಾಬರ್ ಆಝಂ ಬಾರಿಸುವ ಕವರ್ ಡ್ರೈವ್ ಬೆಸ್ಟ್ ಎಂದಿದ್ದಾರೆ. ಇದೀಗ ಇಬ್ಬರು ಎಡಗೈ ವೇಗಿಗಳು ನೀಡಿರುವ ಉತ್ತರ ವೈರಲ್ ಆಗಿದೆ.
Published On - 1:03 pm, Thu, 22 February 24