ಇಂಗ್ಲೆಂಡ್​ನಲ್ಲಿ ಅಬ್ಬರಿಸಿ ಹಲವು ದಾಖಲೆ ಬರೆದ ಪೃಥ್ವಿ ಶಾ

| Updated By: ಝಾಹಿರ್ ಯೂಸುಫ್

Updated on: Aug 15, 2023 | 10:39 PM

Prithvi Shaw: ಇಂಗ್ಲೆಂಡ್ ಪಿಚ್​ನಲ್ಲಿ ತಮ್ಮ ಬ್ಯಾಟಿಂಗ್ ಪವರ್ ತೋರಿಸುತ್ತಿರುವ ಪೃಥ್ವಿ ಶಾ ಈ ಬಾರಿಯ ಒನ್​ ಡೇ ಕಪ್​ನಲ್ಲಿ 400 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕೇವಲ 4 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಯುವ ದಾಂಡಿಗ ದ್ವಿಶತಕ ಹಾಗೂ ಶತಕದೊಂದಿಗೆ ಇದುವರೆಗೆ 429 ರನ್​ ಕಲೆಹಾಕಿದ್ದಾರೆ.

ಇಂಗ್ಲೆಂಡ್​ನಲ್ಲಿ ಅಬ್ಬರಿಸಿ ಹಲವು ದಾಖಲೆ ಬರೆದ ಪೃಥ್ವಿ ಶಾ
Prithvi Shaw
Follow us on

ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಒನ್​ ಡೇ ಕಪ್ ಟೂರ್ನಿಯಲ್ಲಿ ಪೃಥ್ವಿ ಶಾ (Prithvi Shaw) ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. ಈ ಟೂರ್ನಿಯ 23ನೇ ಪಂದ್ಯದಲ್ಲಿ ಸೋಮರ್‌ಸೆಟ್ ವಿರುದ್ಧ ದ್ವಿಶತಕ ಸಿಡಿಸಿ ಮಿಂಚಿದ್ದ ಟೀಮ್ ಇಂಡಿಯಾ ಆಟಗಾರ, ಆ ಬಳಿಕ ಡರ್ಹಾಮ್ ವಿರುದ್ಧ ಸೆಂಚುರಿ ಸಿಡಿಸಿದ್ದರು.

ಡರ್ಹಾಮ್ ವಿರುದ್ಧದ ಪಂದ್ಯದಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ ಕೇವಲ 76 ಎಸೆತಗಳಲ್ಲಿ 15 ಫೋರ್​ ಮತ್ತು 7 ಸಿಕ್ಸರ್‌ಗಳೊಂದಿಗೆ ಅಜೇಯ 125 ರನ್ ಸಿಡಿಸಿದ್ದರು. ಈ 125 ರನ್​ಗಳೊಂದಿಗೆ ಪೃಥ್ವಿ ಶಾ ಲೀಸ್ಟ್​ ಎ ಕ್ರಿಕೆಟ್​ನಲ್ಲಿ 3 ಸಾವಿರ ರನ್ ಪೂರೈಸಿದ್ದಾರೆ.

ಪೃಥ್ವಿ ಪವರ್​ಗೆ ದಾಖಲೆಗಳು ನಿರ್ಮಾಣ:

ಇಂಗ್ಲೆಂಡ್ ಪಿಚ್​ನಲ್ಲಿ ತಮ್ಮ ಬ್ಯಾಟಿಂಗ್ ಪವರ್ ತೋರಿಸುತ್ತಿರುವ ಪೃಥ್ವಿ ಶಾ ಈ ಬಾರಿಯ ಒನ್​ ಡೇ ಕಪ್​ನಲ್ಲಿ 400 ರನ್ ಕಲೆಹಾಕಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಕೇವಲ 4 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಯುವ ದಾಂಡಿಗ ದ್ವಿಶತಕ ಹಾಗೂ ಶತಕದೊಂದಿಗೆ ಇದುವರೆಗೆ 429 ರನ್​ ಕಲೆಹಾಕಿದ್ದಾರೆ.

ಮೂರು ಸಾವಿರ ರನ್ ಸರದಾರ:

ಈ ಟೂರ್ನಿಯಲ್ಲಿ ನಾನೂರಕ್ಕೂ ಹೆಚ್ಚು ರನ್​ ಕಲೆಹಾಕುವ ಮೂಲಕ ಪೃಥ್ವಿ ಶಾ ಲೀಸ್ಟ್​ ಎ ಕ್ರಿಕೆಟ್​ನಲ್ಲಿ 3,000 ರನ್ ಪೂರೈಸಿದ್ದಾರೆ. ಅದು ಕೂಡ ಕೇವಲ 57 ಪಂದ್ಯಗಳಲ್ಲಿ ಎಂಬುದು ವಿಶೇಷ.

ಅಂದರೆ ಲೀಸ್ಟ್​ ಎ ಕ್ರಿಕೆಟ್​ 57 ಇನಿಂಗ್ಸ್ ಆಡಿರುವ ಪೃಥ್ವಿ ಶಾ 57.66 ಸರಾಸರಿಯಲ್ಲಿ ಒಟ್ಟು 3,056 ರನ್‌ ಗಳಿಸಿದ್ದಾರೆ. ಈ ವೇಳೆ 10 ಶತಕ ಹಾಗೂ 11 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಲೀಸ್ಟ್​ ಎ ಕ್ರಿಕೆಟ್​ನಲ್ಲಿ ಅತ್ಯುತ್ತಮ ಸರಾಸರಿ:

ಅತ್ಯುತ್ತಮ ಸರಾಸರಿಯೊಂದಿಗೆ ಲೀಸ್ಟ್ ಎ ಕ್ರಿಕೆಟ್​ನಲ್ಲಿ 2 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ ಭಾರತೀಯರ ಪಟ್ಟಿಯಲ್ಲಿ ಇದೀಗ ಪೃಥ್ವಿ ಶಾ ಮೂರನೇ ಸ್ಥಾನಕ್ಕೇರಿದ್ದಾರೆ.

ಈ ಪಟ್ಟಿಯಲ್ಲಿ ಯುವ ದಾಂಡಿಗ ರುತುರಾಜ್ ಗಾಯಕ್ವಾಡ್ (60.32) ಅಗ್ರಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ (58.15) ನಂತರದ ಸ್ಥಾನದಲ್ಲಿದ್ದಾರೆ. ಇದೀಗ 57.66 ಸರಾಸರಿಯೊಂದಿಗೆ ರನ್ ಪೇರಿಸಿ ಪೃಥ್ವಿ ಶಾ ಮೂರನೇ ಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ: ಭಾರತ ವಿಶ್ವಕಪ್ ತಂಡದಿಂದ 7 ಆಟಗಾರರು ಔಟ್..!

ಒಟ್ಟಿನಲ್ಲಿ ಕಳಪೆ ಫಾರ್ಮ್​ನಿಂದ ಟೀಮ್ ಇಂಡಿಯಾದಿಂದ ಹೊರಬಿದ್ದಿರುವ ಪೃಥ್ವಿ ಇದೀಗ ಆಂಗ್ಲರ ನಾಡಿನಲ್ಲಿ ಅಬ್ಬರಿಸುವ ಮೂಲಕ ಮತ್ತೆ ಭಾರತ ತಂಡ ಕದ ತಟ್ಟುವ ವಿಶ್ವಾಸದಲ್ಲಿದ್ದಾರೆ. ಈ ವಿಶ್ವಾಸದೊಂದಿಗೆ ಮುಂದಿನ ಪಂದ್ಯಗಳಲ್ಲೂ ಭರ್ಜರಿಯಾಗಿ ಬ್ಯಾಟ್ ಬೀಸಲಿದ್ದಾರಾ ಕಾದು ನೋಡಬೇಕಿದೆ.