ಆಸ್ಟ್ರೇಲಿಯಾ ತಂಡದ ಸ್ಟಾರ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ (David Warner) ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಆಸ್ಟ್ರೇಲಿಯಾ ಟೆಸ್ಟ್ ತಂಡದ ಆರಂಭಿಕ ಯಾರಾಗುತ್ತಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಈಗಾಗಲೇ ಸ್ಟೀವ್ ಸ್ಮಿತ್ (Steve Smith) ಉತ್ತರಿಸಿದ್ದಾರೆ. ಹೊಸ ಜವಾಬ್ದಾರಿಯೊಂದಿಗೆ ಆಸ್ಟ್ರೇಲಿಯಾ ಪರ ಇನಿಂಗ್ಸ್ ಆರಂಭಿಸಲು ನಾನು ಸಿದ್ಧನಿದ್ದೇನೆ ಎಂದು ಸ್ಟೀವ್ ಸ್ಮಿತ್ ತಿಳಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಮಿತ್ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
ಇದರ ಬೆನ್ನಲ್ಲೇ ಸ್ಟೀವ್ ಸ್ಮಿತ್ ಅವರನ್ನು ಆರಂಭಿಕನಾಗಿ ಆಡಿಸುವುದು ಉತ್ತಮ ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್. ಸ್ಮಿತ್ ಅತ್ಯುತ್ತಮ ಬ್ಯಾಟರ್. ಹೀಗಾಗಿ ಅವರು ಇನಿಂಗ್ಸ್ ಆರಂಭಿಸಿದರೆ ತಂಡಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.
ನನ್ನ ಪ್ರಕಾರ ಸ್ಟೀವ್ ಸ್ಮಿತ್ ಆರಂಭಿಕನಾಗಿ ಆಡಿದರೆ ಕೇವಲ 12 ತಿಂಗಳಲ್ಲೇ ಅವರು ನಂಬರ್-1 ಓಪನರ್ ಆಗಿ ಹೊರಹೊಮ್ಮಲಿದ್ದಾರೆ. ಇದರ ಬಗ್ಗೆ ಯಾವುದೇ ಸಂಶಯವೇ ಬೇಡ. ಏಕೆಂದರೆ ಸ್ಮಿತ್ 3ನೇ ಕ್ರಮಾಂಕದಲ್ಲಿ ಆಡಿದ ಆಟಗಾರ. ಈ ಕ್ರಮಾಂಕದಲ್ಲಿ ಬ್ಯಾಟ್ ಬೀಸಿರುವ ಆಟಗಾರರು ಯಾವುದೇ ಕ್ರಮಾಂಕದಲ್ಲೂ ಆಡಬಲ್ಲವರಾಗಿರುತ್ತಾರೆ. ಹೀಗಾಗಿ ಸ್ಟೀವ್ ಸ್ಮಿತ್ ಇನಿಂಗ್ಸ್ ಆರಂಭಿಸಿದರೆ ಒಂದೇ ವರ್ಷದಲ್ಲಿ ನಂಬರ್ 1 ಆರಂಭಿಕ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ ಎಂದು ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟೀವ್ ಸ್ಮಿತ್ ಅವರು ಆರಂಭಿಕನಾಗಿ ಕಣಕ್ಕಿಳಿದರೆ ಬ್ರಿಯಾನ್ ಲಾರಾ ಹೆಸರಿನಲ್ಲಿರುವ 400 ರನ್ಗಳ ದಾಖಲೆಯನ್ನು ಕೂಡ ಮುರಿಯಬಲ್ಲರು. ಏಕೆಂದರೆ ಸ್ಮಿತ್ ಇಡೀ ದಿನ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಆಟಗಾರ. ಹೀಗಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಓಪನರ್ ಆಗಿ ಕಣಕ್ಕಿಳಿದರೆ ಅವರು 400 ರನ್ಗಳ ದಾಖಲೆ ಮುರಿದರೂ ಅಚ್ಚರಿಪಡಬೇಕಾಗಿಲ್ಲ ಎಂದು ಮೈಕಲ್ ಕ್ಲಾರ್ಕ್ ತಿಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶ್ವ ದಾಖಲೆ ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ ಹೆಸರಿನಲ್ಲಿದೆ. 2004 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 582 ಎಸೆತಗಳನ್ನು ಎದುರಿಸಿದ್ದ ಲಾರಾ 4 ಭರ್ಜರಿ ಸಿಕ್ಸ್ ಹಾಗೂ 43 ಫೋರ್ಗಳೊಂದಿಗೆ ಅಜೇಯ 400 ರನ್ ಬಾರಿಸಿ ಮಿಂಚಿದ್ದರು.
ಇದನ್ನೂ ಓದಿ: David Warner: ಹೊಸ ವಿಶ್ವ ದಾಖಲೆ ನಿರ್ಮಿಸಿದ ಡೇವಿಡ್ ವಾರ್ನರ್
ಇದೀಗ ಆಸ್ಟ್ರೇಲಿಯಾ ಪರ ಸ್ಟೀವ್ ಸ್ಮಿತ್ ಆರಂಭಿಕನಾಗಿ ಕಣಕ್ಕಿಳಿದರೆ ಬ್ರಿಯಾನ್ ಲಾರಾ ಹೆಸರಿನಲ್ಲಿರುವ 400 ರನ್ಗಳ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಮೈಕಲ್ ಕ್ಲಾರ್ಕ್ ಭವಿಷ್ಯ ನುಡಿದಿದ್ದಾರೆ.