IND vs ENG: ಕುಮಾರ ‘ಅಧರ್ಮ’ಸೇನ; ಆಂಗ್ಲ ತಂಡಕ್ಕೆ ಸಿಗ್ನಲ್ ನೀಡಿ ನೆರವಾದ ಲಂಕಾ ಅಂಪೈರ್

Oval Test Controversy: ಭಾರತ ಮತ್ತು ಇಂಗ್ಲೆಂಡ್ ನಡುವಿನ ಓವಲ್ ಟೆಸ್ಟ್ ಪಂದ್ಯದಲ್ಲಿ ಅಂಪೈರ್ ಕುಮಾರ ಧರ್ಮಸೇನ ಅವರ ವಿವಾದಾತ್ಮಕ ಎಲ್‌ಬಿಡಬ್ಲ್ಯೂ ನಿರ್ಧಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಸಾಯಿ ಸುದರ್ಶನ್ ನಾಟ್ ಔಟ್ ಎಂದು ತೀರ್ಪು ನೀಡುವಾಗ, ಚೆಂಡು ಬ್ಯಾಟ್‌ಗೆ ಮೊದಲು ತಾಗಿರುವುದನ್ನು ಧರ್ಮಸೇನ ಅವರು ಸೂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಇಂಗ್ಲೆಂಡ್ ತಂಡ ಡಿಆರ್‌ಎಸ್ ಬಳಸದೆ ಹೋಗಿದೆ. ಈ ಘಟನೆ ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಐಸಿಸಿ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

IND vs ENG: ಕುಮಾರ ‘ಅಧರ್ಮ’ಸೇನ; ಆಂಗ್ಲ ತಂಡಕ್ಕೆ ಸಿಗ್ನಲ್ ನೀಡಿ ನೆರವಾದ ಲಂಕಾ ಅಂಪೈರ್
Kunara Darmasena

Updated on: Jul 31, 2025 | 9:27 PM

ಲಂಡನ್‌ನ ಓವಲ್ ಮೈದಾನದಲ್ಲಿ (Oval Test) ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ಐದನೇ ನಿರ್ಣಾಯಕ ಟೆಸ್ಟ್ ಪಂದ್ಯ ಆರಂಭವಾಗಿದೆ. ಟಾಸ್ ಸೋತಿರುವ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ಸಿಕ್ಕಿಲ್ಲ. ತಂಡ ನೂರು ರನ್​ಗಳ ಗಡಿ ದಾಟುವ ಮುನ್ನವೇ ಪ್ರಮುಖ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಮೊದಲ ಸೆಷನ್​ನಲ್ಲಿಯೇ ವಿಕೆಟ್ ಕಳೆದುಕೊಂಡಿದ್ದರಿಂದ ತಂಡಕ್ಕೆ ಆರಂಭಿಕ ಹಿನ್ನಡೆಯುಂಟಾಯಿತು. ಇದಾದ ಬಳಿಕ ಜೊತೆಯಾದ ಸಾಯಿ ಸುದರ್ಶನ್ ಮತ್ತು ನಾಯಕ ಶುಭ್​ಮನ್ ಗಿಲ್ ಪರಿಸ್ಥಿತಿಯನ್ನು ನಿರ್ವಹಿಸಲು ಪ್ರಯತ್ನಿಸಿದರು. ಈ ನಡುವೆ ಮೈದಾನದಲ್ಲಿ ನಡೆದ ಅದೊಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿದ್ದು, ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ವಾಸ್ತವವಾಗಿ ಓವಲ್ ಟೆಸ್ಟ್‌ನ ಮೊದಲ ದಿನದ ಮೊದಲ ಸೆಷನ್​ನಲ್ಲಿ ಫೀಲ್ಡ್ ಅಂಪೈರ್ ಧರ್ಮಸೇನ ನೀಡಿದ ನಿರ್ಧಾರ ವಿವಾದಕ್ಕೆ ಕಾರಣವಾಗಿದೆ. ಧರ್ಮಸೇನ ಮಾಡಿದ ತಪ್ಪಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ಧರ್ಮಸೇನ ಅವರ ವಿರುದ್ಧ ಐಸಿಸಿ ಕ್ರಮಕೈಗೊಳ್ಳಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಕುಮಾರ್ ಧರ್ಮಸೇನ ಮಾಡಿದ್ದೇನು?

ಅಷ್ಟಕ್ಕೂ ಶ್ರೀಲಂಕಾದ ಅಂಪೈರ್ ಕುಮಾರ ಧರ್ಮಸೇನ ಮಾಡಿದ್ದಾದರೂ ಏನು ಎಂಬುದನ್ನು ನೋಡುವುದಾದರೆ.. ಭಾರತೀಯ ಇನ್ನಿಂಗ್ಸ್‌ನ 13 ನೇ ಓವರ್‌ ಬೌಲ್ ಮಾಡಿದ ಜೋಶ್ ಟಂಗ್ ಫುಲ್-ಟಾಸ್ ಚೆಂಡನ್ನು ಎಸೆದರು. ಸ್ಟ್ರೈಕ್​ನಲ್ಲಿದ್ದ ಸಾಯಿ ಸುದರ್ಶನ್ ಈ ಎಸೆತವನ್ನು ಸರಿಯಾಗಿ ಆಡುವಲ್ಲಿ ವಿಫಲರಾಗಿ ನೆಲಕ್ಕುರುಳಿದರು. ಇತ್ತ ಇಂಗ್ಲೆಂಡ್‌ ಆಟಗಾರರು ಸುದರ್ಶನ್ ವಿರುದ್ಧ ಎಲ್‌ಬಿಡಬ್ಲ್ಯೂ ಮನವಿ ಮಾಡಿದರು. ಇಂಗ್ಲೆಂಡ್ ಆಟಗಾರರ ಮನವಿಯನ್ನು ತಿರಸ್ಕರಿಸಿದ ಧರ್ಮಸೇನ ನಾಟೌಟ್ ಎಂದು ತಲೆ ಅಳ್ಳಾಡಿಸಿದರು. ಧರ್ಮಸೇನ ಕೇವಲ ಇಷ್ಟನ್ನು ಮಾಡಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಆ ಬಳಿಕ ಧರ್ಮಸೇನ ಮಾಡಿದ್ದು, ಕ್ರಿಕೆಟ್ ನಿಯಮಗಳಿಗೆ ವಿರುದ್ಧವಾಗಿದೆ.

IND vs ENG: 7 ಇನ್ನಿಂಗ್ಸ್​ಗಳಲ್ಲಿ ಒಂದೇ ರೀತಿ ಔಟ್; ಇಂಗ್ಲೆಂಡ್​ನಲ್ಲಿ ಬಹಿರಂಗವಾಯ್ತು ಜೈಸ್ವಾಲ್ ವೀಕ್ನೆಸ್

ಡಿಆರ್​ಎಸ್ ಉಳಿಸಿದ ಧರ್ಮಸೇನ

ವಾಸ್ತವವಾಗಿ ಧರ್ಮಸೇನ, ಸುದರ್ಶನ್ ನಾಟ್ ಔಟ್ ಎಂದು ತೀರ್ಪು ನೀಡುವ ಸಂದರ್ಭದಲ್ಲಿ ಚೆಂಡು ಸುದರ್ಶನ್ ಪ್ಯಾಡ್‌ಗೆ ತಗಲುವ ಮೊದಲು ಬ್ಯಾಟ್‌ಗೆ ತಗುಲಿದೆ ಎಂದು ತಮ್ಮ ಕೈಬೆರಳುಗಳ ಮೂಲಕ ಸನ್ನೆ ಮಾಡಿ ತೋರಿಸಿದರು. ಇದನ್ನು ನೋಡಿದ ಇಂಗ್ಲೆಂಡ್ ಆಟಗಾರರು ಡಿಆರ್‌ಎಸ್ ತೆಗೆದುಕೊಳ್ಳಲಿಲ್ಲ. ಧರ್ಮಸೇನ ತಮ್ಮ ಕೈಸನ್ನೆಯ ಮೂಲಕ ಇಂಗ್ಲೆಂಡ್‌ ಆಟಗಾರರಿಗೆ ನೆರವಾಗದಿದ್ದರೆ, ಅವರು ಡಿಆರ್​ಎಸ್​ ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತಿದ್ದವು. ಇದರಿಂದ ಇಂಗ್ಲೆಂಡ್‌ ಆಟಗಾರರು ಒಂದು ಡಿಆರ್​ಎಸ್ ಕಳೆದುಕೊಳ್ಳುತ್ತಿದ್ದರು. ಆದರೆ ಡಿಆರ್​ಎಸ್ ಟೈಮರ್ ಶುರುವಾಗುವುದಕ್ಕೂ ಮುನ್ನವೇ ಧರ್ಮಸೇನ ಕೈಸನ್ನೆಯ ಮೂಲಕ ಚೆಂಡು ಬ್ಯಾಟ್​ಗೆ ಬಡಿದಿದೆ ಎಂಬುದನ್ನು ತೋರಿಸಿದರಿಂದ ಇಂಗ್ಲೆಂಡ್‌ ನಾಯಕ ಡಿಆರ್​ಎಸ್ ತೆಗದುಕೊಳ್ಳಲಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 pm, Thu, 31 July 25