ಪಹಲ್ಗಾಮ್‌ ದಾಳಿಯನ್ನು ನನ್ನ ದೇಶ ಪಾಕಿಸ್ತಾನವೇ ನಡೆಸಿದೆ; ಪಾಕ್ ಮಾಜಿ ಕ್ರಿಕೆಟಿಗನ ಬಹಿರಂಗ ಹೇಳಿಕೆ

Pakistan's Role in Terror Attack in Pahalgam: ಭಾರತವು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದೆ. ಪಾಕಿಸ್ತಾನ ಈ ಆರೋಪಗಳನ್ನು ತಳ್ಳಿಹಾಕಿದ್ದರೂ, ಉಪ ಪ್ರಧಾನಿ ಭಯೋತ್ಪಾದಕರನ್ನು "ಸ್ವಾತಂತ್ರ್ಯ ಹೋರಾಟಗಾರರು" ಎಂದು ಕರೆದಿದ್ದಾರೆ. ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಪಾಕಿಸ್ತಾನದ ನೇರ ಭಾಗವಹಿಸುವಿಕೆಯನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಪಹಲ್ಗಾಮ್‌ ದಾಳಿಯನ್ನು ನನ್ನ ದೇಶ ಪಾಕಿಸ್ತಾನವೇ ನಡೆಸಿದೆ; ಪಾಕ್ ಮಾಜಿ ಕ್ರಿಕೆಟಿಗನ ಬಹಿರಂಗ ಹೇಳಿಕೆ
Danish Kaneria

Updated on: Apr 25, 2025 | 1:31 PM

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam terror attack) ಪಾಕಿಸ್ತಾನದ ಕೈವಾಡವಿದೆ ಎಂಬುದು ಭಾರತದ ಬಲವಾದ ವಾದವಾಗಿದೆ. ಆದರೆ ಭಾರತದ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿರುವ ನರಿ ಬುದ್ದಿಯ ಪಾಕಿಸ್ತಾನ ಮತ್ತದೇ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದೆ. ಇದೀಗ ಪಹಲ್ಗಾಮ್​ನಲ್ಲಿ ಹತ್ಯಾಕಾಂಡ ನಡೆಸಿದ ಭಯೋತ್ಪಾದಕರನ್ನು ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆದಿರುವ ಪಾಕಿಸ್ತಾನದ ಉಪ ಪ್ರಧಾನಿ ಈ ದಾಳಿಯಲ್ಲಿ ತನ್ನದು ಪರೋಕ್ಷ ಕೈವಾಡವಿದೆ ಎಂಬುದನ್ನು ಸಾಭೀತುಪಡಿಸಿದ್ದಾರೆ. ದಾಳಿಯ ಬಳಿಕ ಈ ಬಗ್ಗೆ ನಿರಂತರವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಳ್ಳುತ್ತಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ (Danish Kaneria) ಕೂಡ ಈ ದಾಳಿಯಲ್ಲಿ ಪಾಕಿಸ್ತಾನದ ನೇರ ಕೈವಾಡವಿದೆ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.

ನನ್ನ ದೇಶ ಬಹಿರಂಗವಾಗಿ ಒಪ್ಪಿಕೊಂಡಿದೆ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ನಾವೇ ನಡೆಸಿರುವುದಾಗಿ ನನ್ನ ದೇಶ ಬಹಿರಂಗವಾಗಿ ಒಪ್ಪಿಕೊಂಡಿದೆ ಎಂದು ಕನೇರಿಯಾ ಬರೆದುಕೊಂಡಿದ್ದಾರೆ. ವಾಸ್ತವವಾಗಿ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರನ್ನು ಪಾಕಿಸ್ತಾನದ ಉಪ ಪ್ರಧಾನಿ ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ಸಂಬೋಧಿಸಿದ್ದರು. ಉಪ ಪ್ರಧಾನಿಯವರ ಅದೇ ಹೇಳಿಕೆಯ ಬಗ್ಗೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದು, ಪಾಕಿಸ್ತಾನದ ಉಪ ಪ್ರಧಾನಿಯೇ ಭಯೋತ್ಪಾದಕರನ್ನು ‘ಸ್ವಾತಂತ್ರ್ಯ ಹೋರಾಟಗಾರರು’ ಎಂದು ಕರೆಯುತ್ತಿರುವುದು ಅವಮಾನಕರ ಮಾತ್ರವಲ್ಲ, ನಮ್ಮ ದೇಶವು ದಾಳಿ ನಡೆಸಿದೆ ಎಂದು ಒಪ್ಪಿಕೊಂಡಂತೆ ಎಂದು ಬರೆದುಕೊಂಡಿದ್ದಾರೆ.

ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಒಂದು ದಿನದ ನಂತರ ತಮ್ಮ ದೇಶದ ಸರ್ಕಾರ ಮತ್ತು ಅದರ ಉದ್ದೇಶಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದ ಕನೇರಿಯಾ, ‘ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ನಿಜವಾಗಿಯೂ ಇಲ್ಲದಿದ್ದರೆ, ಪ್ರಧಾನಿ ಶಹಬಾಜ್ ಷರೀಫ್ ಅದರ ಬಗ್ಗೆ ಏಕೆ ಕಳವಳ ವ್ಯಕ್ತಪಡಿಸಲಿಲ್ಲ?. ಸೇನೆಗೆ ಇದ್ದಕ್ಕಿದ್ದಂತೆ ಹೆಚ್ಚಿನ ಎಚ್ಚರಿಕೆ ವಹಿಸಲು ಏಕೆ ಹೇಳಲಾಯಿತು?. ಇದೆಲ್ಲವನ್ನು ಗಮನಿಸಿದರೆ ನಿಮಗೆ ಸತ್ಯ ತಿಳಿದಿದೆ ಎಂಬುದು ಸ್ಪಷ್ಟ. ನೀವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ ಮತ್ತು ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದೀರಿ. ಹೀಗೆ ಮಾಡಿದ್ದಕ್ಕೆ ನಿಮಗೆ ನಾಚಿಕೆಯಾಗಬೇಕು ಎಂದು ಬರೆದುಕೊಂಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ