ಏಷ್ಯಾಕಪ್ 2022 (Asia Cup 2022)ರ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ವಿರುದ್ಧ ಒಂದು ವಿಕೆಟ್ ರೋಚಕ ಜಯ ಸಾಧಿಸಿದೆ. ಆದರೆ, ಈ ಪಂದ್ಯದ ವೇಳೆ ಪಾಕಿಸ್ತಾನ ಮತ್ತು ಅಫ್ಘಾನ್ ಆಟಗಾರರ ನಡುವೆ ಘರ್ಷಣೆಯೂ ನಡೆಯಿತು. ಪಾಕಿಸ್ತಾನದ ಬ್ಯಾಟ್ಸ್‌ಮನ್ ಆಸಿಫ್ ಅಲಿ (Asif Ali) ಪಂದ್ಯದ ವೇಳೆ ಅಫ್ಘಾನಿಸ್ತಾನದ ವೇಗದ ಬೌಲರ್ ಫರೀದ್ ಅಹ್ಮದ್ ಮಲಿಕ್ ಮೇಲೆ ಕೈ ಎತ್ತಿದರು. ಇದೀಗ ಏಷ್ಯಾಕಪ್‌ನಿಂದ ಆಸಿಫ್ ಅಲಿ ಅವರನ್ನು ಕೂಡಲೇ ಕೈಬಿಡಬೇಕೆಂಬ ಒತ್ತಾಯ ಹೆಚ್ಚಾಗಿದೆ. ಜೊತೆಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮಾಜಿ ಸಿಇಒ ಶಫೀಕ್ ಸ್ತಾನಕ್ಝೈ ಅವರು ಆಸಿಫ್ ಅಲಿಯನ್ನು ತಕ್ಷಣವೇ ನಿಷೇಧಿಸಬೇಕೆಂದು ಒತ್ತಾಯಿಸಿದರು.
ಆಸಿಫ್ ಅಲಿಯ ವರ್ತನೆ ಮೂರ್ಖತನ
ಆಸಿಫ್ ಅಲಿ ಅವರ ನಡವಳಿಕೆಯು ಮೂರ್ಖತನದಿಂದ ಕೂಡಿದ್ದು, ಅವರನ್ನು ತಕ್ಷಣವೇ ಏಷ್ಯಾಕಪ್‌ನಿಂದ ಹೊರಹಾಕಬೇಕು ಎಂದು ಶಫೀಕ್ ಸ್ಟಾನೆಕ್‌ಜಾಯ್ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಬೌಲರ್‌ಗೆ ಸಂಭ್ರಮಿಸುವ ಹಕ್ಕಿದೆ ಆದರೆ ಯಾರ ಮೇಲೂ ಕೈ ಎತ್ತುವಂತಿಲ್ಲ, ಈ ರೀತಿ ನಡೆಯಬಾರದು ಎಂದು ಬರೆದುಕೊಂಡಿದ್ದಾರೆ. ಒಂದೆಡೆ ಅಫ್ಘಾನ್ ಆಟಗಾರರು ಹಾಗೂ ಅಧಿಕಾರಿಗಳು ಆಸಿಫ್ ಅಲಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಅಫ್ಘಾನಿಸ್ತಾನ ತಂಡದ ಮೇಲೆ ಆರೋಪ ಮಾಡುತ್ತಿದ್ದಾರೆ. ಶೋಯೆಬ್ ಅಖ್ತರ್ ಅಫ್ಘಾನ್ ತಂಡವನ್ನು ದುರಹಂಕಾರಿ ಎಂದು ಕರೆದಿದ್ದು, ಅಫ್ಘಾನ್ ವೇಗದ ಬೌಲರ್, ಆಸಿಫ್ ಅಲಿಯನ್ನು ಕೆರಳಿಸಿದರು ಇದರಿಂದಾಗಿ ಈ ಎಲ್ಲಾ ಘಟನೆ ಸಂಭವಿಸಿದೆ ಎಂದು ಅಖ್ತರ್ ತಿರುಗೇಟು ನೀಡಿದ್ದಾರೆ.
This is stupidity at extreme level by Asif Ali and should be ban from the rest of the tournament, any bowler has the right to celebrate but being physical is not acceptable at all https://t.co/ebnqSaRRmD
— Shafiq Stanikzai (@ShafiqStanikzai) September 7, 2022
19ನೇ ಓವರ್‌ನಲ್ಲಿ ಆಸಿಫ್ ಮತ್ತು ಫರೀದ್ ಮುಖಾಮುಖಿ
ಪಾಕಿಸ್ತಾನದ ಇನಿಂಗ್ಸ್‌ನ 19 ನೇ ಓವರ್‌ನಲ್ಲಿ ಆಸಿಫ್ ಅಲಿ ಮತ್ತು ಫರೀದ್ ಅಹ್ಮದ್ ನಡುವೆ ಈ ಘರ್ಷಣೆ ನಡೆಯಿತು. ಫರೀದ್ ಅಹ್ಮದ್ ಅವರ ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಆಸಿಫ್ ಅಲಿ ಮುಂದಿನ ಎಸೆತದಲ್ಲಿ ಔಟಾದರು. ಆಸಿಫ್ ಔಟಾದ ಬಳಿಕ ಫರೀದ್ ಅಹ್ಮದ್ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದು, ಇದನ್ನು ಸಹಿಸಲಾಗದೆ ಆಸಿಫ್ ಅಲಿ ಈ ಬೌಲರ್ ಮೇಲೆ ಕೈ ಎತ್ತಿದ್ದರು.ಬಳಿಕ ಅಲ್ಲೆ ಇದ್ದ ಅಫ್ಘಾನ್ ಆಟಗಾರರು ಬೌಲರ್ನ ಸಹಾಯಕ್ಕೆ ಬಂದರು. ಬಳಿಕ ಅಷ್ಟಕ್ಕೆ ಸುಮ್ಮನಾಗದ ಆಸಿಫ್ ಅಲಿ ಬೌಲರ್‌ಗೆ ಹೊಡೆಯುವ ಯತ್ನ ಮಾಡಿ ತಾವು ಹಿಡಿದಿದ್ದ ಬ್ಯಾಟನ್ನು ಮೇಲಕ್ಕೆ ಎತ್ತಿದರು.
ಆದರೆ ಆಸಿಫ್ ಔಟಾದ ನಂತರ ಬ್ಯಾಟಿಂಗ್ಗೆ ಬಂದ ನಸೀಮ್ ಶಾ ಪಾಕಿಸ್ತಾನಕ್ಕೆ ಅದ್ಭುತ ಜಯವನ್ನು ನೀಡಿದರು. ಕೊನೆಯ ಓವರ್‌ನಲ್ಲಿ ಪಾಕಿಸ್ತಾನಕ್ಕೆ 11 ರನ್‌ಗಳ ಅಗತ್ಯವಿತ್ತು ಮತ್ತು ಅವರ ಕೈಯಲ್ಲಿ ಒಂದು ವಿಕೆಟ್ ಉಳಿದಿತ್ತು. ಫಾರೂಕಿ ಅವರ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸುವ ಮೂಲಕ ನಸೀಮ್ ಶಾ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು. ಇದಾದ ನಂತರ ಆಸಿಫ್ ಅಲಿ ಮತ್ತು ಇತರ ಆಟಗಾರರು ಮೈದಾನಕ್ಕೆ ಬಂದು ಸಂಭ್ರಮಾಚರಣೆ ಆರಂಭಿಸಿದರು.
Published On - 5:00 pm, Thu, 8 September 22