ಬುಧವಾರದಿಂದ ಅಂದರೆ ಇಂದಿನಿಂದ ಆರಂಭವಾಗಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಟೆಸ್ಟ್ ತಂಡದ ಮಾಜಿ ನಾಯಕ ಬಾಬರ್ ಆಝಂ ದಯನೀಯವಾಗಿ ವಿಫಲರಾಗಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ಬಾಬರ್ ತವರಿನಲ್ಲಿ ಇದೇ ಮೊದಲ ಬಾರಿಗೆ ಟೆಸ್ಟ್ ಮಾದರಿಯಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್ಗೆ ಕಾಲಿಟ್ಟ ಬಾಬರ್ ಒಂಬತ್ತನೇ ಓವರ್‌ನಲ್ಲಿ ಶೋರಿಫುಲ್ ಇಸ್ಲಾಮ್‌ಗೆ ಬಲಿಯಾದರು. ನಾಯಕ ಶಾನ್ ಮಸೂದ್ ಅವರ ವಿವಾದಾತ್ಮಕ ವಿಕೆಟ್ ನಂತರ ಮೈದಾನಕ್ಕೆ ಬಂದ ಬಾಬರ್, ಒಂಬತ್ತನೇ ಓವರ್ನ ಎರಡನೇ ಎಸೆತದಲ್ಲಿ ವಿಕೆಟ್ ಕೀಪರ್ ಲಿಟನ್ ದಾಸ್ ಹಿಡಿದ ಅದ್ಭುತ ಕ್ಯಾಚ್ನಿಂದಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಬೇಕಾಯಿತು. ಬಾಬರ್ ಕೇವಲ 2 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು.
ವಿಶೇಷವೆಂದರೆ ಬಾಬರ್ ಆಝಂ ಸುಮಾರು 20 ತಿಂಗಳ ನಂತರ ತವರಿನಲ್ಲಿ ಟೆಸ್ಟ್ ಆಡುತ್ತಿದ್ದಾರೆ. ವಾಸ್ತವವಾಗಿ, ಪಾಕಿಸ್ತಾನ ತನ್ನ ಕೊನೆಯ ಟೆಸ್ಟ್ ಪಂದ್ಯವನ್ನು ಜನವರಿ 2023 ರಲ್ಲಿ ತವರು ನೆಲದಲ್ಲಿ ಆಡಿತ್ತು. ಈ ಮೂಲಕ ಸುಮಾರು 20 ತಿಂಗಳ ನಂತರ ಬಾಬರ್ ಫೀಲ್ಡ್ಗೆ ಮರಳಿದರೂ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಬೀಸಲು ಸಾಧ್ಯವಾಗಲಿಲ್ಲ. ವಿಶೇಷವೆಂದರೆ ಮೂರು ವರ್ಷಗಳಲ್ಲಿ ಬಾಬರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಶೂನ್ಯಕ್ಕೆ ಔಟಾಗಿರುವುದು ಇದೇ ಮೊದಲು.
ವಾಸ್ತವವಾಗಿ, ಈ ಪಂದ್ಯಕ್ಕೂ ಮುನ್ನ ಶೋರಿಫುಲ್ ಇಸ್ಲಾಂ, ನಾನು ಬಾಬರ್ ಆಝಂ ಅವರ ವಿಕೆಟ್ ಪಡೆಯಲು ಬಯಸುತ್ತೇನೆ ಎಂದು ಹೇಳಿದ್ದರು. ಅವರ ಆಸೆಯಂತೆ ಲಿಟನ್ ದಾಸ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಶೋರಿಫುಲ್ ಇಸ್ಲಾಂ ಅವರ ಆಸೆಯನ್ನು ಪೂರೈಸಿದರು. ಶೋರಿಫುಲ್, ಲೆಗ್ ಸ್ಟಂಪ್‌ನ ಹೊರಗೆ ಚೆಂಡನ್ನು ಬೌಲ್ ಮಾಡಿದರು. ಕೂಡಲೇ ಬಾಬರ್, ಆ ಚೆಂಡನ್ನು ವಿಕೆಟ್ನ ಹಿಂದೆ ಬೌಂಡರಿಗಟ್ಟಲು ಯತ್ನಿಸಿದರು. ಆದರೆ ವಿಕೆಟ್ ಹಿಂದೆ ನಿಂತಿದ್ದ ಲಿಟನ್ ಎಡಕ್ಕೆ ಅದ್ಭುತ ಡೈವ್ ಮಾಡಿ ಅತ್ಯುತ್ತಮ ಕ್ಯಾಚ್ ಪಡೆದರು.
Babar Azam gone for a two ball duck.#PAKvBAN pic.twitter.com/xDEe9nkGNQ
— 𝙎𝙝𝙚𝙧𝙞 (@CallMeSheri1) August 21, 2024
ಬಾಬರ್ ಆಝಂ ಈ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದರೆ, ಅಂದರೆ 104 ರನ್ ಬಾರಿಸಿದ್ದರೆ, ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 4000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆಯುವ ಅವಕಾಶವಿತ್ತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಬಾಬರ್ಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇದೀಗ ಎರಡನೇ ಇನ್ನಿಂಗ್ಸ್‌ನಲ್ಲಿ ಬಾಬರ್ 104 ರನ್ ಬಾರಿಸಿದರೆ, ಈ ದಾಖಲೆ ಅವರ ಖಾತೆ ಸೇರಲಿದೆ. ಬಾಬರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ 52 ಪಂದ್ಯಗಳ 94 ಇನ್ನಿಂಗ್ಸ್‌ಗಳಲ್ಲಿ 3898 ರನ್ ಗಳಿಸಿದ್ದಾರೆ. ಬಾಬರ್ ಇನ್ನೂ 102 ರನ್ ಗಳಿಸಿದರೆ 4 ಸಾವಿರ ರನ್‌ಗಳ ಗಡಿಯನ್ನು ಪೂರ್ಣಗೊಳಿಸುತ್ತಾರೆ. ಹೀಗಾಗಿ ಮುಂದಿನ ಇನ್ನಿಂಗ್ಸ್‌ನಲ್ಲಿ ಬಾಬರ್ ಈ ಮೈಲಿಗಲ್ಲನ್ನು ದಾಟುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:31 pm, Wed, 21 August 24