Maharaja Trophy 2024: ಅಜೇಯ ಹುಬ್ಬಳ್ಳಿಗೆ ಸೋಲಿನ ಶಾಕ್ ನೀಡಿದ ಮೈಸೂರು
Maharaja Trophy 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿಯ 14ನೇ ಪಂದ್ಯದಲ್ಲಿ ಬಲಿಷ್ಠ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮೈಸೂರು ವಾರಿಯರ್ಸ್ ತಂಡ 56 ರನ್ಗಳಿಂದ ಮಣಿಸಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಅಜೇಯ ತಂಡವಾಗಿದ್ದ ಹುಬ್ಬಳ್ಳಿಗೆ ಮೊದಲ ಸೋಲು ಎದುರಾಗಿದೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿಯ 14ನೇ ಪಂದ್ಯದಲ್ಲಿ ಬಲಿಷ್ಠ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಮೈಸೂರು ವಾರಿಯರ್ಸ್ ತಂಡ 56 ರನ್ಗಳಿಂದ ಮಣಿಸಿದೆ. ಇದರೊಂದಿಗೆ ಈ ಟೂರ್ನಿಯಲ್ಲಿ ಅಜೇಯ ತಂಡವಾಗಿದ್ದ ಹುಬ್ಬಳ್ಳಿಗೆ ಮೊದಲ ಸೋಲು ಎದುರಾಗಿದೆ. ಟೂರ್ನಿಯಲ್ಲಿ ಆಡಿದ್ದ ಸತತ ನಾಲ್ಕು ಪಂದ್ಯಗಳಲ್ಲಿ ಜಯದ ನಗೆ ಬೀರಿದ್ದ ಹುಬ್ಬಳ್ಳಿಗೆ ತನ್ನ ಐದನೇ ಪಂದ್ಯದಲ್ಲಿ ಮೈಸೂರು ವಿರುದ್ಧ ಸೋಲಿನ ಶಾಕ್ ಎದುರಾಗಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮೈಸೂರು ತಂಡ 19.3 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡು 109 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಮೈಸೂರು ತಂಡಕ್ಕೆ ಕಳಪೆ ಆರಂಭ
ಪಂದ್ಯದಲ್ಲಿ ಟಾಸ್ ಗೆದ್ದ ಹುಬ್ಬಳ್ಳಿ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟಿಂಗ್ ಆರಂಭಿಸಿದ ಮೈಸೂರು ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡ ಎರಡು ರನ್ ಕಲೆಹಾಕುವಷ್ಟರಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಆ ನಂತರ ಜೊತೆಯಾದ ಕಾರ್ತಿಕ್ ಹಾಗೂ ಕರುಣ್ ನಾಯರ್ ಅರ್ಧಶತಕದ ಜೊತೆಯಾಟವನ್ನಾಡಿದರು. ಈ ವೇಳೆ ಕಾರ್ತಿಕ್ 34 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸತತ ವೈಫಲ್ಯಗಳಿಂದ ಬಳಲುತ್ತಿರುವ ಸಮಿತ್ ದ್ರಾವಿಡ್ ಈ ಪಂದ್ಯದಲ್ಲೂ ಒಂದಂಕಿಗೆ ಸುಸ್ತಾಗಿದ್ದು, 2 ರನ್ಗಳಿಗೆ ಪೆವಿಲಿಯನ್ ಸೇರಿಕೊಂಡರು.
ಮತ್ತೆ ಗೆಲುವಿನ ಇನ್ನಿಂಗ್ಸ್ ಆಡಿದ ಕರುಣ್
ಆದಾಗ್ಯೂ ಎಂದಿನಂತೆ ಏಕಾಂಗಿ ಹೋರಾಟ ಮುಂದುವರೆಸಿದ ನಾಯಕ ಕರುಣ್ ನಾಯರ್, ಸತತ ಮೂರನೇ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಕಳೆದೆರಡು ಪಂದ್ಯಗಳಲ್ಲಿ ಕ್ರಮವಾಗಿ 66 ಹಾಗೂ ಅಜೇಯ 124 ರನ್ ಬಾರಿಸಿದ್ದರು. ಇದೀಗ ಈ ಪಂದ್ಯದಲ್ಲೂ ಅರ್ಧಶತಕದ ಇನ್ನಿಂಗ್ಸ್ ಕಟ್ಟಿದ ಕರುಣ್ 36 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 66 ರನ್ಗಳ ಅಮೋಘ ಇನ್ನಿಂಗ್ಸ್ ಆಡಿದರು. ಕರುಣ್ ಹೊರತುಪಡಿಸಿ ಮನೋಜ್ ಬಾಂಡಗೆ ಕೂಡ 20 ರನ್ಗಳ ಕಾಣಿಕೆ ನೀಡಿದರು. ಇವರ ಆಟದಿಂದಾಗಿ ಮೈಸೂರು ತಂಡ 163 ರನ್ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ಸಾಧ್ಯವಾಯಿತು.
ಭರ್ಜರಿಯಾಗಿ ಅರ್ಧಶತಕ ಬಾರಿಸಿದ ಕರುಣ್ ನಾಯರ್! 🫡🥳
📺 ನೋಡಿರಿ Maharaja Trophy KSCA T20 | ಮೈಸೂರು vs ಹುಬ್ಬಳ್ಳಿ | LIVE NOW #StarSportsKannada ದಲ್ಲಿ#MaharajaTrophyOnStar@maharaja_t20 pic.twitter.com/5KYrQ0Ws4n
— Star Sports Kannada (@StarSportsKan) August 21, 2024
ಹುಬ್ಬಳ್ಳಿಗೆ ಮೊದಲ ಸೋಲು
ಈ ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡಕ್ಕೆ ಆರಂಭಿಕರಿಬ್ಬರು ಮೊದಲ ವಿಕೆಟ್ಗೆ 34 ರನ್ಗಳ ಜೊತೆಯಾಟ ನೀಡಿದರು. ಆದರೆ ಆ ಬಳಿಕ ಜಗದೀಶ್ ಸುಚಿತ್ ದಾಳಿಗೆ ತತ್ತರಿಸಿದ ಹುಬ್ಬಳ್ಳಿ ತಂಡ ಕೆಲವೇ ಓವರ್ಗಳ ಅಂತರದಲ್ಲಿ ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡಿತು. ಆರಂಭಿಕ ತಿಪ್ಪ ರೆಡ್ಡಿ 16 ರನ್ ಬಾರಿಸಿ ಔಟಾದರೆ, ಮೊಹಮ್ಮದ್ ತಾಹ 22 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿದರು. ನಾಯಕ ಮನೀಶ್ ಪಾಂಡೆ ಕೂಡ 18 ರನ್ಗಳಿಗೆ ಬ್ಯಾಟ್ ಎತ್ತಿಟ್ಟರು. ಕೊನೆಯಲ್ಲಿ ಎಲ್ ಆರ್ ಕುಮಾರ್ 19 ರನ್ ಹಾಗೂ ಕೆಸಿ ಕಾರ್ಯಪ್ಪ 12 ರನ್ಗಳ ಇನ್ನಿಂಗ್ಸ್ ಆಡಿ ಪೆವಿಲಿಯನ್ ಸೇರಿಕೊಂಡರು. ಉಳಿದಂತೆ ತಂಡದ ಮತ್ತ್ಯಾರು ಒಂದಂಕಿ ದಾಟಿ ಮುಂದಕ್ಕೆ ಹೋಗಲಿಲ್ಲ. ಹೀಗಾಗಿ ತಂಡ 17 ಓವರ್ಗಳಲ್ಲಿ 109 ರನ್ಗಳಿಗೆ ಆಲೌಟ್ ಆಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:24 pm, Wed, 21 August 24