PAK vs BAN: ಫ್ರೀ ಎಂಟ್ರಿ ಘೋಷಿಸಿದರೂ ಪಾಕ್ ಪಂದ್ಯ ವೀಕ್ಷಿಸಲು ಬಾರದ ಪ್ರೇಕ್ಷಕರು
Pakistan vs Bangladesh, 1st Test: ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ನಡುವಣ ಮೊದಲ ಟೆಸ್ಟ್ ಪಂದ್ಯವು ಡ್ರಾನತ್ತ ಮುಖ ಮಾಡಿದೆ. ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಈ ಪಂದ್ಯದ ನಾಲ್ಕನೇ ದಿನದಾಟದಲ್ಲೂ ಮೊದಲ ಇನಿಂಗ್ಸ್ ಚಾಲ್ತಿಯಲ್ಲಿದ್ದು, ಹೀಗಾಗಿ ಈ ಮ್ಯಾಚ್ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ.
ರಾವಲ್ಪಿಂಡಿಯಲ್ಲಿ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ರಾವಲ್ಪಿಂಡಿಯ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಮೂರು ದಿನ ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿಯೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೊನೆಯ ಎರಡು ದಿನದಾಟದ ಪ್ರೇಕ್ಷಕರಿಗೆ ಉಚಿತ ಪ್ರವೇಶ ಘೋಷಿಸಿದೆ.
ಅದರಂತೆ 4ನೇ ಮತ್ತು 5ನೇ ದಿನದಾಟವನ್ನು ಪಾಕ್ ಪ್ರೇಕ್ಷಕರು ಸ್ಟೇಡಿಯಂನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಆದರೆ ನಾಲ್ಕನೇ ದಿನದಾಟದ ಆರಂಭವಾದರೂ ಪಾಕಿಸ್ತಾನ್ ಅಭಿಮಾನಿಗಳು ಕ್ರೀಡಾಂಗಣದತ್ತ ಮುಖ ಮಾಡಿಲ್ಲ ಎಂಬುದು ವಿಶೇಷ.
ಅಂದರೆ ಫ್ರೀ ಎಂಟ್ರಿ ಘೋಷಿಸಿದರೂ ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ನಡುವಣ ಟೆಸ್ಟ್ ಪಂದ್ಯದ ವೀಕ್ಷಣೆಗೆ ಪಾಕ್ ಕ್ರಿಕೆಟ್ ಪ್ರೇಮಿಗಳು ನಿರಾಸಕ್ತಿ ತೋರಿಸಿದ್ದಾರೆ. ಇದುವೇ ಈಗ ಪಿಸಿಬಿಯ ಚಿಂತೆಯನ್ನು ಹೆಚ್ಚಿಸಿದೆ.
ಏಕೆಂದರೆ ಈ ಸರಣಿ ಆರಂಭಕ್ಕೂ ಮುನ್ನ ಪ್ರೇಕ್ಷಕರ ಕೊರತೆಯನ್ನು ನೀಗಿಸಲು ಟಿಕೆಟ್ ದರಗಳನ್ನು ಕೇವಲ 15 ರೂ.ಗೆ (PKR 50 ರೂ.) ಇಳಿಸಿತ್ತು. ಇದಾಗ್ಯೂ ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ಆಗಮಿಸಿರಲಿಲ್ಲ. ಇದೀಗ ಫ್ರೀ ಟಿಕೆಟ್ ನೀಡಿದರೂ ರಾವಲ್ಪಿಂಡಿ ಸ್ಟೇಡಿಯಂ ಖಾಲಿ ಹೊಡೆಯುತ್ತಿರುವುದು ಪಾಕ್ ಕ್ರಿಕೆಟ್ ಮಂಡಳಿಯನ್ನು ಚಿಂತೆಗೀಡು ಮಾಡಿದೆ.
ಬಾಂಗ್ಲಾ ಭರ್ಜರಿ ಬ್ಯಾಟಿಂಗ್:
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ್ ಪರ ಉಪನಾಯಕ ಸೌದ್ ಶಕೀಲ್ (144) ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಝ್ವಾನ್ (171) ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು. ಈ ಶತಕಗಳ ನೆರವಿನಿಂದ ಪಾಕಿಸ್ತಾನ್ ತಂಡವು 6 ವಿಕೆಟ್ ಕಳೆದುಕೊಂಡು 448 ರನ್ಗಳಿಸಿ ಡಿಕ್ಲೇರ್ ಘೋಷಿಸಿತು.
ಈ ಗುರಿಯನ್ನು ಬೆನ್ನತ್ತಿದ ಬಾಂಗ್ಲಾದೇಶ್ ತಂಡವು 110 ಓವರ್ಗಳ ಮುಕ್ತಾಯದ ವೇಳೆಗೆ 6 ವಿಕೆಟ್ ನಷ್ಟಕ್ಕೆ 352 ರನ್ ಕಲೆಹಾಕಿದೆ. ಈ ಮೂಲಕ ಪಾಕ್ ಪೇರಿಸಿದ ಬೃಹತ್ ಮೊತ್ತಕ್ಕೆ ದಿಟ್ಟ ಉತ್ತರವನ್ನೇ ನೀಡಿದ್ದಾರೆ. ಸದ್ಯ ನಾಲ್ಕನೇ ದಿನದಾಟದಲ್ಲೇ ಮೊದಲ ಇನಿಂಗ್ಸ್ ಚಾಲ್ತಿಯಲ್ಲಿದ್ದು, ಹೀಗಾಗಿ ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಸೈಮ್ ಅಯ್ಯೂಬ್ , ಶಾನ್ ಮಸೂದ್ (ನಾಯಕ) , ಬಾಬರ್ ಆಝಂ, ಸೌದ್ ಶಕೀಲ್ , ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಶಾಹೀನ್ ಅಫ್ರಿದಿ , ನಸೀಮ್ ಶಾ , ಖುರ್ರಂ ಶಹಜಾದ್ , ಮೊಹಮ್ಮದ್ ಅಲಿ.
ಇದನ್ನೂ ಓದಿ: MS Dhoni: ಧೋನಿಯನ್ನು ಬ್ಯಾನ್ ಮಾಡಬೇಕಿತ್ತು: ವೀರೇಂದ್ರ ಸೆಹ್ವಾಗ್
ಬಾಂಗ್ಲಾದೇಶ್ ಪ್ಲೇಯಿಂಗ್ 11: ನಜ್ಮುಲ್ ಹುಸೇನ್ ಶಾಂಟೊ (ನಾಯಕ) , ಶದ್ಮನ್ ಇಸ್ಲಾಂ , ಜಾಕಿರ್ ಹಸನ್ , ಮೊಮಿನುಲ್ ಹಕ್ , ಮುಶ್ಫಿಕರ್ ರಹೀಮ್ , ಶಾಕಿಬ್ ಅಲ್ ಹಸನ್ , ಲಿಟ್ಟನ್ ದಾಸ್ (ವಿಕೆಟ್ ಕೀಪರ್) , ಮೆಹಿದಿ ಹಸನ್ ಮಿರಾಜ್ , ಶೋರಿಫುಲ್ ಇಸ್ಲಾಂ , ಹಸನ್ ಮಹಮೂದ್ , ನಹಿದ್ ರಾಣಾ.