WCL 2024: 210 ರನ್ ಗಳಿಸಿದರೂ ಸೋತ ಪಾಕಿಸ್ತಾನ್ ಚಾಂಪಿಯನ್ಸ್
World Championship of Legends 2024: ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ ಎಂಬುದು ಮಾಜಿ ಆಟಗಾರರ ಟೂರ್ನಿ. ಈ ಟೂರ್ನಿಯಲ್ಲಿ ಭಾರತ, ಇಂಗ್ಲೆಂಡ್, ಪಾಕಿಸ್ತಾನ್, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ ಸೇರಿದಂತೆ ಒಟ್ಟು 6 ತಂಡಗಳು ಕಣಕ್ಕಿಳಿಯುತ್ತಿದೆ. ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಈ ಟೂರ್ನಿಯ 13 ಪಂದ್ಯಗಳು ಮುಗಿದಿದೆ.
ನಾರ್ಥಾಂಪ್ಟನ್ನ ಕೌಂಟಿ ಗ್ರೌಂಡ್ ಸ್ಟೇಡಿಯಂನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL 2024) ಟೂರ್ನಿಯ 13ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ಚಾಂಪಿಯನ್ಸ್ ತಂಡಕ್ಕೆ ಶರ್ಜೀಲ್ ಖಾನ್ ಸ್ಪೋಟಕ ಆರಂಭ ಒದಗಿಸಿದ್ದರು.
ಮೊದಲ ಓವರ್ನಿಂದಲೇ ಹೊಡಿಬಡಿ ಆಟಕ್ಕೆ ಒತ್ತು ನೀಡಿದ ಎಡಗೈ ದಾಂಡಿಗ ಶರ್ಜೀಲ್ ಖಾನ್ 36 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 72 ರನ್ ಬಾರಿಸಿದ್ದರು. ಪರಿಣಾಮ 11ನೇ ಓವರ್ ವೇಳೆಗೆ ಪಾಕಿಸ್ತಾನ್ ಚಾಂಪಿಯನ್ಸ್ ತಂಡದ ಸ್ಕೋರ್ 100 ರನ್ಗಳ ಗಡಿದಾಟಿತು.
ಇನ್ನು ಅಂತಿಮ ಓವರ್ಗಳ ವೇಳೆ ಕಣಕ್ಕಿಳಿದ ಶೊಯೇಬ್ ಮಲಿಕ್ 26 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್ ಒಳಗೊಂಡಂತೆ ಅಜೇಯ 51 ರನ್ ಚಚ್ಚಿದರು. ಈ ಮೂಲಕ ಪಾಕಿಸ್ತಾನ್ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 210 ರನ್ ಕಲೆಹಾಕಿತು.
ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ:
211 ರನ್ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಜೆಪಿ ಡುಮಿನಿ ಕೇವಲ 9 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ 2ನೇ ವಿಕೆಟ್ಗೆ ಜೊತೆಗೂಡಿದ ಜಾಕ್ವೆಸ್ ಸ್ನಿಮನ್ ಹಾಗೂ ಸರೆಲ್ ಎರ್ವೀ ವಿಸ್ಪೋಟಕ ಬ್ಯಾಟಿಂಗ್ ಪ್ರದರ್ಶೀಸಿದರು.
ಪಾಕಿಸ್ತಾನ್ ಚಾಂಪಿಯನ್ಸ್ ಬೌಲರ್ಗಳ ಬೆಂಡೆತ್ತಿದ ಈ ಜೋಡಿಯು ದ್ವಿತೀಯ ವಿಕೆಟ್ಗೆ ದ್ವಿಶತಕದ ಜೊತೆಯಾಟವಾಡಿದರು. ಈ ವೇಳೆ 57 ಎಸೆತಗಳನ್ನು ಎದುರಿಸಿದ ಸರೆಲ್ ಎರ್ವೀ 6 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 111 ರನ್ ಬಾರಿಸಿದರೆ, ಜಾಕ್ವೆಸ್ ಸ್ನಿಮನ್ 47 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 82 ರನ್ ಸಿಡಿಸಿದರು. ಈ ಮೂಲಕ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು 18.3 ಓವರ್ಗಳಲ್ಲಿ 214 ರನ್ ಬಾರಿಸಿ 9 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿದೆ.
ಪಾಕಿಸ್ತಾನ್ ಚಾಂಪಿಯನ್ಸ್ ಪ್ಲೇಯಿಂಗ್ 11: ಕಮ್ರಾನ್ ಅಕ್ಮಲ್, ಶರ್ಜೀಲ್ ಖಾನ್ , ಸೊಹೈಬ್ ಮಕ್ಸೂದ್ , ಯೂನಿಸ್ ಖಾನ್ (ನಾಯಕ) , ಶೋಯೆಬ್ ಮಲಿಕ್ , ಶಾಹಿದ್ ಅಫ್ರಿದಿ , ಮಿಸ್ಬಾ-ಉಲ್-ಹಕ್ , ಅಬ್ದುಲ್ ರಜಾಕ್ , ಅಮೀರ್ ಯಾಮಿನ್ , ವಹಾಬ್ ರಿಯಾಜ್ , ಸೊಹೈಲ್ ಖಾನ್.
ಇದನ್ನೂ ಓದಿ: Team India: ಕೊನೆಯ 10 ಓವರ್ಗಳಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಟೀಮ್ ಇಂಡಿಯಾ
ಸೌತ್ ಆಫ್ರಿಕಾ ಚಾಂಪಿಯನ್ಸ್ ಪ್ಲೇಯಿಂಗ್ 11: ಜೆಪಿ ಡುಮಿನಿ , ನೀಲ್ ಮೆಕೆಂಜಿ , ಜಾಕ್ಸ್ ಕಾಲಿಸ್ (ನಾಯಕ) ಡೇನ್ ವಿಲಾಸ್ , ರೋರಿ ಕ್ಲೀನ್‌ವೆಲ್ಟ್ , ಚಾರ್ಲ್ ಲ್ಯಾಂಗೆವೆಲ್ಟ್ , ವೆರ್ನಾನ್ ಫಿಲಾಂಡರ್ , ಸರೆಲ್ ಎರ್ವೀ , ಜಾಕ್ವೆಸ್ ಸ್ನಿಮನ್ , ಡೇಲ್ ಸ್ಟೇನ್ , ಇಮ್ರಾನ್ ತಾಹಿರ್.
Published On - 9:53 am, Wed, 10 July 24