ಮೆಲ್ಬೋರ್ನ್‌ನಲ್ಲಿ ನಡೆದ ಟಿ20 ವಿಶ್ವಕಪ್ (T20 World Cup 2022) ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿದ ಇಂಗ್ಲೆಂಡ್ ಎರಡನೇ ಬಾರಿಗೆ ಟಿ20 ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದೆ. ಆಸ್ಟ್ರೇಲಿಯಾದಲ್ಲಿ 30 ವರ್ಷಗಳ ಹಿಂದಿನ ಕಾಕತಾಳೀಯವನ್ನು ಪುನರಾವರ್ತಿಸಿ ಫೈನಲ್ ತಲುಪಿದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ (Pakistan cricket team) ಕೊನೆಯ ಹಂತದಲ್ಲಿ ಎಲ್ಲವೂ ಬದಲಾಯಿತು. 30 ವರ್ಷಗಳ ಹಿಂದೆ ಅಂದರೆ 1992ರ ಏಕದಿನ ವಿಶ್ವಕಪ್ನಲ್ಲಿ ಇದೇ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಆಗಿದ್ದ ಪಾಕಿಸ್ತಾನ ಮತ್ತೊಮ್ಮೆ ಅದೇ ಸಾಧನೆಯನ್ನು ಪುನರಾವರ್ತಿಸುವ ತವಕದಲ್ಲಿದ್ದರೂ ಇಂಗ್ಲೆಂಡ್ ತಂಡ ಅದಕ್ಕೆ ಅವಕಾಶ ನೀಡಲಿಲ್ಲ. ಮೂರು ವರ್ಷಗಳ ಹಿಂದೆ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಏಕದಿನ ಕ್ರಿಕೆಟ್‌ನ ವಿಶ್ವ ಚಾಂಪಿಯನ್ ಮಾಡಿದ್ದ ಬೆನ್ ಸ್ಟೋಕ್ಸ್ (Ben Stokes), ಮತ್ತೊಮ್ಮೆ ಆಂಗ್ಲ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಪಾಕ್ ಜೊತೆಗಿನ 30 ವರ್ಷಗಳ ಹಳೆಯ ಸೋಲಿನ ಖಾತೆಯ ಲೆಕ್ಕವನ್ನು ಚುಕ್ತ ಮಾಡಿದೆ.
30 ವರ್ಷಗಳ ನಂತರ, ಎರಡೂ ತಂಡಗಳು ಅದೇ ಮೆಲ್ಬೋರ್ನ್ ಮೈದಾನದಲ್ಲಿ ಮತ್ತೊಮ್ಮೆ ವಿಶ್ವಕಪ್ ಫೈನಲ್‌ಗೆ ಲಗ್ಗೆ ಇಟ್ಟಿದ್ದವು. 1992 ರ ವಿಶ್ವಕಪ್‌ನಂತೆಯೇ ಕೊನೆಯ ಹಂತದಲ್ಲಿ ಸೆಮಿಫೈನಲ್ಗೆ ಎಂಟ್ರಿಕೊಟ್ಟಿದ್ದ ಬಾಬರ್ ಪಡೆ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಫೈನಲ್ ಟಿಕೆಟ್ ಪಡೆದುಕೊಂಡಿತ್ತು. ಹಾಗೆಯೇ ಇಂಗ್ಲೆಂಡ್ ಕೂಡ ಇದೇ ರೀತಿಯಲ್ಲಿ ಫೈನಲ್‌ಗೆ ಪ್ರಯಾಣ ಬೆಳೆಸಿತ್ತು. ಇಡೀ ಟೂರ್ನಿ ಪಾಕ್ ಪಾಲಿಗೆ 1992ರ ವಿಶ್ವಕಪ್ನಂತೆ ಸಾಗಿದ್ದರಿಂದ ತಂಡ ಮತ್ತೊಮ್ಮೆ ಚಾಂಪಿಯನ್ ಆಗಲಿದೆ ಎಂದು ಪಾಕ್ ಅಭಿಮಾನಿಗಳು ಭಾವಿಸಿದ್ದರು. ಆದರೆ ಬಲಿಷ್ಠ ಬಟ್ಲರ್ ಪಡೆ ಇದಕ್ಕೆ ಅವಕಾಶ ನೀಡಲಿಲ್ಲ.
ಬೌಲರ್‌ಗಳ ಅಟ್ಟಹಾಸ
ಈ ಇಡೀ ವಿಶ್ವಕಪ್‌ನ ಬಹುತೇಕ ಪಂದ್ಯಗಳಲ್ಲಿ ಉಭಯ ತಂಡಗಳಿಗೆ ತಮ್ಮ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಸೆಮಿಫೈನಲ್ ಪಂದ್ಯಗಳನ್ನು ಹೊರತುಪಡಿಸಿದರೆ, ಪಾಕಿಸ್ತಾನ ಮತ್ತು ಇಂಗ್ಲೆಂಡ್‌ನ ಬ್ಯಾಟಿಂಗ್ ಅದ್ಭುತವಾಗಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಬೌಲಿಂಗ್ನಲ್ಲಿ ಉಭಯ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇಲ್ಲಿ ಪಾಕಿಸ್ತಾನ ಸ್ವಲ್ಪಮಟ್ಟಿಗೆ ಮುನ್ನಡೆ ಸಾಧಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಯಾವ ತಂಡ ಬ್ಯಾಟಿಂಗ್ ಪ್ರಾಬಲ್ಯ ಮೆರೆಯುತ್ತೋ, ಆ ತಂಡ ಚಾಂಪಿಯನ್ ಆಗಲಿದೆ ಎಂಬುದು ಸ್ಪಷ್ಟವಾಗಿತ್ತು. ಆದರೆ, ಎರಡು ತಂಡದ ಬೌಲರ್ಗಳು ಬ್ಯಾಟ್ಸ್ಮನ್ಗಳಿಗೆ ಮಿಂಚಲು ಹೆಚ್ಚಿನ ಅವಕಾಶ ನೀಡಲಿಲ್ಲ.
ಪಾಕ್ ತಂಡದ ಸಪ್ಪೆ ಬ್ಯಾಟಿಂಗ್
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡದ ಆರಂಭ ಉತ್ತಮವಾಗಿರಲಿಲ್ಲ. ತಂಡದ ಭರವಸೆಯ ಬ್ಯಾಟರ್ ರಿಜ್ವಾನ್ ಕೇವಲ 15 ರನ್ಗಳಿಗೆ ಸುಸ್ತಾದರು. ನಾಯಕ ಬಾಬರ್ 32 ರನ್ಗಳ ಇನ್ನಿಂಗ್ಸ್ ಆಡಿದರಾದರೂ ಅದರಲ್ಲಿ ಅಬ್ಬರತೆ ಇರಲಿಲ್ಲ. ಇನ್ನುಳಿದಂತೆ ಶಾನ್ ಮಸೂದ್ 38 ರನ್ ಗಳಿಸಿ ತಂಡದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರನೆನಿಸಕೊಂಡರೆ, ಕೊನೆಯಲ್ಲಿ ಶಾದಬ್ ಖಾನ್ 20 ರನ್ ಬಾರಿಸಿ ತಂಡವನ್ನು ಮುಜುಗರದಿಂದ ಪಾರು ಮಾಡಿದರು. ಈ ಮೂವರನ್ನು ಹೊರತುಪಡಿಸಿ ಪಾಕ್ ತಂಡದ ಮತ್ತ್ಯಾವ ಆಟಗಾರನಿಗೂ ಆಂಗ್ಲ ಬೌಲರ್ಗಳನ್ನು ಎದುರಿಸಿ ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಾಗಲಿಲ್ಲ. ಹೀಗಾಗಿ ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ ಪಾಕಿಸ್ತಾನ ತಂಡ 8 ವಿಕೆಟ್ ಕಳೆದುಕೊಂಡು 137 ರನ್ ಕಲೆಹಾಕಿತು.
ಸ್ಟೋಕ್ಸ್ ಅರ್ಧಶತಕ
137 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಕೂಡ ಆರಂಭದಲ್ಲೇ ಹೇಲ್ಸ್ ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿತ್ತು. ಆದರೆ ನಾಯಕ ಬಟ್ಲರ್ ರನ್ ರೇಟ್ ಕುಸಿಯಲು ಬಿಡದೆ ತಂಡ ಒತ್ತಡಕ್ಕೆ ಸಿಲುಕದಂತೆ ಮಾಡಿದರು. 28 ರನ್ಗಳಿಗೆ ಬಟ್ಲರ್ ತಮ್ಮ ಇನ್ನಿಂಗ್ಸ್ ಮುಗಿಸಿದರೆ, ಸಾಲ್ಟ್ ಕೂಡ 10 ರನ್ಗೆ ಸುಸ್ತಾದರು. ಈ ವಿಕೆಟ್ಗಳ ಬಳಿಕ ಜೊತೆಯಾದ ಸ್ಟೋಕ್ಸ್ ಹಾಗೂ ಬ್ರೂಕ್ ತಂಡವನ್ನು ಗೆಲುವಿನ ದಡದತ್ತ ಕೊಂಡೊಯ್ದರು. ಬ್ರೂಕ್ 20 ರನ್ ಗಳಿಸಿ ಬ್ಯಾಟ್ ಎತ್ತಿಟ್ಟರೆ ಸ್ಟೋಕ್ಸ್ ಮಾತ್ರ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಯಶಸ್ವಿಯಾದರು. ಬ್ರೂಕ್ ವಿಕೆಟ್ ಬಳಿಕ ಬಂದ ಅಲಿ ಕೂಡ ಬಿರುಸಿನ ಬ್ಯಾಟಿಂಗ್ ಮಾಡಿ 13 ಎಸೆತಗಳಲ್ಲಿ 19 ರನ್ ಕಲೆಹಾಕಿದರು.
Published On - 5:06 pm, Sun, 13 November 22