ಪಾಕಿಸ್ತಾನ್ ಪರ 38 ವರ್ಷದ ಆಟಗಾರನ ಪಾದಾರ್ಪಣೆ

Pakistan vs South Africa, 2nd Test: ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ್ ತಂಡದ ನಾಯಕ ಶಾನ್ ಮಸೂದ್ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಇದಕ್ಕೂ ಮುನ್ನ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡಕ್ಕೆ 93 ರನ್​ಗಳ ಸೋಲುಣಿಸುವಲ್ಲಿ ಪಾಕ್ ಪಡೆ ಯಶಸ್ವಿಯಾಗಿತ್ತು.

ಪಾಕಿಸ್ತಾನ್ ಪರ 38 ವರ್ಷದ ಆಟಗಾರನ ಪಾದಾರ್ಪಣೆ
Asif Afridi

Updated on: Oct 20, 2025 | 11:53 AM

ಪಾಕಿಸ್ತಾನ್ ಹಾಗೂ ಸೌತ್ ಆಫ್ರಿಕಾ ನಡುವಣ ದ್ವಿತೀಯ ಟೆಸ್ಟ್ ಪಂದ್ಯ ಶುರುವಾಗಿದೆ. ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಈ ಪಂದ್ಯದ ಮೂಲಕ 38 ವರ್ಷದ ಆಸಿಫ್ ಅಫ್ರಿದಿ ಪಾಕಿಸ್ತಾನ್ ಪರ ಪಾದಾರ್ಪಣೆ ಮಾಡಿದ್ದಾರೆ. ಈ ಮೂಲಕ ಪಾಕ್ ಪರ ಚೊಚ್ಚಲ ಪಂದ್ಯದಲ್ಲಿ ಕಣಕ್ಕಿಳಿದ 2ನೇ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಪಾಕಿಸ್ತಾನ್ ಪರ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರನ ದಾಖಲೆ ಮಿರಾನ್ ಬಕ್ಷ್ ಹೆಸರಿನಲ್ಲಿದೆ. 1955 ರಲ್ಲಿ ಭಾರತದ ವಿರುದ್ಧ ಕಣಕ್ಕಿಳಿದಾಗ ಮಿರಾನ್ ಬಕ್ಷ್​ ಅವರ ವಯಸ್ಸು 47 ವರ್ಷ, 284 ದಿನಗಳು. ಈ ಮೂಲಕ ಪಾಕಿಸ್ತಾನ್ ಪರ ಪಾದಾರ್ಪಣೆ ಮಾಡಿದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದರು.

ಇದೀಗ 38ನೇ ವಯಸ್ಸಿನಲ್ಲಿ ಕಣಕ್ಕಿಳಿಯುವ ಮೂಲಕ ಆಸಿಫ್ ಅಫ್ರಿದಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.  ಆಸಿಫ್ ಅಫ್ರಿದಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಈವರೆಗೆ 57 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಅವರು ಒಟ್ಟು 198 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದರ ನಡುವೆ 13 ಬಾರಿ ಐದು ವಿಕೆಟ್‌ಗಳನ್ನು ಪಡೆದಿದ್ದಾರೆ.

ಹಾಗೆಯೇ 83 ಲಿಸ್ಟ್ ಎ ವಿಕೆಟ್‌ಗಳು ಮತ್ತು 78 ಟಿ20 ವಿಕೆಟ್‌ಗಳನ್ನು ಹೊಂದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಂದು ಶತಕವನ್ನೂ ಬಾರಿಸಿರುವ ಆಸಿಫ್ ಅಫ್ರಿದಿ, ಕಳೆದ ಕೆಲ ವರ್ಷಗಳಿಂದ ಪಾಕ್ ದೇಶೀಯ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿತ್ತಾ ಬಂದಿದ್ದಾರೆ. ಹೀಗಾಗಿ 38ನೇ ವಯಸ್ಸಿನಲ್ಲಿ ಅಫ್ರಿದಿಗೆ ಪಾಕ್ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿತ್ತು.

ಇದೀಗ 38ನೇ ವಯಸ್ಸಿನಲ್ಲಿ ಚೊಚ್ಚಲ ಟೆಸ್ಟ್ ಪಂದ್ಯವಾಡಲು ಕಣಕ್ಕಿಳಿದಿದ್ದಾರೆ. ಈ ಮೂಲಕ ಪಾಕ್ ಪರ ಟೆಸ್ಟ್ ಪಂದ್ಯವಾಡಿದ 2ನೇ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.

ಬ್ಯಾನ್ ಆಗಿದ್ದ ಅಫ್ರಿದಿ:

2022 ರಲ್ಲಿ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣ ಆಸಿಫ್ ಅಫ್ರಿದಿ 2 ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದರು. ಪಾಕಿಸ್ತಾನ ಕಪ್ ಮತ್ತು ರಾಷ್ಟ್ರೀಯ ಟಿ 20 ಟೂರ್ನಮೆಂಟ್ ಸಮಯದಲ್ಲಿ ಅಫ್ರಿದಿಯನ್ನು ಬುಕ್ಕಿಗಳು ಸಂಪರ್ಕಿಸಿದ್ದರು. ಈ ವಿಷಯವನ್ನು ಅವರು ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯಿಂದ ಮುಚ್ಚಿಟ್ಟಿದ್ದರು. ಹೀಗಾಗಿ ಅವರ ಮೇಲೆ 2 ವರ್ಷಗಳ ನಿಷೇಧ ಹೇರಲಾಗಿತ್ತು. ಇದೀಗ ನಿಷೇಧ ತೆರವಾದ ಬೆನ್ನಲ್ಲೇ ಪಾಕಿಸ್ತಾನ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ರಾವಲ್ಪಿಂಡಿ ಟೆಸ್ಟ್‌ ಆಡುವ ಬಳಗ:

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಏಡೆನ್ ಮಾರ್ಕ್ರಾಮ್ (ನಾಯಕ), ರಯಾನ್ ರಿಕೆಲ್ಟನ್, ಟ್ರಿಸ್ಟನ್ ಸ್ಟಬ್ಸ್, ಟೋನಿ ಡಿ ಝೋರ್ಝಿ, ಡೆವಾಲ್ಡ್ ಬ್ರೆವಿಸ್, ಕೈಲ್ ವೆರ್ರೆನ್ನೆ, ಸೆನುರಾನ್ ಮುತ್ತುಸಾಮಿ, ಮಾರ್ಕೊ ಯಾನ್ಸೆನ್, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ.

ಇದನ್ನೂ ಓದಿ: ಟೀಮ್ ಇಂಡಿಯಾ ಪಂದ್ಯದ ಟಿಕೆಟ್ ಬೆಲೆ ಕೇವಲ 60 ರೂ. ಮಾತ್ರ..!

ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್, ಇಮಾಮ್ ಉಲ್ ಹಕ್, ಶಾನ್ ಮಸೂದ್ (ನಾಯಕ), ಬಾಬರ್ ಆಝಂ, ಸೌದ್ ಶಕೀಲ್, ಮೊಹಮ್ಮದ್ ರಿಝ್ವಾನ್, ಸಲ್ಮಾನ್ ಅಘಾ, ನೊಮಾನ್ ಅಲಿ, ಸಾಜಿದ್ ಖಾನ್, ಶಾಹೀನ್ ಅಫ್ರಿದಿ ಮತ್ತು ಆಸಿಫ್ ಅಫ್ರಿದಿ.