DC vs MI: ಡೆಲ್ಲಿ ಕ್ಯಾಪಿಟಲ್ಸ್ ಎದುರು ಮಕಾಡೆ ಮಲಗಿದ ಮುಂಬೈ ಇಂಡಿಯನ್ಸ್
IPL 2026 Delhi Capitals vs Mumbai Indians: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ 8ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿತು. ಸಮೀರ್ ರಿಜ್ವಿ ಅವರ ಸತತ ಎರಡನೇ ಅರ್ಧಶತಕದ ನೆರವಿನಿಂದ ಡೆಲ್ಲಿ ತಂಡ 162 ರನ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಈ ಗೆಲುವಿನೊಂದಿಗೆ ಡೆಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದರೆ, ಮುಂಬೈ ಇಂಡಿಯನ್ಸ್ ಪ್ರಸಕ್ತ ಲೀಗ್‌ನಲ್ಲಿ ಮೊದಲ ಸೋಲು ಅನುಭವಿಸಿತು.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 (IPL 2026 ) ರ 8 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (Delhi Capitals vs Mumbai Indians) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 162 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಸಮೀರ್ ರಿಜ್ವಿ (Sameer Rizvi) ಅವರ ಸತತ ಎರಡನೇ ಅರ್ಧಶತಕದ ನೆರವಿನಿಂದ 18.1 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಜಯದ ನಗೆ ಬೀರಿತು. ಈ ಗೆಲುವಿನೊಂದಿಗೆ ಡೆಲ್ಲಿ ಲೀಗ್‌ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರೆಸಿದರೆ, ಇತ್ತ ಮುಂಬೈ ಇಂಡಿಯನ್ಸ್ ತನ್ನ ಮೊದಲ ಸೋಲನ್ನು ಅನುಭವಿಸಿದೆ.
ಮುಂಬೈಗೆ ಆರಂಭಿಕ ಆಘಾತ
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 162 ರನ್ ಗಳಿಸಿತು. ಆದಾಗ್ಯೂ ತಂಡದ ಆರಂಭ ಉತ್ತಮವಾಗಿರಲಿಲ್ಲ. ಡೆಲ್ಲಿ ವೇಗಿ ಮುಖೇಶ್ ಕುಮಾರ್ ಒಂದೇ ಓವರ್‌ನಲ್ಲಿ ರಯಾನ್ ರಿಕಲ್ಟನ್ ಮತ್ತು ತಿಲಕ್ ವರ್ಮಾ ಅವರನ್ನು ಔಟ್ ಮಾಡುವ ಮೂಲಕ ಮುಂಬೈಗೆ ಆಘಾತ ನೀಡಿದರು. ಆದರೆ ಅನುಭವಿ ರೋಹಿತ್ ಶರ್ಮಾ 26 ಎಸೆತಗಳಲ್ಲಿ 35 ರನ್ ಗಳಿಸಿ ಇನ್ನಿಂಗ್ಸ್ ನಿಭಾಯಿಸುವ ಕೆಲಸ ಮಾಡಿದರು, ಆದರೆ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಔಟಾಗುವ ಮೂಲಕ ತಮ್ಮ ಇನ್ನಿಂಗ್ಸ್ ಅಂತ್ಯಗೊಳಿಸಿದರು.
ಸೂರ್ಯಕುಮಾರ್ ಅರ್ಧಶತಕ
ಇನ್ನು ಈ ಪಂದ್ಯದಲ್ಲಿ ಮುಂಬೈ ತಂಡದ ನಾಯಕತ್ವವಹಿಸಿದ್ದ ಸೂರ್ಯಕುಮಾರ್ ಯಾದವ್ 51 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಆಡಿದರು. ಇವರ ಜೊತೆಗೆ ನಮನ್ ಧೀರ್ 28 ರನ್‌ಗಳ ಕಾಣಿಕೆ ನೀಡಿದರು. ದೆಹಲಿ ಪರ ಮುಖೇಶ್ ಕುಮಾರ್ 2 ವಿಕೆಟ್ ಪಡೆದರೆ,ಅಕ್ಷರ್ ಪಟೇಲ್, ಲುಂಗಿ ಎನ್‌ಗಿಡಿ, ವಿಪ್ರಜ್ ನಿಗಮ್ ಮತ್ತು ಟಿ ನಟರಾಜನ್ ತಲಾ 1 ವಿಕೆಟ್ ಪಡೆದರು.
ಡೆಲ್ಲಿಗೂ ಉತ್ತಮ ಆರಂಭ ಸಿಗಲಿಲ್ಲ
162 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ತಂಡವು ಕಳಪೆ ಆರಂಭವನ್ನೇ ಪಡೆಯಿತು. ಕೆಎಲ್ ರಾಹುಲ್ ಕೇವಲ ಒಂದು ರನ್‌ಗೆ ಔಟಾದರು. ನಿತೀಶ್ ರಾಣಾ ಕೂಡ ರನೌಟ್ ಆದರು. ನಂತರ ಪಾಥುಮ್ ನಿಸ್ಸಂಕಾ 44 ರನ್ ಬಾರಿಸುವ ಮೂಲಕ ತಂಡವನ್ನು ಒತ್ತಡದಿಂದ ಹೊರತಂದರು. ಆದರೆ ಮೂರನೇ ವಿಕೆಟ್ 73 ರನ್‌ಗಳಿಗೆ ಪತನವಾದ ನಂತರ ತಂಡದ ಒತ್ತಡ ಮತ್ತಷ್ಟು ಹೆಚ್ಚಾಯಿತು. ನಂತರ ತಂಡದ ಇನ್ನಿಂಗ್ಸ್ ನಿಭಾಯಿಸಿದ ಸಮೀರ್ ರಿಜ್ವಿ ಅರ್ಧಶತಕ ಇನ್ನಿಂಗ್ಸ್ ಆಡಿ ತಂಡದ ಗೆಲುವು ಖಚಿತಪಡಿಸಿದರು.
DC vs MI IPL 2026 Highlights: ಮುಂಬೈ ಇಂಡಿಯನ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್
ಗೆಲುವಿನ ಇನ್ನಿಂಗ್ಸ್ ಆಡಿದ ರಿಜ್ವಿ
ಆದಾಗ್ಯೂ ಶತಕದಂಚಿನಲ್ಲಿ ಎಡವಿದ ಸಮೀರ್ ರಿಜ್ವಿ 51 ಎಸೆತಗಳಲ್ಲಿ 176.47 ಸ್ಟ್ರೈಕ್ ರೇಟ್‌ನಲ್ಲಿ 90 ರನ್ ಗಳಿಸಿ ಮುಂಬೈ ತಂಡದ ಗೆಲುವಿನ ಹಾದಿಗೆ ಅಡ್ಡಲಾಗಿ ನಿಂತರು. ಅವರ ಇನ್ನಿಂಗ್ಸ್‌ನಲ್ಲಿ ಏಳು ಬೌಂಡರಿ ಮತ್ತು ಏಳು ಸಿಕ್ಸರ್‌ಗಳು ಸೇರಿದ್ದವು. ಅಂದರೆ ಅವರು ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳಿಂದ 70 ರನ್ ಗಳಿಸಿದರು. ಸಮೀರ್ ರಿಜ್ವಿ ಅವರ ಈ ಸ್ಮರಣೀಯ ಇನ್ನಿಂಗ್ಸ್‌ನಿಂದಾಗಿ, ದೆಹಲಿ 18.1 ಓವರ್‌ಗಳಲ್ಲಿ ಗುರಿ ತಲುಪಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:02 pm, Sat, 4 April 26




