ಒಮಾನ್ನಲ್ಲಿ ಇದೇ ಅಕ್ಟೋಬರ್ 18 ರಿಂದ ಆರಂಭವಾಗಲಿರುವ ಎಮರ್ಜಿಂಗ್ ಏಷ್ಯಾಕಪ್ಗೆ ಎಲ್ಲಾ ತಂಡಗಳು ಸಜ್ಜಾಗಿವೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸೇರಿದಂತೆ ಹಲವು ಏಷ್ಯನ್ ರಾಷ್ಟ್ರಗಳು ಭಾಗವಹಿಸಲಿವೆ. ಈ ಟೂರ್ನಿಗಾಗಿ ಈಗಾಗಲೇ ಎಲ್ಲಾ ತಂಡಗಳು ಪ್ರಕಟಗೊಂಡಿವೆ. ಟೂರ್ನಿ ಅಕ್ಟೋಬರ್ 18ಕ್ಕೆ ಆರಂಭವಾದರೂ, ಅಕ್ಟೋಬರ್ 19 ರಂದು ನಡೆಯಲ್ಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿಯ ಕಾವು ಹೆಚ್ಚಾಗಲಿದೆ. ಆದರೆ ಅದಕ್ಕೂ ಮುನ್ನ ಪಾಕಿಸ್ತಾನ ತಂಡದ ನಾಯಕ ತೆಗೆದುಕೊಂಡಿರುವ ಅಚ್ಚರಿಯ ನಿರ್ಧಾರವೊಂದು ಭಾರಿ ಚರ್ಚೆಗೆ ಒಳಗಾಗಿರುವುದಲ್ಲದೆ, ಟೀಂ ಇಂಡಿಯಾ ಎಂದರೆ ನೆರೆ ರಾಷ್ಟ್ರಕ್ಕೆ ಇನ್ನೇಷ್ಟು ಭಯವಿದೆ ಎಂಬುದನ್ನು ಸಾಭೀತುಪಡಿಸಿದೆ.
ವಾಸ್ತವವಾಗಿ ಪಂದ್ಯಾವಳಿ ಆರಂಭಕ್ಕೂ ಮುನ್ನ ಮಾತನಾಡಿರುವ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ಹ್ಯಾರಿಸ್, ತಂಡದ ಆಟಗಾರರು ಟೀಂ ಇಂಡಿಯಾ ಬಗ್ಗೆ ಮಾತನಾಡುವುದನ್ನು ನಿಷೇಧಿಸಿರುವುದಾಗಿ ಹೇಳಿದ್ದಾರೆ. ಅಂದರೆ, ಇಡೀ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನ ತಂಡದ ಯಾವುದೇ ಆಟಗಾರ ಭಾರತ ತಂಡದ ಬಗ್ಗೆ ಮಾತನಾಡುವಂತಿಲ್ಲ. ಇದನ್ನು ಸ್ವತಃ ಪಾಕಿಸ್ತಾನ ತಂಡದ ನಾಯಕ ಮೊಹಮ್ಮದ್ ಹ್ಯಾರಿಸ್ ಅವರೇ ಬಹಿರಂಗಪಡಿಸಿದ್ದಾರೆ. ಇದಕ್ಕೆ ಆಘಾತಕಾರಿ ಕಾರಣ ನೀಡಿರುವ ಮೊಹಮ್ಮದ್ ಹಾರಿಸ್, ಟೀಂ ಇಂಡಿಯಾ ಬಗ್ಗೆ ಮಾತನಾಡುವುದರಿಂದ ಪಾಕ್ ತಂಡದ ಮೇಲೆ ಒತ್ತಡ ಹೆಚ್ಚುತ್ತದೆ ಎಂದಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮೊಹಮ್ಮದ್ ಹ್ಯಾರಿಸ್, ‘ಪಾಕಿಸ್ತಾನ ತಂಡದ ಆಟಗಾರರು ಟೀಂ ಇಂಡಿಯಾ ಬಗ್ಗೆ ಮಾತನಾಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಉದಯೋನ್ಮುಖ ಏಷ್ಯಾಕಪ್ ಸಮಯದಲ್ಲಿ ಟೀಂ ಇಂಡಿಯಾ ಬಗ್ಗೆ ಯಾವುದೇ ಚರ್ಚೆ ನಡೆಯುವುದಿಲ್ಲ. ನಾನು 2023 ರ ವಿಶ್ವಕಪ್‌ನಲ್ಲಿ ಆಡಿದಾಗ, ಎಲ್ಲರೂ ಟೀಂ ಇಂಡಿಯಾ ಬಗ್ಗೆ ಮಾತನಾಡುತ್ತಿದ್ದರು. ಇದು ಸಾಕಷ್ಟು ಒತ್ತಡವನ್ನು ಸೃಷ್ಟಿಸಿತು ಎಂದಿದ್ದಾರೆ.
ಉದಯೋನ್ಮುಖ ಏಷ್ಯಾಕಪ್‌ನಲ್ಲಿ 8 ತಂಡಗಳು ಭಾಗವಹಿಸಲಿವೆ. ಎ ಗುಂಪಿನಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಹಾಂಗ್ ಕಾಂಗ್ ಮತ್ತು ಶ್ರೀಲಂಕಾ ತಂಡಗಳಿವೆ. ಮತ್ತೊಂದೆಡೆ, ಬಿ ಗುಂಪಿನಲ್ಲಿ ಭಾರತ, ಓಮನ್, ಪಾಕಿಸ್ತಾನ ಮತ್ತು ಯುಎಇ ತಂಡಗಳಿವೆ. ಮೇಲೆ ಹೇಳಿದಂತೆ ಈ ಟೂರ್ನಿಯ ಅತಿದೊಡ್ಡ ಪಂದ್ಯ ಅಕ್ಟೋಬರ್ 19 ರಂದು ನಡೆಯಲಿದ್ದು, ಈ ಹೈವೋಲ್ಟೇಜ್ ಕದನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಲೀಗ್ ಹಂತದಲ್ಲಿ ಪಾಕಿಸ್ತಾನವನ್ನು ಎದುರಿಸಿದ ನಂತರ ಟೀಂ ಇಂಡಿಯಾ ಅಕ್ಟೋಬರ್ 21 ರಂದು ಯುಎಇಯನ್ನು ಎದುರಿಸಲಿದೆ. ಇದಾದ ನಂತರ ಅಕ್ಟೋಬರ್ 23 ರಂದು ಒಮಾನ್ ವಿರುದ್ಧ ಆಡಲಿದ್ದು, ಅಕ್ಟೋಬರ್ 27 ರಂದು ಫೈನಲ್ ಪಂದ್ಯ ನಡೆಯಲಿದೆ.
ಟೀಂ ಇಂಡಿಯಾ: ತಿಲಕ್ ವರ್ಮಾ (ನಾಯಕ), ವೈಭವ್ ಅರೋರಾ, ಆಯುಷ್ ಬಧೋನಿ, ರಾಹುಲ್ ಚಹಾರ್, ಅನ್ಶುಲ್ ಕಾಂಬೋಜ್, ಸಾಯಿ ಕಿಶೋರ್, ಆಕಿಬ್ ಖಾನ್, ಅನುಜ್ ರಾವತ್, ರಾಸಿಖ್ ಸಲಾಂ, ನಿಶಾಂತ್ ಸಿಂಧು, ಪ್ರಭಾಸಿಮ್ರಾನ್ ಸಿಂಗ್, ಅಭಿಷೇಕ್ ಶರ್ಮಾ, ರಮಣದೀಪ್ ಸಿಂಗ್, ಹೃತಿಕ್ ಶೌಕೀನ್, ನೆಹಾಲ್ ವಧೇರಾ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ