ಹಾಂಗ್ಕಾಂಗ್ನಲ್ಲಿ ನಡೆಯುತ್ತಿರುವ ಹಾಂಗ್ಕಾಂಗ್ ಕ್ರಿಕೆಟ್ ಸಿಕ್ಸಸ್ ಮೊದಲ ಪಂದ್ಯದಲ್ಲೇ ಭಾರತ ತಂಡ ಮುಗ್ಗರಿಸಿದೆ. ಅದು ಕೂಡ ಪಾಕಿಸ್ತಾನ್ ವಿರುದ್ಧ. ಮೊಂಗ್ ಕೊಕ್ನಲ್ಲಿ ನಡೆದ 6 ಓವರ್ಗಳ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಫಹೀಮ್ ಅಶ್ರಫ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಪರ ಆರಂಭಿಕರಾಗಿ ರಾಬಿನ್ ಉತ್ತಪ್ಪ ಹಾಗೂ ಭರತ್ ಚಿಪ್ಲಿ ಕಣಕ್ಕಿಳಿದಿದ್ದರು.
ಸಿಡಿಲಬ್ಬರದ ಆರಂಭದೊಂದಿಗೆ ಅಬ್ಬರಿಸಿದ ರಾಬಿನ್ ಉತ್ತಮ ಕೇವಲ 8 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 31 ರನ್ ಬಾರಿಸಿದರು.
ಇನ್ನು ಭರತ್ ಚಿಪ್ಲಿ 16 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್, 6 ಫೋರ್ಗಳೊಂದಿಗೆ 53 ರನ್ ಚಚ್ಚಿದರು. ಈ ಟೂರ್ನಿಯ ನಿಯಮದ ಪ್ರಕಾರ, ಅರ್ಧಶತಕದ ಬಳಿಕ ನಿವೃತ್ತಿಯಾಗಬೇಕು. ಅದರಂತೆ ಚಿಪ್ಲಿ ಹಾಫ್ ಸೆಂಚುರಿ ಬಳಿಕ ಇನಿಂಗ್ಸ್ ಅಂತ್ಯಗೊಳಿಸಿದರು.
ಇದಾದ ಬಳಿಕ ಬಂದ ಕೇದರ್ ಜಾಧವ್ 3 ಎಸೆತಗಳಲ್ಲಿ 8 ರನ್ ಬಾರಿಸಿದರೆ, ಮನೋಜ್ ತಿವಾರಿ 7 ಎಸೆತಗಳಲ್ಲಿ 17 ರನ್ ಕಲೆಹಾಕಿದರು. ಇನ್ನು ಸ್ಟುವರ್ಟ್ ಬಿನ್ನಿ 2 ಎಸೆತಗಳಲ್ಲಿ 4 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 6 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 119 ರನ್ ಕಲೆಹಾಕಿತು.
36 ಎಸೆತಗಳಲ್ಲಿ 120 ರನ್ಗಳ ಕಠಿಣ ಗುರಿ ಪಡೆದ ಪಾಕಿಸ್ತಾನ್ ತಂಡಕ್ಕೆ ಮುಹಮ್ಮದ್ ಅಖ್ಲಾಕ್ ಹಾಗೂ ಆಸಿಫ್ ಅಲಿ ವಿಸ್ಪೋಟಕ ಆರಂಭ ಒದಗಿಸಿದ್ದರು. ಮೊದಲ ಓವರ್ನಿಂದಲೇ ಸಿಕ್ಸ್-ಫೋರ್ಗಳ ಸುರಿಮಳೆಗೈದ ಈ ಜೋಡಿಯು ಭಾರತೀಯ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ ಆಸಿಫ್ ಅಲಿ ಬ್ಯಾಟ್ನಿಂದ 14 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 2 ಫೋರ್ಗಳೊಂದಿಗೆ 55 ರನ್ ಮೂಡಿಬಂತು. ಇನ್ನು ಮುಹಮ್ಮದ್ ಅಖ್ಲಾಕ್ 12 ಎಸೆತಗಳಲ್ಲಿ 4 ಸಿಕ್ಸ್, 3 ಫೋರ್ಗಳೊಂದಿಗೆ 30 ರನ್ ಬಾರಿಸಿದರು.
ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಫಹೀಮ್ ಅಶ್ರಫ್ 5 ಸಿಕ್ಸ್ಗಳಲ್ಲಿ 3 ಸಿಕ್ಸ್ಗಳೊಂದಿಗೆ 22 ರನ್ ಚಚ್ಚಿದರು. ಈ ಮೂಲಕ ಪಾಕಿಸ್ತಾನ್ ತಂಡವು ವಿಕೆಟ್ ಕಳೆದುಕೊಳ್ಳದೇ ಕೇವಲ 5 ಓವರ್ಗಳಲ್ಲಿ 121 ರನ್ ಬಾರಿಸಿ ಭರ್ಜರಿ ಜಯ ಸಾಧಿಸಿದೆ.
ಪಾಕಿಸ್ತಾನ್ ಪ್ಲೇಯಿಂಗ್ ಸಿಕ್ಸ್: ಫಹೀಮ್ ಅಶ್ರಫ್ (ನಾಯಕ), ಮುಹಮ್ಮದ್ ಅಖ್ಲಾಕ್, ಆಸಿಫ್ ಅಲಿ, ಹೊಸೈನ್ ತಲಾತ್, ಶಾಹಾಬ್ ಖಾನ್, ಆಮಿರ್ ಯೆಮೆನ್.
ಇದನ್ನೂ ಓದಿ: IPL 2025: RCB ತಂಡಕ್ಕಿದೆ ಇನ್ನೂ ಮೂವರನ್ನು ಉಳಿಸಿಕೊಳ್ಳುವ ಅವಕಾಶ..!
ಭಾರತ ಪ್ಲೇಯಿಂಗ್ ಸಿಕ್ಸ್: ರಾಬಿನ್ ಉತ್ತಪ್ಪ (ನಾಯಕ), ಭರತ್ ಚಿಪ್ಲಿ, ಸ್ಟುವರ್ಟ್ ಬಿನ್ನಿ, ಕೇದರ್ ಜಾಧವ್, ಮನೋಜ್ ತಿವಾರಿ, ಶಹಬಾಝ್ ನದೀಮ್.