
2025 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್‌ನ (WCL 2025) ಫೈನಲ್ ಪಂದ್ಯವು ಪಾಕಿಸ್ತಾನ ಚಾಂಪಿಯನ್ಸ್ ಮತ್ತು ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ (Pakistan Champions vs South Africa Champions) ನಡುವೆ ಇಂಗ್ಲೆಂಡ್‌ನಲ್ಲಿ ನಡೆಯಿತು. ಈ ಪ್ರಶಸ್ತಿ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪಾಕಿಸ್ತಾನ ತಂಡವನ್ನು ಏಕಪಕ್ಷೀಯವಾಗಿ ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಇದೀಗ ಈ ಪಂದ್ಯಾವಳಿಯ ಅಂತ್ಯದ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಪಂದ್ಯಾವಳಿಯಲ್ಲಿ ಮತ್ತೆ ಎಂದಿಗೂ ಭಾಗವಹಿಸದಿರಲು ತೀರ್ಮಾನಿಸಿದೆ. ಅಂದರೆ ಇನ್ನು ಮುಂದೆ ಈ ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡ ಆಡುವುದುನ್ನು ನಾವು ಕಾಣಲಾಗುವುದಿಲ್ಲ.
ವಾಸ್ತವವಾಗಿ ಈ ಪಂದ್ಯಾವಳಿಯಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡ, ಪಾಕಿಸ್ತಾನ ಚಾಂಪಿಯನ್ಸ್ ಜೊತೆ ಆಡಲು ನಿರಾಕರಿಸಿದ್ದರಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಮೊದಲ ಗುಂಪು ಹಂತದಲ್ಲಿ ಈ ಎರಡೂ ತಂಡಗಳ ನಡುವೆ ಪಂದ್ಯ ನಡೆಯಬೇಕಿತ್ತು ಆದರೆ ಭಾರತೀಯ ಆಟಗಾರರು ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಆಡಲು ನಿರಾಕರಿಸಿದರು. ಆ ಬಳಿಕ ಸೆಮಿಫೈನಲ್‌ನಲ್ಲಿಯೂ ಪಾಕಿಸ್ತಾನದ ವಿರುದ್ಧ ಆಡಲು ನಿರಾಕರಿಸಿದ ಭಾರತ ತಂಡ ಟೂರ್ನಿಯಿಂದಲೇ ತನ್ನ ಹೆಸರನ್ನು ಹಿಂಪಡೆದುಕೊಂಡಿತು. ಆದಾಗ್ಯೂ ಲೀಗ್ ಪಂದ್ಯ ರದ್ದಾದರೂ ಭಾರತ ತಂಡಕ್ಕೆ ಅಂಕಗಳನ್ನು ನೀಡಲಾಯಿತು. ಹೀಗಾಗಿ WCL ಆಯೋಜಕರು ಭಾರತವನ್ನು ಬೆಂಬಲಿಸುತ್ತಿದ್ದಾರೆ ಎಂದು ಪಿಸಿಬಿ ಆರೋಪಿಸಿದ್ದು, ಈ ಲೀಗ್ನಲ್ಲಿ ಆಡುವುದಕ್ಕೆ ಸಂಪೂರ್ಣ ನಿಷೇಧ ಹೇರಿದೆ.
🚨 PAKISTAN TEAM BANS FROM WCL 🚨
– PCB officially Bans Pakistan from WCL after India boycott to play against Pakistan in WCL. (TOI). pic.twitter.com/qnnwz5mYwq
— Tanuj (@ImTanujSingh) August 3, 2025
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ‘WCL ಟೂರ್ನಮೆಂಟ್‌ನಲ್ಲಿ ನಮ್ಮ ತಂಡ ಆಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇನ್ನು ಮುಂದೆ ಯಾವುದೇ ಆಟಗಾರನು ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸುವುದಿಲ್ಲ ಎಂದು ಪಿಸಿಬಿ ತಿಳಿಸಿದೆ.
WCL 2025 ರ ಫೈನಲ್ ಪಂದ್ಯದಲ್ಲಿ, ಪಾಕಿಸ್ತಾನ ಚಾಂಪಿಯನ್ಸ್ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 195 ರನ್ ಗಳಿಸಿತು. ತಂಡದ ಪರ ಅನುಭವಿ ಆರಂಭಿಕ ಆಟಗಾರ ಶಾರ್ಜೀಲ್ ಖಾನ್ 76 ರನ್ ಗಳಿಸಿದರೆ, ಉಮರ್ ಅಮೀನ್ ಔಟಾಗದೆ 36 ರನ್ ಗಳಿಸಿದರು. ಆಸಿಫ್ ಅಲಿ 28 ರನ್‌ಗಳ ಕಾಣಿಕೆ ನೀಡಿದರು. ಇದಕ್ಕೆ ಉತ್ತರವಾಗಿ, ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಒಂದು ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು. ದಕ್ಷಿಣ ಆಫ್ರಿಕಾ ಚಾಂಪಿಯನ್ಸ್ ಪರ ನಾಯಕ ಎಬಿ ಡಿವಿಲಿಯರ್ಸ್ 120 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Sun, 3 August 25