
ಚಾಂಪಿಯನ್ಸ್ ಟ್ರೋಫಿ ಆರಂಭವಾಗಿದೆ. ಟೂರ್ನಿಯ ಮೊದಲ ಪಂದ್ಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ಪಾಕಿಸ್ತಾನ ಮೊದಲು ಬೌಲಿಂಗ್ ಮಾಡುತ್ತಿದೆ. ಆದರೆ ಬೌಲಿಂಗ್ ಆರಂಭಿಸಿದ ಮೊದಲ ಓವರ್ನ ಎರಡನೇ ಎಸೆತದಲ್ಲೇ ಪಾಕ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಫೋಟಕ ಆರಂಭಿಕ ಆಟಗಾರ ಫಖರ್ ಜಮಾನ್ ಚೆಂಡನ್ನು ಬೌಂಡರಿಗೆ ಹೊಗದಂತೆ ತಡೆಯುವ ವೇಳೆ ಗಾಯಗೊಂಡಿದ್ದಾರೆ. ಇದರಿಂದಾಗಿ ಅವರು ಮೈದಾನದಿಂದಲೂ ಹೊರನಡೆದಿದ್ದಾರೆ. ಫಖರ್ ಜಮಾನ್ ಅವರ ಗಾಯ ಎಷ್ಟು ಗಂಭೀರವಾಗಿದೆ ಎಂದು ತಿಳಿದಿಲ್ಲ ಆದರೆ ಅವರ ಸ್ಥಾನದಲ್ಲಿ ಕಮ್ರಾನ್ ಗುಲಾಮ್ ಮೈದಾನಕ್ಕೆ ಬಂದಿದ್ದಾರೆ.
ಫಖರ್ ಜಮಾನ್ ಅವರ ಗಾಯ ಗಂಭೀರವಾಗಿದ್ದರೆ ಅದು ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆಯಾಗಲಿದೆ. ಏಕೆಂದರೆ ತಂಡದ ಮತ್ತೊಬ್ಬ ಆರಂಭಿಕ ಆಟಗಾರ ಸ್ಯಾಮ್ ಅಯ್ಯೂಬ್ ಈಗಾಗಲೇ ಗಾಯದ ಕಾರಣದಿಂದಾಗಿ ಪಂದ್ಯಾವಳಿಯಲ್ಲಿ ಆಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಫಖರ್ ಮೇಲೆ ಆರಂಭಿರಾಗಿ ಉತ್ತಮ ಪ್ರದರ್ಶನ ನೀಡುವ ಜವಾಬ್ದಾರಿ ಇತ್ತು. ಫೆಬ್ರವರಿ 23 ರಂದು ದುಬೈನಲ್ಲಿ ನಡೆಯಲಿರುವ ಭಾರತದ ವಿರುದ್ಧದ ಪಂದ್ಯಕ್ಕೂ ಮುನ್ನ ಫಖರ್ ಸಂಪೂರ್ಣವಾಗಿ ಫಿಟ್ ಆಗಬೇಕೆಂದು ಪಾಕಿಸ್ತಾನ ಆಶಿಸುತ್ತದೆ. ಏಕೆಂದರೆ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತ್ರಿಕೋನ ಸರಣಿಯಲ್ಲಿ ಫಖರ್ ಉತ್ತಮ ಫಾರ್ಮ್‌ನಲ್ಲಿದ್ದರು. ಆದ್ದರಿಂದ ಫಾರ್ಮ್ನಲ್ಲಿರುವ ಆಟಗಾರ ತಂಡದಿಂದ ಹೊರಬಿದ್ದರೆ, ತಂಡದ ಸಂಯೋಜನೆಗೆ ಹಿನ್ನಡೆಯಾಗಲಿದೆ.
Pakistan issue update on possible injury to batter in the #ChampionsTrophy opener 👀https://t.co/mrS4SejWyQ
— ICC (@ICC) February 19, 2025
ಪಾಕಿಸ್ತಾನ ತಂಡದಲ್ಲಿ ಈಗಾಗಲೇ ಇಂಜುರಿಗೊಂಡಿರುವ ಆಟಗಾರರ ಪಟ್ಟಿ ದೊಡ್ಡದಿದೆ. ವೇಗಿಗಳಾದ ಮೊಹಮ್ಮದ್ ಹಸ್ನೈನ್, ಉಸ್ಮಾನ್ ಖಾನ್, ಕಮ್ರಾನ್ ಗುಲಾಮ್ ಮತ್ತು ಫಹೀಮ್ ಅಶ್ರಫ್ ಅವರನ್ನು ಇಂಜುರಿಯಿಂದಾಗಿ ತಂಡದಿಂದ ಹೊರಗಿಡಲಾಗಿದೆ. ಸಮಾಧಾನಕರ ವಿಷಯವೆಂದರೆ ಹ್ಯಾರಿಸ್ ರೌಫ್ ಫಿಟ್ ಆಗಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನ ತಂಡ: ಫಖರ್ ಜಮಾನ್, ಬಾಬರ್ ಆಝಂ, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಆಘಾ, ತಯ್ಯಬ್ ತಾಹಿರ್, ಖುಶ್ದಿಲ್ ಶಾ, ಶಾಹೀನ್ ಅಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್.
ನ್ಯೂಜಿಲೆಂಡ್ ತಂಡ: ಡೆವೊನ್ ಕಾನ್ವೇ, ವಿಲ್ ಯಂಗ್, ಕೇನ್ ವಿಲಿಯಮ್ಸನ್, ಡ್ಯಾರಿಲ್ ಮಿಚೆಲ್, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ವಿಲಿಯಂ ಒ’ರೂರ್ಕ್, ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ