ಪಾಕಿಸ್ತಾನ ಕ್ರಿಕೆಟ್ ತಂಡ (Pakistan cricket team) ಇತ್ತೀಚೆಗೆ ಏಕದಿನ ಹಾಗೂ ಟಿ20 ಸರಣಿಗಾಗಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿತ್ತು. ಆದರೆ ಈ ಪ್ರವಾಸದಲ್ಲಿ ಪಾಕಿಸ್ತಾನ ತಂಡ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಟಿ20 ಸರಣಿ ಬಳಿಕ ಕಿವೀಸ್ ತಂಡ ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತ್ತು. ಸೋಲಿನ ನಂತರ ಈಗಾಗಲೇ ಟೀಕೆಗಳನ್ನು ಎದುರಿಸುತ್ತಿರುವ ಪಾಕಿಸ್ತಾನ ತಂಡವು ಮತ್ತೊಂದು ಸಂಕಷ್ಟವನ್ನು ಎದುರಿಸಿದೆ. ಇಡೀ ಪಾಕ್ ತಂಡಕ್ಕೆ ಐಸಿಸಿ (ICC) ಶಿಕ್ಷೆ ವಿಧಿಸಿದೆ. ವರದಿಯ ಪ್ರಕಾರ, ಕಿವೀಸ್ ವಿರುದ್ಧ ಮೂರನೇ ಏಕದಿನ ಪಂದ್ಯವನ್ನಾಡಿದ ಎಲ್ಲಾ ಆಟಗಾರರಿಗೆ ದಂಡ ವಿಧಿಸಲಾಗಿದೆ. ಅವರ ಪಂದ್ಯ ಶುಲ್ಕದಿಂದ ಶೇಕಡಾ 5 ರಷ್ಟು ಹಣವನ್ನು ಕಡಿತಗೊಳಿಸಲಾಗಿದೆ.
ವಾಸ್ತವವಾಗಿ, ಬೇ ಓವಲ್‌ನಲ್ಲಿ ನಡೆದ ಮೂರನೇ ಪಂದ್ಯದ ಸಮಯದಲ್ಲಿ ಪಾಕಿಸ್ತಾನ ತಂಡವು ಸ್ಲೋ ಓವರ್ ರೇಟ್ ನಿಯಮವನ್ನು ಉಲ್ಲಂಘಿಸಿದ್ದು, ಆನ್-ಫೀಲ್ಡ್ ಅಂಪೈರ್‌ಗಳಾದ ಕ್ರಿಸ್ ಬ್ರೌನ್ ಮತ್ತು ಪಾಲ್ ರೈಫಲ್, ಮೂರನೇ ಅಂಪೈರ್ ಮೈಕೆಲ್ ಗೌಫ್ ಮತ್ತು ನಾಲ್ಕನೇ ಅಂಪೈರ್ ವೇಯ್ನ್ ನೈಟ್ಸ್ ಪಾಕ್ ತಂಡ ಈ ನಿಯಮ ಮುರಿದಿರುವುದಾಗಿ ಆರೋಪಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ನೇತೃತ್ವದ ತಂಡ ನಿಗದಿತ ಸಮಯದಲ್ಲಿ ಓವರ್ ಮುಗಿಸದಿರುವುದನ್ನು ಒಪ್ಪಿಕೊಂಡಿದೆ. ಹೀಗಾಗಿ ಐಸಿಸಿ ಎಲೈಟ್ ಪ್ಯಾನಲ್ ಮ್ಯಾಚ್ ರೆಫರಿ ಜೆಫ್ ಕ್ರೋವ್ ಪಂದ್ಯ ಆಡಿದ ಎಲ್ಲಾ ಪಾಕಿಸ್ತಾನಿ ಆಟಗಾರರಿಗೆ ದಂಡ ವಿಧಿಸಿದ್ದಾರೆ.
ಏಕದಿನ ಸರಣಿಯಲ್ಲಿ ಪಾಕಿಸ್ತಾನ ತಂಡವು ಒಂದೇ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವುದು ಇದು ಸತತ ಮೂರನೇ ಬಾರಿ. ಇದಕ್ಕೂ ಮುನ್ನ ಎರಡೂ ಪಂದ್ಯಗಳಲ್ಲಿ ಪಾಕಿಸ್ತಾನ ತಂಡಕ್ಕೆ ನಿಧಾನಗತಿಯ ಓವರ್ ದರಕ್ಕಾಗಿ ದಂಡ ವಿಧಿಸಲಾಗಿತ್ತು. ಪುನರಾವರ್ತಿತ ಓವರ್-ರೇಟ್ ಉಲ್ಲಂಘನೆಗಳು ತಂಡದ ನಿರ್ವಹಣೆ ಮತ್ತು ಮೈದಾನದಲ್ಲಿನ ತಂತ್ರಗಳ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
‘ಫಲಿತಾಂಶವೇ ಹೇಳುತ್ತದೆ’; ಭಾರತ- ಪಾಕ್ ನಡುವೆ ಯಾವುದು ಬೆಸ್ಟ್ ತಂಡ? ಮೋದಿ ಉತ್ತರ ಏನು ಗೊತ್ತಾ?
ನ್ಯೂಜಿಲೆಂಡ್ ಪ್ರವಾಸದಲ್ಲಿ, ಪಾಕಿಸ್ತಾನ ತಂಡವು ಮಾರ್ಚ್ 16 ರಿಂದ ಏಪ್ರಿಲ್ 5 ರವರೆಗೆ 3 ಪಂದ್ಯಗಳ ಟಿ20 ಸರಣಿ ಮತ್ತು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಿತು. ಈ ಅವಧಿಯಲ್ಲಿ, ಪಾಕಿಸ್ತಾನ ತಂಡದ ಪ್ರದರ್ಶನವು ತುಂಬಾ ನಾಚಿಕೆಗೇಡಿನದ್ದಾಗಿತ್ತು. ಇಡೀ ಪ್ರವಾಸದಲ್ಲಿ ಪಾಕ್ ತಂಡ ಕೇವಲ ಒಂದು ಟಿ20 ಪಂದ್ಯವನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಕಿವೀಸ್ ತಂಡ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡರೆ, ಏಕದಿನ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ