T20 World Cup 2022: ಮೊದಲ ಸುತ್ತಿನಲ್ಲೇ ಹೊರ ಬೀಳಲಿದೆ ಪಾಕ್ ತಂಡ! ಭವಿಷ್ಯ ನುಡಿದ ಶೋಯೆಬ್ ಅಖ್ತರ್

| Updated By: ಪೃಥ್ವಿಶಂಕರ

Updated on: Sep 17, 2022 | 3:51 PM

T20 World Cup 2022: ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳೊಂದಿಗೆ ಪಾಕಿಸ್ತಾನ ತಂಡವನ್ನು ಸೇರಿಸಲಾಗಿದೆ. ಅದರ ಮೊದಲ ಪಂದ್ಯ ಅಕ್ಟೋಬರ್ 23 ರಂದು ಭಾರತದ ವಿರುದ್ಧ ನಡೆಯಲಿದೆ.

T20 World Cup 2022: ಮೊದಲ ಸುತ್ತಿನಲ್ಲೇ ಹೊರ ಬೀಳಲಿದೆ ಪಾಕ್ ತಂಡ! ಭವಿಷ್ಯ ನುಡಿದ ಶೋಯೆಬ್ ಅಖ್ತರ್
ಬಾಬರ್- ರಿಜ್ವಾನ್
Follow us on

ಆಗಿದ್ದು ಆಗಿ ಹೋಯಿತು, ಮುಂದಾಗುವುದರ ಬಗ್ಗೆ ಗಮನಹರಿಸೋಣ ಎಂಬ ಮಾತಿನ ಅರಿವು ಪಾಕ್ ತಂಡದ ಅಭಿಮಾನಿಗಳಿಗೆ ಹಾಗೂ ಆ ತಂಡದ ಮಾಜಿ ಕ್ರಿಕೆಟಿಗರಿಗೆ ಇಲ್ಲವೆಂದು ತೋರುತ್ತದೆ. ಏಷ್ಯಾಕಪ್‌ ಫೈನಲ್‌ನಲ್ಲಿ ಪಾಕಿಸ್ತಾನ ತಂಡ (Pakistan cricket team) ಸೋತಾಗಿನಿಂದ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಹಾಲಿ ತಂಡದ ಆಟಗಾರರನ್ನು ಹಾಗೂ ಆಯ್ಕೆ ಮಂಡಳಿಯನ್ನು ಟೀಕಿಸಲು ಆರಂಭಿಸಿದ್ದಾರೆ. ತಂಡ ಆಡುವ ರೀತಿಯಿಂದ ಹಿಡಿದು ತಂಡದಲ್ಲಿ ಆಯ್ಕೆಯಾದ ಮತ್ತು ಕೈಬಿಡಲಾದ ಆಟಗಾರರವರೆಗೂ ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಇಷ್ಟು ಸಾಲದೆಂಬಂತೆ ಟಿ20 ವಿಶ್ವಕಪ್‌ಗೆ ತಂಡದ ಆಯ್ಕೆಯ ನಂತರ, ಮತ್ತೊಮ್ಮೆ ಅನೇಕ ಮಾಜಿ ಕ್ರಿಕೆಟಿಗರು ತಮ್ಮ ಅಸಮಾಧಾನ ಮತ್ತು ಕೋಪವನ್ನು ಹೊರಹಾಕುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ (Shoaib Akhtar) ಕೂಡ, ಟಿ20 ವಿಶ್ವಕಪ್​ನಿಂದ ಪಾಕ್ ತಂಡ ಶೀಘ್ರದಲ್ಲೇ ಹೊರಬೀಳಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 14, ಗುರುವಾರದಂದು ಪಾಕಿಸ್ತಾನ ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಿತ್ತು. ಏಷ್ಯಾಕಪ್‌ನಲ್ಲಿ ತಂಡದ ಭಾಗವಾಗಿದ್ದ ಬಹುತೇಕ ಎಲ್ಲಾ ಆಟಗಾರರು ಚುಟುಕು ಸಮರಕ್ಕೆ ಆಯ್ಕೆಯಾಗಿದ್ದರು. ಫಖರ್ ಜಮಾನ್, ಶಹನವಾಜ್ ದಹಾನಿ ಮತ್ತು ಹಸನ್ ಅಲಿ ಅವರನ್ನು ತಂಡದಿಂದ ಕೈಬಿಡಲಾಗಿದ್ದು, ಶಾನ್ ಮಸೂದ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಹೀಗಾಗಿ ತಂಡದ ಆಯ್ಕೆಯ ಇಂತಹ ಕೆಲವು ನಿರ್ಧಾರಗಳಿಂದ ಮಾಜಿ ಕ್ರಿಕೆಟಿಗರು ಅಸಮಾಧಾನಗೊಂಡಿದ್ದಾರೆ.

ಮೊದಲ ಸುತ್ತಿನಲ್ಲೇ ಪಾಕಿಸ್ತಾನ ಹೊರಬೀಳಲಿದೆಯೇ?

ತಮ್ಮ ಅಸಮಾಧಾನವನ್ನು ಹೊರಹಾಕುತ್ತಿರುವ ಮಾಜಿ ಕ್ರಿಕೆಟಿಗರಲ್ಲಿ ಶೋಯೆಬ್ ಅಖ್ತರ್ ಕೂಡ ಒಬ್ಬರಾಗಿದ್ದಾರೆ. ಬಿರುಸಿನ ವೇಗದ ಮಾಲೀಕರಾದ ಮಾಜಿ ವೇಗದ ಬೌಲರ್ ಅಖ್ತರ್ ಅವರು ತಂಡದ ಆಯ್ಕೆಯನ್ನು ಪ್ರಶ್ನಿಸಿದ್ದು, ತಂಡವು ಮೊದಲ ಸುತ್ತಿನಲ್ಲೇ ಹೊರಬೀಳುವ ಭೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿರುವುದು ಹೀಗೆ.

ನೀವು ಇಂತಹ ತಂಡವನ್ನು ಆಯ್ಕೆ ಮಾಡಿ, ಆಸ್ಟ್ರೇಲಿಯಾದಲ್ಲಿ ಕಪ್ ಜಯಸುವುದು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ. ಆಸೀಸ್ ನೆಲದ ಪಿಚ್​ಗಳು ಸ್ವಿಂಗ್ ಹಾಗೂ ಬೌನ್ಸರ್​ಗೆ ಹೆಸರುವಾಸಿಯಾಗಿವೆ. ಅದಕ್ಕೆ ಸೂಕ್ತವಾದ ಬೌಲಿಂಗ್ ವಿಭಾಗವನ್ನು ಆಯ್ಕೆ ಮಾಡಬೇಕಿತ್ತು. ಅಲ್ಲದೆ ಪಾಕ್ ತಂಡ ಆಯ್ಕೆ ಮಾಡಿರುವ ತಂಡದ ಮಧ್ಯಮ ಕ್ರಮಾಂಕವನ್ನು ನೋಡಿದಾಗ ಪಾಕಿಸ್ತಾನ ಮೊದಲ ಸುತ್ತಿನಲ್ಲೇ ಹೊರಬೀಳಬಹುದು ಎಂಬ ಭಯ ನನಗಿದೆ.

ಪಾಕಿಸ್ತಾನವನ್ನು ಸೂಪರ್-12 ರಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದಂತಹ ತಂಡಗಳ ಗುಂಪಿನಲ್ಲಿ ಇರಿಸಲಾಗಿದೆ. ಅಲ್ಲದೆ ಪಾಕ್ ತಂಡದ ಮೊದಲ ಪಂದ್ಯವು ಟೀಮ್ ಇಂಡಿಯಾದೊಂದಿಗೆ ಇದೆ. ಈ ಪಂದ್ಯ ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಅಲ್ಲದೆ ಕಳೆದ ವರ್ಷ ನಡೆದ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್‌ಗೆ ಪ್ರಯಾಣಿಸಿತ್ತು ಎಂಬುದನ್ನು ಇಲ್ಲಿ ನೆನಪಿಸಬೇಕಾದ ವಿಚಾರವಾಗಿದೆ.

ಬಾಬರ್ ಒಬ್ಬರೇ ಓಪನರ್ ಆಗಿರಬೇಕಾ?

ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಜೋಡಿ ನಿರಂತರವಾಗಿ ಫ್ರೀಜ್ ಆಗಿರುವ ಆರಂಭಿಕ ಸ್ಲಾಟ್ ಬಗ್ಗೆ ಅಖ್ತರ್ ಅಸಮಾಧಾನ ಹೊರಹಾಕಿದ್ದಾರೆ. ಈ ಜೋಡಿ ಖಂಡಿತವಾಗಿಯೂ ಸಾಕಷ್ಟು ರನ್ ಗಳಿಸಿದೆ, ಆದರೆ ನಿಧಾನಗತಿಯ ಬ್ಯಾಟಿಂಗ್‌ನಿಂದಾಗಿ ಗುರಿ ತಲುಪಿರುವುದು ಟಿ20 ಕ್ರಿಕೆಟ್​ಗೆ ಸೂಕ್ತವಲ್ಲದ ಆಟವಾಗಿದೆ ಎಂಬುದು ಅಖ್ತರ್ ವಾದವಾಗಿದೆ. ಅದೇ ಸಮಯದಲ್ಲಿ, ಫಖರ್ ಜಮಾನ್ ಅವರನ್ನು ಹೊರಗಿಟ್ಟಿದ್ದಕ್ಕಾಗಿ ಅಖ್ತರ್ ಕೂಡ ಕೋಪಗೊಂಡಿದ್ದಾರೆ. ಮೊದಲ 6 ಓವರ್‌ಗಳನ್ನು ಫಖರ್ ಜಮಾನ್‌ಗೆ ನೀಡಿ ಎಂದು ನಾನು ಹಲವು ಬಾರಿ ಹೇಳಿದ್ದೇನೆ ಆದರೆ ನೀವು ಬಾಬರ್ ಆಜಮ್ ಅವರನ್ನು ಮಾತ್ರ ಆರಂಭಿಕರಾಗಿ ಕಣಕ್ಕಿಳಿಸುತ್ತಿದ್ದೀರಿ. ಮುಖ್ಯ ಆಯ್ಕೆಗಾರರೇ ಸರಾಸರಿಯಾಗಿದ್ದಾಗ, ಅವರ ನಿರ್ಧಾರಗಳು ಸಹ ಸರಾಸರಿಯಾಗಿರುತ್ತವೆ ಎಂದು ಅಖ್ತರ್ ಆಯ್ಕೆ ಮಂಡಳಿಯನ್ನು ಲೇವಡಿ ಮಾಡಿದ್ದಾರೆ.