‘ದಯವಿಟ್ಟು ನಿಲ್ಲಿಸಿ’; ಕೇರಳದಲ್ಲಿ ಬೀದಿನಾಯಿಗಳ ಸಾಮೂಹಿಕ ಹತ್ಯೆಗೆ ಮರುಗಿದ ರಾಹುಲ್- ಧವನ್
Kerala Stray Dogs: ಕೇರಳದಲ್ಲಿ ನಾಯಿಗಳನ್ನು ಬರ್ಬರವಾಗಿ ಕೊಲ್ಲಲಾಗುತ್ತಿದೆ. ಇಂತಹ ಕ್ರಮಗಳನ್ನು ಮರುಪರಿಶೀಲಿಸಬೇಕು. ಈ ಕ್ರೂರ ಹತ್ಯೆಗಳು ನಿಲ್ಲಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಕೇರಳ ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿ ಹೆಚ್ಚಾಗುತ್ತಿದೆ. ಏಕಾಂಗಿಯಾಗಿ ಪ್ರಯಾಣಿಸುವವರ ಮೇಲೆ ನಾಯಿಗಳು ಭೀಕರವಾಗಿ ದಾಳಿ ಮಾಡಿ ಗಾಯಗೊಳಿಸುತ್ತಿವೆ. ವಯಸ್ಕರು ಮತ್ತು ಮಕ್ಕಳ ಮೇಲೆ ಹೆಚ್ಚಾಗಿ ದಾಳಿ ಮಾಡುವ ನಾಯಿಗಳು ಅವರನ್ನು ಗಂಭೀರವಾಗಿ ಗಾಯಗೊಳ್ಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತವೂ ನಾಯಿಗಳ ಹತ್ಯೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ಟಿಲೇರಿದೆ ಎಂದು ಇತ್ತಿಚೆಗೆ ವರದಿಯಾಗಿದೆ. ಈ ಕುರಿತು ಅಂತಿಮ ನಿರ್ಧಾರ ಇನ್ನಷ್ಟೇ ಬರಬೇಕಿದ್ದರೂ ಕೇರಳದ ಕೆಲವೆಡೆ ಬೀದಿ ನಾಯಿಗಳನ್ನು ಅಮಾನುಷವಾಗಿ ಸಾಯಿಸಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಸಾಮೂಹಿಕವಾಗಿ ನಾಯಿಗಳನ್ನು ಸಾಯಿಸುತ್ತಿರುವುದು ವರದಿಯಾಗಿದೆ.
ನಾಯಿಗಳ ಹತ್ಯೆಗೆ ಸಂಬಂಧಿಸಿದ ಸುದ್ದಿಗಳು, ಫೋಟೋಗಳು ಮತ್ತು ವೀಡಿಯೊಗಳು ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ರಾಷ್ಟ್ರೀಯ ಮಾಧ್ಯಮಗಳಲ್ಲೂ ಇವುಗಳಿಗೆ ಸಂಬಂಧಿಸಿದ ಲೇಖನಗಳು ಬರುತ್ತಿವೆ. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ (ಶಿಖರ್ ಧವನ್) ಕೇರಳದಲ್ಲಿ ಸಾಮೂಹಿಕವಾಗಿ ಶ್ವಾನ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇದು ಭೀಕರವಾಗಿದೆ- ಧವನ್
ನಾಯಿಗಳ ಸಾಮೂಹಿಕ ಹತ್ಯೆಯನ್ನು ಟ್ವಿಟರ್ನಲ್ಲಿ ಖಂಡಿಸಿರುವ ಧವನ್, ಇದು ಭೀಕರವಾಗಿದೆ. ಕೇರಳದಲ್ಲಿ ನಾಯಿಗಳನ್ನು ಬರ್ಬರವಾಗಿ ಕೊಲ್ಲಲಾಗುತ್ತಿದೆ. ಇಂತಹ ಕ್ರಮಗಳನ್ನು ಮರುಪರಿಶೀಲಿಸಬೇಕು. ಈ ಕ್ರೂರ ಹತ್ಯೆಗಳು ನಿಲ್ಲಬೇಕು ಎಂದು ಟ್ವೀಟ್ ಮಾಡಿದ್ದಾರೆ. ಈಗ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಪಾರ ಸಂಖ್ಯೆಯ ನಾಯಿಗಳನ್ನು ಕೊಲ್ಲಲಾಗುತ್ತಿದೆ ಎಂಬ ಸುದ್ದಿಗೆ ಸಹಜವಾಗಿಯೇ ಪ್ರಾಣಿ ಪ್ರೇಮಿ ಶಿಖರ್ ಪ್ರತಿಕ್ರಿಯಿಸಿದ್ದಾರೆ. ಆದರೆ ನೆಟಿಜನ್‌ಗಳು ಧವನ್ ಟ್ವೀಟ್‌ಗೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡುತ್ತಿರುವ ಫೋಟೋಗಳು ಮತ್ತು ವಿಡಿಯೋಗಳನ್ನು ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ. ಜೊತೆಗೆ ನಾಯತಿಗಳು ಈ ರೀತಿ ದಾಳಿ ಮಾಡುತ್ತಿವೆ. ಹೀಗಾಗಿ ಆತ್ಮರಕ್ಷಣೆಗಾಗಿ ನಾಯಿಗಳನ್ನು ಸಾಯಿಸಲಾಗುತ್ತಿದೆ ಎಂದು ಕೆಲವರು ಪ್ರತ್ಯುತ್ತರ ನೀಡಿದ್ದಾರೆ.
This is so horrifying that mass killing of dogs in #kerala is taking place. I would request to reconsider such moves and put an end to these brutal killings.
— Shikhar Dhawan (@SDhawan25) September 16, 2022
ಹತ್ಯೆ ನಿಲ್ಲಿಸಿ ಎಂದ ರಾಹುಲ್
ಕೇರಳದಲ್ಲಿ ಬೀದಿನಾಯಿಗಳನ್ನು ಸಾಮೂಹಿಕವಾಗಿ ಕೊಲ್ಲುತ್ತಿರುವ ಬಗ್ಗೆ ಭಾರತ ಕ್ರಿಕೆಟಿಗ ಕೆಎಲ್ ರಾಹುಲ್ ಕೂಡ ಪ್ರತಿಕ್ರಿಯಿಸಿದ್ದು, ಬೀದಿ ನಾಯಿಗಳ ಸಾಮೂಹಿಕ ಹತ್ಯೆಗೆ ಕಡಿವಾಣ ಹಾಕಬೇಕು ಎಂಬ ಅಭಿಯಾನಕ್ಕೆ ಕೆಎಲ್ ರಾಹುಲ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ರಾಹುಲ್ ಪ್ರತಿಕ್ರಿಯೆ ನೀಡಿದ್ದು, ಬೀದಿ ನಾಯಿಗಳ ಆರೈಕೆಗಾಗಿ ಕೆಲಸ ಮಾಡುವ ‘ವಾಯ್ಸ್ ಆಫ್ ಸ್ಟ್ರೇ ಡಾಗ್ಸ್’ ಪೋಸ್ಟರ್ ಅನ್ನು ರಾಹುಲ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಕೇರಳದಲ್ಲಿ ಮತ್ತೆ ಬೀದಿ ನಾಯಿಗಳ ಸಾಮೂಹಿಕ ಹತ್ಯೆ ಶುರುವಾಗಿದೆ ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ. ಈ ಪೋಸ್ಟರ್ ಹಂಚಿಕೊಂಡಿರುವ ರಾಹುಲ್, ‘ದಯವಿಟ್ಟು ನಿಲ್ಲಿಸಿ’ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
ಏತನ್ಮಧ್ಯೆ, ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿಗೆ ತುತ್ತಾದ ಜನರ ಸಮಸ್ಯೆಯನ್ನು ಹೈಕೋರ್ಟ್ ಇಂದು ಪರಿಶೀಲಿಸಲಿದ್ದು, ಬೀದಿ ನಾಯಿಗಳ ದಾಳಿಯಿಂದ ನಾಗರಿಕರನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದು ವಿಭಾಗೀಯ ಪೀಠ ಕಳೆದ ದಿನ ಸ್ಪಷ್ಟಪಡಿಸಿತ್ತು. ಆಕ್ರಮಣಕಾರಿ ನಾಯಿಗಳನ್ನು ಗುರುತಿಸಿ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು ಎಂದೂ ಹೈಕೋರ್ಟ್ ಸೂಚಿಸಿತ್ತು.