T20 Cricket: ಇಂಪ್ಯಾಕ್ಟ್ ಪ್ಲೇಯರ್: ಟಿ20 ಕ್ರಿಕೆಟ್‌ನಲ್ಲಿ ಹೊಸ ನಿಯಮ..!
Impact Players Rules: ಸಾಮಾನ್ಯವಾಗಿ ಫುಟ್‌ಬಾಲ್, ರಗ್ಬಿ, ಬಾಸ್ಕೆಟ್‌ಬಾಲ್ ಮತ್ತು ಬೇಸ್‌ಬಾಲ್‌ನಂತಹ ಇತರ ಕ್ರೀಡೆಗಳಲ್ಲಿ ಅನುಮತಿಸಲಾಗುವ ಸಬ್ಸ್ಟ್ಯೂಟ್ ಆಯ್ಕೆಯನ್ನೇ ಇಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅಥವಾ ಸೂಪರ್ ಸಬ್ ಎಂದು ಕರೆಯಲಾಗಿದೆ.
ಅಕ್ಟೋಬರ್‌ನಲ್ಲಿ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಪರಿಚಯಿಸಲು ಭಾರತೀಯ ಕ್ರಿಕೆಟ್ ಮಂಡಳಿ ( ಬಿಸಿಸಿಐ ) ನಿರ್ಧರಿಸಿದೆ. ಈ ಹಿಂದೆ 2005 ರಲ್ಲಿ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ( ಐಸಿಸಿ ) ಏಕದಿನ ಕ್ರಿಕೆಟ್‌ನಲ್ಲಿ ಸೂಪರ್ ಸಬ್ ನಿಯಮವನ್ನು ಪ್ರಯೋಗಿಸಿತ್ತು. ಆದರೆ ಆ ನಿಯಮವನ್ನು ಒಂದು ವರ್ಷದ ಬಳಿಕ ತೆಗೆದು ಹಾಕಲಾಯಿತು. ಇದೀಗ ಇದೇ ಮಾದರಿಯಲ್ಲೇ ಹೊಸ ನಿಯಮವನ್ನು ಟಿ20 ಕ್ರಿಕೆಟ್‌ನಲ್ಲಿ ಪ್ರಯೋಗಿಸಲು ಬಿಸಿಸಿಐ ಮುಂದಾಗಿರುವುದು ವಿಶೇಷ.
ಏನಿದು ಇಂಪ್ಯಾಕ್ಟ್ ಪ್ಲೇಯರ್ ಅಥವಾ ಸೂಪರ್ ಸಬ್ ನಿಯಮ? ಸಾಮಾನ್ಯವಾಗಿ ಫುಟ್‌ಬಾಲ್, ರಗ್ಬಿ, ಬಾಸ್ಕೆಟ್‌ಬಾಲ್ ಮತ್ತು ಬೇಸ್‌ಬಾಲ್‌ನಂತಹ ಇತರ ಕ್ರೀಡೆಗಳಲ್ಲಿ ಅನುಮತಿಸಲಾಗುವ ಸಬ್ಸ್ಟ್ಯೂಟ್ ಆಯ್ಕೆಯನ್ನೇ ಇಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಅಥವಾ ಸೂಪರ್ ಸಬ್ ಎಂದು ಕರೆಯಲಾಗಿದೆ. ಅಂದರೆ ಆಟದ ನಡುವೆ ಬದಲಿ ಆಟಗಾರನನ್ನು ಕಣಕ್ಕಿಳಿಸುವ ಆಯ್ಕೆ.
ಈ ಆಯ್ಕೆಯ ಮೂಲಕ ಎರಡೂ ತಂಡಗಳು ತಮ್ಮ ತಂತ್ರ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪ್ಲೇಯಿಂಗ್ ಇಲೆವೆನ್ನಿಂದ ಒಬ್ಬ ಆಟಗಾರನನ್ನು ಬದಲಿಸಲು ಅವಕಾಶವನ್ನು ನೀಡಲಾಗುತ್ತದೆ. ಆದರೆ ಈ ನಿಯಮವನ್ನು ಬಳಸಲೇಬೇಕೆಂಬ ನಿಯಮವಿಲ್ಲ. ಅಂದರೆ ಇಂತಹದೊಂದು ಆಯ್ಕೆಯನ್ನು ಪ್ರಯೋಗಿಸುವುದು ತಂಡಕ್ಕೆ ಬಿಟ್ಟ ವಿಷಯ.
ಇಂಪ್ಯಾಕ್ಟ್ ಪ್ಲೇಯರ್ನನ್ನು ಕಣಕ್ಕಿಳಿಸುವುದು ಹೇಗೆ? ಈ ಹೊಸ ನಿಯಮದ ಪ್ರಕಾರ, ಪ್ರತಿ ತಂಡವು ಪ್ಲೇಯಿಂಗ್ ಇಲೆವೆನ್ ಜೊತೆಗೆ ಹೆಚ್ಚುವರಿ 4 ಆಟಗಾರರ ಹೆಸರನ್ನು ನೀಡಬೇಕಾಗುತ್ತದೆ. ಅಂದರೆ ಟಾಸ್ ಸಮಯದಲ್ಲೇ ಒಟ್ಟು 11+4 ಆಟಗಾರರ ಹೆಸರನ್ನು ಘೋಷಿಸಬೇಕು. ಪಂದ್ಯದ ಆರಂಭದ ನಂತರ ತಂಡಗಳು ಈ 4 ಆಟಗಾರರಲ್ಲಿ ಯಾರನ್ನಾದರೂ ಪ್ಲೇಯಿಂಗ್ ಇಲೆವೆನ್ನಲ್ಲಿ ಸೇರಿಸಿಕೊಳ್ಳಬಹುದು. ಆದರೆ ಇಲ್ಲೂ ಕೂಡ ಬದಲಾವಣೆಗೆ ಗಡುವು ವಿಧಿಸಲಾಗಿದೆ. ಅಂದರೆ ಇನಿಂಗ್ಸ್ನ 14ನೇ ಓವರ್ಗೂ ಮೊದಲು ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು.
ಇನ್ನು ಬದಲಿ ಆಟಗಾರನಾಗಿ ಪ್ಲೇಯಿಂಗ್ ಇಲೆವೆನ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ನನ್ನು ಕಣಕ್ಕಿಳಿಸಿದರೆ, ಒಬ್ಬ ಆಟಗಾರ ಹೊರಹೋಗಬೇಕಾಗುತ್ತದೆ. ಆದರೆ ಹೊರಹೋದ ಆಟಗಾರ ಆ ಬಳಿಕ ಯಾವುದೇ ರೂಪದಲ್ಲಿ ಪಂದ್ಯದ ಭಾಗವಾಗಲು ಸಾಧ್ಯವಾಗುವುದಿಲ್ಲ. ಅಂದರೆ ಬದಲಿ ಫೀಲ್ಡರ್, ರನ್ನರ್ ಆಗಿಯೂ ಕೂಡ ಕಣಕ್ಕಿಳಿಯಲು ಅವಕಾಶ ಇರುವುದಿಲ್ಲ. ಹಾಗೆಯೇ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯ ಮೂಲಕ ಓವರ್‌ನ ಮಧ್ಯದಲ್ಲಿ ಬದಲಿ ಆಟಗಾರನನ್ನು ಕಣಕ್ಕಿಳಿಸಲು ಅವಕಾಶವಿಲ್ಲ. ಒಂದು ವೇಳೆ ಆಟಗಾರನೊಬ್ಬ ಗಾಯಗೊಂಡರೆ ಈ ಆಯ್ಕೆಯನ್ನು ಬಳಸಿಕೊಳ್ಳಬಹುದು. ಆದರೆ ಓವರ್‌ನ ನಂತರ ಅಥವಾ ಇನ್ನಿಂಗ್ಸ್ ಮುಗಿದ ನಂತರವಷ್ಟೇ ಕಣಕ್ಕಿಳಿಸಬೇಕಾಗುತ್ತದೆ.
ಬ್ಯಾಟಿಂಗ್ ತಂಡವು, ವಿಕೆಟ್ ಪತನದ ಸಮಯದಲ್ಲಿ ಅಥವಾ ಇನ್ನಿಂಗ್ಸ್ ವಿರಾಮದ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಅನ್ನು ಪರಿಚಯಿಸಬಹುದು. ಒಂದು ವೇಳೆ ಫೀಲ್ಡಿಂಗ್ ತಂಡವು ಬೌಲರ್ ಅನ್ನು ಕಣಕ್ಕಿಳಿಸಲು ಬಯಸಿದರೆ, ಸಂಪೂರ್ಣ ಓವರ್ ಎಸೆಯುವ ಅವಕಾಶ ಕೂಡ ಇರಲಿದೆ. ಅಂದರೆ ಒಂದಕ್ಕಿಂತ ಹೆಚ್ಚು ಓವರ್‌ಗಳನ್ನು ಬೌಲ್ ಮಾಡದಿದ್ದರೆ, ಇಂಪ್ಯಾಕ್ಟ್ ಪ್ಲೇಯರ್ ಆಗಿ ಬರುವ ಆಟಗಾರನಿಗೆ ಪೂರ್ಣ 4 ಓವರ್‌ಗಳನ್ನು ಬೌಲ್ ಮಾಡಲು ಅನುಮತಿಸಲಾಗುತ್ತದೆ.
ಇದಾಗ್ಯೂ ಕಾರಣಾಂತರಗಳಿಂದ 10 ಓವರ್ಗಳಿಗೆ ಸೀಮಿತವಾಗಿರುವ ಪಂದ್ಯಗಳಿಗೆ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯನ್ನು ನೀಡಲಾಗುವುದಿಲ್ಲ. ಅಂದರೆ ಮಳೆಯ ಅಥವಾ ಇನ್ನಿತರ ಕಾರಣಗಳಿಂದ 10 ಓವರ್ ಅಥವಾ ಅದಕ್ಕಿಂತ ಕಡಿಮೆ ಓವರ್ಗಳ ಪಂದ್ಯ ನಡೆಸಲಾಗುತ್ತಿದ್ದರೆ ಆ ವೇಳೆ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆ ಇರುವುದಿಲ್ಲ.
ಅಕ್ಟೋಬರ್‌ನಲ್ಲಿ ಶುರುವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ಪರಿಚಯಿಸಲು ಬಿಸಿಸಿಐ ನಿರ್ಧರಿಸಿದೆ. ಈ ಪ್ರಯೋಗ ಯಶಸ್ವಿಯಾದರೆ ಐಪಿಎಲ್ನಲ್ಳೂ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಗೆ ಅವಕಾಶ ಸಿಗುವ ಸಾಧ್ಯತೆಯಿದೆ.