‘ಯಾವುದೇ ಕೋಚ್ PCB ಜೊತೆ ಕೆಲಸ ಮಾಡಲು ಬಯಸುವುದಿಲ್ಲ’; ಪಾಕ್ ಮಾಜಿ ನಾಯಕನ ವಿವಾದಾತ್ಮಕ ಹೇಳಿಕೆ!

|

Updated on: Feb 03, 2024 | 3:56 PM

Pakistan Cricket Board: ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಆಘಾತಕ್ಕಾರಿ ಹೇಳಿಕೆ ನೀಡಿದ್ದು, ವಿದೇಶಿ ಕೋಚ್ ಅನ್ನು ಬಿಟ್ಟುಬಿಡಿ, ಪಾಕಿಸ್ತಾನದ ಕೋಚ್ ಕೂಡ ಪಾಕಿಸ್ತಾನ ಮಂಡಳಿಯೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

‘ಯಾವುದೇ ಕೋಚ್ PCB ಜೊತೆ ಕೆಲಸ ಮಾಡಲು ಬಯಸುವುದಿಲ್ಲ; ಪಾಕ್ ಮಾಜಿ ನಾಯಕನ ವಿವಾದಾತ್ಮಕ ಹೇಳಿಕೆ!
ಮಿಸ್ಬಾ ಉಲ್ ಹಕ್
Follow us on

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (Pakistan Cricket Board) ಪರಿಸ್ಥಿತಿ ಹದಗೆಟ್ಟಿದೆ. ಪಾಕಿಸ್ತಾನ ತಂಡದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ನಿರಂತರ ವಿವಾದಗಳು ನಡೆಯುತ್ತಲೇ ಇವೆ. 2023 ರ ಐಸಿಸಿ ವಿಶ್ವಕಪ್‌ನಲ್ಲಿ (ODI World Cup 2023) ಪಾಕಿಸ್ತಾನ ಏಕಪಕ್ಷೀಯ ಸೋಲನ್ನು ಅನುಭವಿಸಿದಾಗಿನಿಂದ, ಪಾಕಿಸ್ತಾನದಲ್ಲಿ ಬದಲಾವಣೆಯ ಗಾಳಿ ಪ್ರಾರಂಭವಾಗಿದೆ. ಅದರಂತೆ ತಂಡದ ನಾಯಕ ಸೇರಿದಂತೆ ಕೋಚ್​ಗಳು, ಮಂಡಳಿ ಅಧ್ಯಕ್ಷರು ಸಹ ಬದಲಾದರು. ಆದರೂ ಸಹ ತಂಡದ ಪ್ರದರ್ಶನದಲ್ಲಿ ಮಾತ್ರ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲ. ಸತತ ಸೋಲುಗಳಿಂದ ಕಂಗೆಟ್ಟಿರುವ ಪಾಕ್ ತಂಡದ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಈ ನಡುವೆ ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ (Misbah-ul-Haq) ಆಘಾತಕ್ಕಾರಿ ಹೇಳಿಕೆ ನೀಡಿದ್ದು, ವಿದೇಶಿ ಕೋಚ್ ಅನ್ನು ಬಿಟ್ಟುಬಿಡಿ, ಪಾಕಿಸ್ತಾನದ ಕೋಚ್ ಕೂಡ ಪಾಕಿಸ್ತಾನ ಮಂಡಳಿಯೊಂದಿಗೆ ಕೆಲಸ ಮಾಡಲು ಬಯಸುವುದಿಲ್ಲ ಎಂದು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ದೀರ್ಘಾವಧಿಯ ಯೋಜನೆ ಅಗತ್ಯವಿದೆ

ಪಾಕಿಸ್ತಾನ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಮಿಸ್ಬಾ ಕಳವಳ ವ್ಯಕ್ತಪಡಿಸಿದ್ದು, ದೀರ್ಘಾವಧಿಯನ್ನು ಪರಿಗಣಿಸಿ ಪಿಸಿಬಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಅಂತಹ ಎಲ್ಲಾ ನಿರ್ಧಾರಗಳನ್ನು ತಕ್ಷಣ ತೆಗೆದುಕೊಳ್ಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಭವಿಷ್ಯಕ್ಕೆ ಅಪಾಯ ಎದುರಾಗಿದೆ. ನಮ್ಮ ಮಂಡಳಿಯಲ್ಲಿ ಆಟಗಾರರು, ನಿರ್ವಹಣೆ ಮತ್ತು ಆಯ್ಕೆಗಾರರನ್ನು ನಾವು ಸಿದ್ಧಪಡಿಸಬೇಕು. ಇದಕ್ಕಾಗಿ ನಾವು ದೀರ್ಘಾವಧಿಯ ಯೋಜನೆಗಳನ್ನು ಮಾಡಬೇಕಾಗಿದೆ. ಮಂಡಳಿಯಲ್ಲಿ ಒಂದರ ಹಿಂದೆ ಒಂದರಂತೆ ಹಲವು ಬದಲಾವಣೆಗಳು ಕಂಡುಬರುತ್ತಿದ್ದು, ಇದು ತಂಡಕ್ಕೆ ಒಳ್ಳೆಯದಲ್ಲ.

ಯಾವುದೇ ಬದಲಾವಣೆ ಸಾಧ್ಯವಿಲ್ಲ

ನಮ್ಮ ತಂಡವನ್ನು ಸುಧಾರಿಸಲು ನಾವು ಇತರ ತಂಡಗಳನ್ನು ನೋಡಿ ಕಲಿಯಬೇಕಾಗಿದೆ. ನಾವು ಈ ಪುನರ್ರಚನೆ ವ್ಯವಸ್ಥೆಯನ್ನು ಬಿಡದ ಹೊರತು, ಪಾಕಿಸ್ತಾನ ತಂಡದಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ. ಇದು 2024ರ ಟಿ20 ವಿಶ್ವಕಪ್‌ ಮೇಲೆ ನೇರ ಪರಿಣಾಮ ಬೀರಲಿದೆ. ಪಾಕಿಸ್ತಾನದ ಪರಿಸ್ಥಿತಿಯು ವೆಸ್ಟ್ ಇಂಡೀಸ್‌ನಂತೆಯೇ ಮಾರ್ಪಟ್ಟಿದೆ, ಆದರೆ ನಾವು ಉತ್ತಮವಾಗಬೇಕಾಗಿದೆ. ಆಗ ಮಾತ್ರ ನಾವು ಯಶಸ್ವಿ ತಂಡದೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಇದರಲ್ಲಿ ತಪ್ಪೇನಿಲ್ಲ

ಪಾಕಿಸ್ತಾನದಲ್ಲಿ ನಡೆಯುತ್ತಿರುವ NOC ವಿವಾದದ ಬಗ್ಗೆಯೂ ಹೇಳಿಕೆ ನೀಡಿರುವ ಮಿಸ್ಬಾ, ವಿಶ್ವಕಪ್ ನಂತರ ಅಥವಾ ಅದಕ್ಕೂ ಮುನ್ನ ಆಟಗಾರನಿಗೆ 2 ತಿಂಗಳ ವಿರಾಮ ಸಿಗುತ್ತಿದ್ದರೆ, ವಿದೇಶಿ ಲೀಗ್‌ಗಳಲ್ಲಿ ಆಡುವ ಮೂಲಕ ಹಣ ಗಳಿಸುವ ಅವಕಾಶವನ್ನು ಪಡೆಯಬೇಕು. ಇದರಲ್ಲಿ ತಪ್ಪೇನಿಲ್ಲ. ವಿಶ್ವಕಪ್ ಹತ್ತಿರವಿರುವಾಗ ಆಟಗಾರರು ಎನ್‌ಒಸಿ ಪಡೆಯಬಾರದು ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ