VIDEO: ಬೂಮ್ ಬೂಮ್ ಯಾರ್ಕರ್…ಪೋಪ್ ವಿಕೆಟ್ ಎಗರಿಸಿದ ಬುಮ್ರಾ
India vs England 2nd Test: ಭಾರತ ಮತ್ತು ಇಂಗ್ಲೆಂಡ್ ನಡುವಣ 2ನೇ ಟೆಸ್ಟ್ ಪಂದ್ಯವು ವಿಶಾಖಪಟ್ಟಣಂನಲ್ಲಿ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಇನ್ನು ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ ಅತ್ಯುತ್ತಮ ದಾಳಿ ಸಂಘಟಿಸುತ್ತಿದ್ದಾರೆ.
ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಮಿಂಚಿನ ಬೌಲಿಂಗ್ ಸಂಘಟಿಸುತ್ತಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಯಶಸ್ವಿ ಜೈಸ್ವಾಲ್ (209) ಅವರ ದ್ವಿಶತಕದ ನೆರವಿನಿಂದ 396 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಜಸ್ಪ್ರೀತ್ ಬುಮ್ರಾ ಬಿಗ್ ಶಾಕ್ ನೀಡಿದ್ದಾರೆ.
ಇಂಗ್ಲೆಂಡ್ ತಂಡದ ಆರಂಭಿಕ ಬೆನ್ ಡಕೆಟ್ (21) ವಿಕೆಟ್ ಪಡೆಯುವ ಮೂಲಕ ಕುಲ್ದೀಪ್ ಯಾದವ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದರ ಬೆನ್ನಲ್ಲೇ ಝಾಕ್ ಕ್ರಾಲಿ (76) ಅಕ್ಷರ್ ಪಟೇಲ್ಗೆ ವಿಕೆಟ್ ಒಪ್ಪಿಸಿದರು.
ಆ ಬಳಿಕ ಬಂದ ಒಲೀ ಪೋಪ್ ಭರ್ಜರಿ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರು. ಆದರೆ ಈ ಹಂತದಲ್ಲಿ ನಾಯಕ ರೋಹಿತ್ ಶರ್ಮಾ ಚೆಂಡನ್ನು ಬುಮ್ರಾ ಕೈಗಿತ್ತರು. ಈ ವೇಳೆ ಜೋ ರೂಟ್ (5) ವಿಕೆಟ್ ಪಡೆದು ಬುಮ್ರಾ ಟೀಮ್ ಇಂಡಿಯಾಗೆ 3ನೇ ಯಶಸ್ಸು ತಂದುಕೊಟ್ಟರು.
ಇದರ ಬೆನ್ನಲ್ಲೇ ಹೈದರಾಬಾದ್ ಟೆಸ್ಟ್ನಲ್ಲಿ 196 ರನ್ ಬಾರಿಸಿ ಮಿಂಚಿದ್ದ ಒಲೀ ಪೋಪ್ ಅವರನ್ನು ಕ್ಲೀನ್ ಬೌಲ್ಡ್ ಆದರು. ಬುಮ್ರಾ ಎಸೆದ ಯಾರ್ಕರ್ ಎಸೆತವನ್ನು ಗುರುತಿಸುವಷ್ಟರಲ್ಲಿ ಎರಡು ವಿಕೆಟ್ಗಳು ಎಗರಿದ್ದವು. ಇದೀಗ ಈ ಅದ್ಭುತ ಕ್ಲೀನ್ ಬೌಲ್ಡ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Timber Striker Alert 🚨
A Jasprit Bumrah special 🎯 🔥
Drop an emoji in the comments below 🔽 to describe that dismissal
Follow the match ▶️ https://t.co/X85JZGt0EV#TeamIndia | #INDvENG | @Jaspritbumrah93 | @IDFCFIRSTBank pic.twitter.com/U9mpYkYp6v
— BCCI (@BCCI) February 3, 2024
ಟೀಮ್ ಇಂಡಿಯಾ ಪರ ಯಶಸ್ವಿ ದ್ವಿಶತಕ:
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ 151 ಎಸೆತಗಳಲ್ಲಿ ಭರ್ಜರಿ ಶತಕ ಪೂರೈಸಿದ್ದರು. ಅಲ್ಲದೆ ಮೊದಲ ದಿನದಾಟದ ಅಂತ್ಯಕ್ಕೆ ಜೈಸ್ವಾಲ್ 179 ರನ್ ಬಾರಿಸಿ ಭಾರತ ತಂಡ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 336 ಕ್ಕೆ ತಂದು ನಿಲ್ಲಿಸಿದರು.
ಇನ್ನು ದ್ವಿತೀಯ ದಿನದಾಟದ ಆರಂಭದಲ್ಲೂ ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಅಶ್ವಿನ್ ಜೊತೆಗೂಡಿ 2ನೇ ದಿನದಾಟ ಆರಂಭಿಸಿದ ಜೈಸ್ವಾಲ್ 277 ಎಸೆತಗಳಲ್ಲಿ ಭರ್ಜರಿ ಡಬಲ್ ಸೆಂಚುರಿ ಸಿಡಿಸಿದರು. ಇದರ ನಡುವೆ ಅಶ್ವಿನ್ (20) ವಿಕೆಟ್ ಒಪ್ಪಿಸಿದರು.
ಹೀಗಾಗಿ ಯಶಸ್ವಿ ಜೈಸ್ವಾಲ್ ಬಿರುಸಿನ ಬ್ಯಾಟಿಂಗ್ಗೆ ಮುಂದಾದರು. ಪರಿಣಾಮ ಜೇಮ್ಸ್ ಅ್ಯಂಡರ್ಸನ್ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಯತ್ನಿಸಿ ಜಾನಿ ಬೈರ್ಸ್ಟೋವ್ಗೆ ಕ್ಯಾಚ್ ನೀಡಿದರು. ಇದರೊಂದಿಗೆ 290 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 19 ಫೋರ್ಗಳನ್ನೊಳಗೊಂಡ 209 ರನ್ಗಳ ಯಶಸ್ವಿ ಜೈಸ್ವಾಲ್ ಅವರ ಇನಿಂಗ್ಸ್ ಅಂತ್ಯಗೊಂಡಿತು.
ಆ ಬಳಿಕ ಬಂದ ಜಸ್ಪ್ರೀತ್ ಬುಮ್ರಾ 6 ರನ್ಗಳಿಸಿ ರೆಹಾನ್ ಅಹ್ಮದ್ ಎಸೆತದಲ್ಲಿ ಕ್ಯಾಚ್ ನೀಡಿದರು. ಇನ್ನು ಕೊನೆಯ ವಿಕೆಟ್ ಆಗಿ ಮುಖೇಶ್ ಕುಮಾರ್ (0) ಔಟಾದರು. ಈ ಮೂಲಕ ಟೀಮ್ ಇಂಡಿಯಾಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 396 ರನ್ ಕಲೆಹಾಕಿ ಆಲೌಟ್ ಆಗಿದೆ.
ಇದಕ್ಕುತ್ತರವಾಗಿ ಬ್ಯಾಟ್ ಬೀಸುತ್ತಿರುವ ಇಂಗ್ಲೆಂಡ್ ತಂಡವು 37 ಓವರ್ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 185 ರನ್ ಕಲೆಹಾಕಿದೆ. ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 10 ಓವರ್ಗಳಲ್ಲಿ 25 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ.
ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ರೋಹಿತ್ ಶರ್ಮಾ (ನಾಯಕ) , ಶುಭಮನ್ ಗಿಲ್ , ಶ್ರೇಯಸ್ ಅಯ್ಯರ್ , ರಜತ್ ಪಾಟಿದಾರ್ , ಶ್ರೀಕರ್ ಭರತ್ (ವಿಕೆಟ್ ಕೀಪರ್) , ರವಿಚಂದ್ರನ್ ಅಶ್ವಿನ್ , ಅಕ್ಷರ್ ಪಟೇಲ್ , ಕುಲದೀಪ್ ಯಾದವ್ , ಜಸ್ಪ್ರೀತ್ ಬುಮ್ರಾ , ಮುಖೇಶ್ ಕುಮಾರ್.
ಇದನ್ನೂ ಓದಿ: Yashasvi Jaiswal: ಜೈಸ್ವಾಲ್ ಅಬ್ಬರಕ್ಕೆ 60 ವರ್ಷಗಳ ಹಳೆಯ ದಾಖಲೆ ಧೂಳೀಪಟ
ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ , ಬೆನ್ ಡಕೆಟ್ , ಒಲ್ಲಿ ಪೋಪ್ , ಜೋ ರೂಟ್ , ಜಾನಿ ಬೈರ್‌ಸ್ಟೋ , ಬೆನ್ ಸ್ಟೋಕ್ಸ್ (ನಾಯಕ) , ಬೆನ್ ಫೋಕ್ಸ್ (ವಿಕೆಟ್ ಕೀಪರ್) , ರೆಹಾನ್ ಅಹ್ಮದ್ , ಟಾಮ್ ಹಾರ್ಟ್ಲಿ , ಶೋಯೆಬ್ ಬಶೀರ್ , ಜೇಮ್ಸ್ ಅ್ಯಂಡರ್ಸನ್.